ಬುಧವಾರ, ಜುಲೈ 28, 2021
21 °C
bear

ಅಪರಾಧ ಸುದ್ದಿ | ಉರುಳಿಗೆ ಸಿಲುಕಿ ಕರಡಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ವೆಂಕಟಾಪುರ ಗ್ರಾಮದ ಬಳಿ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಅಸ್ವಸ್ಥಗೊಂಡಿದ್ದ ಗಂಡು ಕರಡಿ ಮೃತಪಟ್ಟಿದೆ.

ಗ್ರಾಮದ ಗುಟ್ಟೆಯ ಮೇಲೆ ಬೇಟೆಗಾರರು ಪ್ರಾಣಿ ಬೇಟೆಗೆ ಹಾಕಿದ್ದ ಉರುಳಿಗೆ ಸುಮಾರು 10 ದಿನಗಳ ಹಿಂದೆ ಕರಡಿ ಸಿಲುಕಿ ನರಳಾಡಿದೆ. ಉರುಳಿನಿಂದ ಬಿಡಿಸಿಕೊಂಡು ತೀವ್ರ ಗಾಯಗಳಾಗಿ ನರಳುತ್ತಿದ್ದ ಕರಡಿ ಬುಧವಾರ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ.

ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಕರಡಿಯನ್ನು ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆಗಾಗಿ ಕೊರಟಗೆರೆ ಪಶು ಇಲಾಖೆಗೆ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. 

‘ನೋವಿನಿಂದಾಗಿ ಆಹಾರ ತ್ಯಜಿಸಿದೆ. ಅಸ್ವಸ್ಥತೆಯಿಂದ ಬಳಲಿತ್ತು’ ಎಂದು ಪಶು ವೈದ್ಯರು ತಿಳಿಸಿದರು.

ಸ್ಥಳದಲ್ಲಿ ಕೊರಟಗೆರೆ ವಲಯ ಅರಣ್ಯಾಧಿಕಾರಿ ಸತೀಶಚಂದ್ರ, ಉಪ ಅರಣ್ಯಾಧಿಕಾರಿ ನಾಗಾರಾಜು, ನೇಹಜುಲ್ ತಸ್ಮೀಯಾ, ನಂದೀಶ್, ಸಿಬ್ಬಂದಿ ಹನುಮಂತಯ್ಯ, ನರಸಿಂಹಯ್ಯ, ಮಂಜುನಾಥ ಇದ್ದರು.

ವಿದ್ಯುತ್ ಅವಘಡ; ಬಾಲಕ ಸಾವು

ತುರುವೇಕೆರೆ ತಾಲ್ಲೂಕಿನ ಬಾಣಸಂದ್ರ ದಲ್ಲಿ ಬುಧವಾರ ತೊಟ್ಟಿಯಿಂದ ನೀರು ಎತ್ತುವಾಗ ಆಕಸ್ಮಿಕವಾಗಿ ವಿದ್ಯುತ್‍ ಶಾಕ್‍ ಹೊಡೆದು ಬಾಲಕ ಮೊಹಿತ್‍ (8) ಸಾವನ್ನಪ್ಪಿದ್ದಾನೆ.

ರಂಗಸ್ವಾಮಿ ಅವರ ಮಗ ಮೃತ ಮೊಹಿತ್‍ ಬೆಳಿಗ್ಗೆ ಮನೆಯ ಮುಂಭಾಗದ ತೊಟ್ಟಿಯಲ್ಲಿ ಮೊಟಾರ್‌ ಮೂಲಕ ನೀರು ಎತ್ತುವಾಗ ಆಕಸ್ಮಿಕವಾಗಿ ವಿದ್ಯುತ್‍ ಶಾಕ್‍ ಹೊಡೆದಿದೆ ಎಂದು ದಂಡಿನಶಿವರ ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ಹಾಗಲವಾಡಿ ಸಮೀಪದ ತೇವಡೇಹಳ್ಳಿ ಗ್ರಾಮದ ರವಿಕುಮಾರ್ (45) ಬುಧವಾರ ತಮ್ಮ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಮನೆ ಕಟ್ಟಲು ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಮೃತರಿಗೆ ಪತ್ನಿ ಹಾಗೂ ಮಗು ಇದ್ದಾರೆ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.