ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಮುಗಿಯದ ಯುಜಿಡಿ ಕಾಮಗಾರಿ

ಕಾಮಗಾರಿ ಆರಂಭವಾಗಿ 7 ವರ್ಷ: ಯೋಜನೆಯ ಅಂದಾಜು ವೆಚ್ಚ ₹21.42 ಕೋಟಿ: ₹17.94 ಕೋಟಿಗೆ ಟೆಂಡರ್
Last Updated 26 ಜುಲೈ 2021, 2:52 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣದಲ್ಲಿ 2014ರಲ್ಲಿ ಆರಂಭವಾಗಿರುವ ಒಳ ಚರಂಡಿ ಕಾಮಗಾರಿ (ಯುಜಿಡಿ) ಯೋಜನೆ ಈವರೆಗೆ ಸಾರ್ವಜನಿಕರ ಉಪಯೋಗಕ್ಕೆ ಬಂದಿಲ್ಲ.

ಯೋಜನೆಯ ಅಂದಾಜು ವೆಚ್ಚ ₹21.42 ಕೋಟಿ. ಕೊಳಚೆ ನೀರು ಸಂಸ್ಕರಣಾ ಘಟಕ ಹೊರತುಪಡಿಸಿ ₹17.94 ಕೋಟಿಗೆ ಟೆಂಡರ್ ಕರೆಯಲಾಗಿತ್ತು. ಈವರೆಗೆ ಗುತ್ತಿಗೆದಾರರಿಗೆ ₹16.93 ಕೋಟಿ ಸಂದಾಯವಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಯುಜಿಡಿ ಕಾಮಗಾರಿ ಯೋಜನೆಯು ಪಟ್ಟಣದ ಎಲ್ಲ ಬಡಾವಣೆಗಳನ್ನು ಒಳಗೊಂಡಂತೆ 53 ಕಿಲೋ ಮೀಟರ್ ವ್ಯಾಪ್ತಿಯಿದ್ದು, ಪ್ರತಿ 30 ಮೀಟರ್‌ಗೆ ಒಂದು ಮ್ಯಾನ್ ಹೋಲ್ ನಿರ್ಮಿಸಬೇಕಿದೆ.

ಹಲವೆಡೆ ಪೈಪು ಜೋಡಿಸಲು ಕಂದಕ ತೆಗೆಯಲಾಗಿದ್ದರೂ ಜೋಡಿಸದೇ ಮುಚ್ಚಿಹೋಗಿವೆ. ಇದನ್ನು ಗುತ್ತಿಗೆದಾರರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ಸಾದಿಕ್ ದೂರಿದರು.

ವಾಸದ ಮನೆಗಳ ಸಂರಕ್ಷಿತ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಮಾಡುವ ಉದ್ದೇಶದಿಂದ ಈ ಮೊದಲೇ ಅಲ್ಲಿದ್ದ ಶೌಚ ಗುಂಡಿಗಳನ್ನು ಮುಚ್ಚಿದ್ದರಿಂದ ಅನಿವಾರ್ಯವಾಗಿ ನಿವಾಸಿಗಳು ಅರ್ಧಂಬರ್ಧ ಆಗಿರುವ ಒಳಚರಂಡಿಗೆ ಶೌಚ ಸಂಪರ್ಕ ಕಲ್ಪಿಸಿಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗಾಗಲೇ ಪೂರ್ಣಗೊಂಡಿರುವ ಪಟ್ಟಣದ 8 ಮತ್ತು 9ನೇ ವಾರ್ಡ್‌ಗಳ ರಾಯವಾರ ರಸ್ತೆಯಲ್ಲಿ ಈ ಒಳಚರಂಡಿಯ ಮ್ಯಾನ್ ಹೋಲ್‌ಗಳಿಗೆ ಮೇಲು ಮುಚ್ಚಳವನ್ನು ಮುಚ್ಚದೆ ಹಲವು ಬಾರಿ ಜನ- ಜಾನುವಾರುಗಳು ಬಿದ್ದಿರುವ ನಿದರ್ಶನಗಳಿವೆ.

13ನೇ ವಾರ್ಡ್‌ನ ತೋಟದ ಸಾಲಿನ ಬಡಾವಣೆಯಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ಮಳೆ ಬಂದಾಗ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ತೊಂದರೆಯಾಗುತ್ತಿದ್ದು, ಗುತ್ತಿಗೆದಾರರಿಗೆ ವಿಷಯ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರತ್ತಾರೆ. 19ನೇ ವಾರ್ಡ್‌ನ ಬಿಲ್ಲೆಪಾಳ್ಯಕ್ಕೆಕನಿಷ್ಠ ಪಕ್ಷ ಜಲ್ಲಿ ರಸ್ತೆಯನ್ನು ನಿರ್ಮಿಸಿ ಕೊಡುವಂತೆ ಕೇಳಿಕೊಂಡರೂ ಇದುವರೆಗೂ ಕ್ರಮಕೈಗೊಂಡಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿ ಗುರು.

