ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಶಕ್ತಿ ಪ್ರದರ್ಶನಕ್ಕೆ ಬಿಜೆಪಿ, ಕಾಂಗ್ರೆಸ್ ಸಜ್ಜು

ನಾಮಪತ್ರ ಸಲ್ಲಿಕೆಗೆ ಸಿದ್ಧತೆ: ರಂಗೇರುತ್ತಿದೆ ರಾಜಕೀಯ ಅಖಾಡ
Published 3 ಏಪ್ರಿಲ್ 2024, 3:29 IST
Last Updated 3 ಏಪ್ರಿಲ್ 2024, 3:29 IST
ಅಕ್ಷರ ಗಾತ್ರ

ತುಮಕೂರು: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು, ರಾಜಕೀಯ ಅಖಾಡ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶಕ್ತಿ ಪ್ರದರ್ಶನಕ್ಕೂ ಮುಂದಾಗಿವೆ.

ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಈಗಾಗಲೇ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದು, ಮತ್ತೊಮ್ಮೆ ಬುಧವಾರ (ಏ.3ಕ್ಕೆ) ಅಧಿಕೃತವಾಗಿ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬೃಹತ್ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದು, ಇದೇ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಶಕ್ತಿ ಪ್ರದರ್ಶಿಸಲಿದ್ದಾರೆ. ಬಿಜೆಪಿ– ಜೆಡಿಎಸ್ ಎರಡೂ ಕಡೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕರ್ತರು ಭಾಗಿಯಾಗುವಂತೆ ನೋಡಿಕೊಂಡು ಮೈತ್ರಿ ಕೂಟದ ಒಗ್ಗಟ್ಟು, ಬಲ ತೋರ್ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 50 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಮೈತ್ರಿ ಪಕ್ಷದ ಮುಖಂಡರೇ ಹೇಳಿಕೊಂಡಿದ್ದಾರೆ.

ವಿನಾಯಕ ನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದು, ಅಲ್ಲಿಂದಲೇ ಮೆರವಣಿಗೆ ಆರಂಭವಾಗಲಿದೆ. ಬಿಜಿಎಸ್ ವೃತ್ತ, ಅಶೋಕ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುತ್ತದೆ. ಎರಡೂ ಪಕ್ಷಗಳ ನಾಯಕರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಕಾಂಗ್ರೆಸ್ ಸಿದ್ಧತೆ: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏ. 4ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಪಿ.ಮುದ್ದಹನುಮೇಗೌಡ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು ಪಕ್ಷದ ಮುಖಂಡರು ಮುಂದಾಗಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರುವುದು ಹಾಗೂ ಜಿಲ್ಲೆಯಿಂದ ಇಬ್ಬರಿಗೆ ಸಚಿವ ಸ್ಥಾನ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಬೃಹತ್ ಮೆರವಣಿಗೆ ನಡೆಸಲಿದ್ದಾರೆ. ರಾಜ್ಯ ನಾಯಕರು ಭಾಗವಹಿಸುವ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಇಲ್ಲವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯ ಇಬ್ಬರು ಸಚಿವರಿಗೆ ಎದುರಾದ ಮೊದಲ ಚುನಾವಣೆ. ಶತಾಯಗತಾಯ ಚುನಾವಣೆಯಲ್ಲಿ ಗೆಲ್ಲಲೇ ಬೇಕು. ಇಲ್ಲವಾದರೆ ತಮ್ಮ ಅಸ್ತಿತ್ವಕ್ಕೆ ಸಂಚಕಾರ ಬರುತ್ತದೆ. ಇಬ್ಬರು ಸಚಿವರು ಇದ್ದರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಅಪವಾದ ಹೊತ್ತುಕೊಳ್ಳಬೇಕಾಗುತ್ತದೆ. ಈಗಾಗಲೇ ಒಳ ಒಪ್ಪಂದದಂತಹ ವಿಚಾರಗಳು ಮುನ್ನೆಲೆಗೆ ಬಂದಿದ್ದು, ಆ ಬಗ್ಗೆಯೂ ಎಚ್ಚರ ವಹಿಸಿದ್ದಾರೆ. ಹಾಗಾಗಿ ಸಾಕಷ್ಟು ಪ್ರಯತ್ನದಲ್ಲಿ ಸಾಗಿದ್ದಾರೆ.

‘ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ. ಬೃಹತ್ ಮಟ್ಟದಲ್ಲಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲಾಗುತ್ತದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ ತಿಳಿಸಿದರು.

ಎಸ್.ಪಿ.ಮುದ್ದಹನುಮೇಗೌಡ
ಎಸ್.ಪಿ.ಮುದ್ದಹನುಮೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT