ಶನಿವಾರ, ಜುಲೈ 24, 2021
23 °C

ತುಮಕೂರು, ನಾಗವಲ್ಲಿ ಪಂಚಾಯಿತಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ತಾಲ್ಲೂಕು ಪಂಚಾಯಿತಿ ಹಾಗೂ ನಾಗವಲ್ಲಿ ಗ್ರಾಮ ಪಂಚಾಯಿತಿಯು ಕೇಂದ್ರ ಸರ್ಕಾರದ 2019–20ನೇ ಸಾಲಿನ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರಕ್ಕೆ ಭಾಜನವಾಗಿವೆ. 2018–19ನೇ ಸಾಲಿನಲ್ಲಿ ಕೈಗೊಂಡ ಕಾರ್ಯಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರತಿ ವರ್ಷ ರಾಜ್ಯದ ಒಂದು ಜಿಲ್ಲಾ ಪಂಚಾಯಿತಿ, ಎರಡು ತಾಲ್ಲೂಕು ಪಂಚಾಯಿತಿ, ಮೂರು ಗ್ರಾಮ ಪಂಚಾಯಿತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸದಂದು ಪುರಸ್ಕರಿಸಲಾಗುತಿತ್ತು. ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಪ್ರಶಸ್ತಿಗಳನ್ನು ತಡವಾಗಿ ಪ್ರಕಟಿಸಲಾಗಿದೆ. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ಖುಷಿಯಾಗಿದೆ:

ಪ್ರಶಸ್ತಿಗೆ ಆಯ್ಕೆ ಆಗಿರುವುದು ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸದಲ್ಲಿ ತೊಡಗಲು ಪ್ರೇರಣೆಯಾಗುತ್ತದೆ ಎಂದು ತುಮಕೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನ್‌ಲೈನ್‌ನಲ್ಲಿ ಕೇಂದ್ರ ಸರ್ಕಾರವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು. ಸಾಮಾನ್ಯ ಸಭೆಗಳು ನಡೆದಿವೆಯೇ, ತಾಲ್ಲೂಕು ಪಂಚಾಯಿತಿ ಆದಾಯ ಹೆಚ್ಚಳಕ್ಕೆ ಏನು ಮಾಡಲಾಗಿದೆ, ಅನುದಾನ ಸದ್ಬಳಕೆ ಆಗಿದೆಯೇ– ಹೀಗೆ ಹಲವು ವಿಚಾರಗಳು ಪ್ರಶ್ನೆಯಲ್ಲಿ ಇರುತ್ತವೆ. ರಾಜ್ಯದ ಎಲ್ಲ ತಾಲ್ಲೂಕು ಪಂಚಾಯಿತಿಗಳು, ಗ್ರಾಮ ಪಂಚಾಯಿತಿಗಳು ಮಾಹಿತಿ ನೀಡಿರುತ್ತವೆ’ ಎಂದರು.

ಅಂತಿಮವಾಗಿ ಹೆಚ್ಚು ಅಂಕಗಳಿಸಿದ ಮೊದಲ ಮೂರು ಪಂಚಾಯಿತಿಗಳನ್ನು ಆಯ್ಕೆಮಾಡಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವರು. ನಾವು ನೀಡಿದ ಮಾಹಿತಿ ಸರಿ ಇದೆಯೇ ಎನ್ನುವುದನ್ನು ಗಮನಿಸುತ್ತಾರೆ ಎಂದು ಹೇಳಿದರು.

‘ಈ ಪ್ರಶಸ್ತಿ ನಮಗಾಗಿಯೇ ಇರುವ ಪ್ರಶಸ್ತಿ. ನಮ್ಮ ಕೆಲಸಗಳನ್ನು ಗುರುತಿಸಿ ನೀಡಿದ್ದಾರೆ. ಎಲ್ಲ ಪಂಚಾಯಿತಿಯವರೂ ಕೆಲಸ ಮಾಡಿದ್ದಾರೆ. ಆದರೆ ಗುರುತಿಸಿಕೊಳ್ಳುವುದರಲ್ಲಿ ಹಿಂದೆ ಬೀಳುವ ಸಾಧ್ಯತೆ ಇದೆ. ಪ್ರಶಸ್ತಿ ದೊರೆತಿರುವುದು ಖುಷಿ ನೀಡಿದೆ’ ಎಂದು ನಾಗವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.