ಪಟ್ಟಣದ ವ್ಯಾಪ್ತಿಯಲ್ಲಿರುವ ಹೆದ್ದಾರಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಮಾಡಲು ಯುಜಿಡಿ ಅಧಿಕಾರಿಗಳು ಹಾಗೂ ಹೆದ್ದಾರಿ ಪ್ರಾಧಿಕಾರದವರು ಒಬ್ಬರ ಮೇಲೊಬ್ಬರು ದೂರುತ್ತಿದ್ದಾರೆ. ಕಾಮಗಾರಿ ಮಾಡದೆ ಇರುವುದರಿಂದ ಮಳೆ ಬಂದಾಗ ರಸ್ತೆಯಲ್ಲಿ ನೀರು ಹರಿದು ಪಾದಚಾರಿಗಳು ಸಂಚರಿಸಲು ಪ್ರಯಾಸ ಪಡುವಂತಾಗಿದೆ. ಹಲವು ವೇಳೆ ಮಳೆ ನೀರು ತಗ್ಗಿನ ಪ್ರದೇಶಗಳಿಗೆ ನುಗ್ಗುವುದು ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಒಪ್ಪಂದದ ಪ್ರಕಾರ 2017ರಲ್ಲಿಯೇ ಕಾಮಗಾರಿ ಮುಗಿಸಬೇಕಾಗಿತ್ತಾದರೂ, ಇಂದಿಗೂ ಪಟ್ಟಣದ ಕೆಲವು ಭಾಗಗಳಲ್ಲಿ ಕಾಮಗಾರಿ ನಡೆಯುತ್ತಲೇ ಇದೆ. ಪಟ್ಟಣ ಪಂಚಾಯಿತಿಯಿಂದ ಕೊಳಚೆ ನೀರು ಸಂಸ್ಕರಣ ಘಟಕಕ್ಕೆ ಜಾಗವನ್ನು ಒದಗಿಸಿಕೊಡದಿರುವುದು ಕೂಡ ಕಾಮಗಾರಿ ಹಿನ್ನಡೆಯಾಗುವುದಕ್ಕೆ ಕಾರಣವಾಗಿದೆ ಎಂದು ಕೆಲವರು ದೂರುತ್ತಾರೆ.

ಯುಜಿಡಿ ಕಾಮಗಾರಿಯ ಬಗ್ಗೆ ಜನಪ್ರತಿನಿಧಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಅವರಿಗೆ ಬದ್ಧತೆ ಇದ್ದರೆ ಈ ಯೋಜನೆಯನ್ನು ತುರ್ತು ಮುಗಿಸಲು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅಂತಹ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲ ಎನ್ನುತ್ತಾರೆ ಪಟ್ಟಣನಿವಾಸಿಗಳು.

ಪಟ್ಟಣ ಪಂಚಾಯಿತಿಯ ಹೊಸ ಸಮಿತಿ ಅಸ್ತಿತ್ವಕ್ಕೆ ಬಂದ ನಂತರವೂ ಈ ಯೋಜನೆಯ ಬಗ್ಗೆ ಚರ್ಚೆ ನಡೆದಿಲ್ಲ. ಈ ಯೋಜನೆ ಬಗ್ಗೆ ಪ್ರಾರಂಭದಿಂದಲೂ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಕಾಳಜಿ ವಹಿಸಿದ್ದರೆ ಈ ವೇಳೆಗೆ ಕಾಮಗಾರಿಯು ಪೂರ್ಣವಾಗುತ್ತಿತ್ತು. ಸದ್ಯ ಈ ಕಾಮಗಾರಿಗೆ ಹೊಸದಾಗಿ 17 ಕಿಲೋಮೀಟರ್ ಸೇರ್ಪಡೆಯಾಗಿರುವುದರಿಂದ ಅದರಅಂದಾಜು ವೆಚ್ಚ ಹೆಚ್ಚಾಗಿದೆ. ಈಗಾಗಲೇ ಸರ್ಕಾರಕ್ಕೆ ಹೆಚ್ಚುವರಿಯಾಗಿ ₹7 ಕೋಟಿ ಬಿಡುಗಡೆ ಮಾಡುವಂತೆ ಕೇಳಿಕೊಳ್ಳಲಾಗಿದೆ ಎನ್ನುತ್ತಾರೆ ಯುಜಿಡಿ ಅಧಿಕಾರಿಗಳು. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ನೀಡಿ, ಮೂಲ ಸೌಕರ್ಯ ಒದಗಿಸಿದರೆ ಈ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯ ಎನ್ನುತ್ತಾರೆ ಯುಜಿಡಿ ಎಂಜನಿಯರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT