ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ತೈಲ ಬೆಲೆ ಏರಿಕೆ: ಬಿಜೆಪಿ, ಜೆಡಿಎಸ್ ಧರಣಿ

Published 21 ಜೂನ್ 2024, 4:17 IST
Last Updated 21 ಜೂನ್ 2024, 4:17 IST
ಅಕ್ಷರ ಗಾತ್ರ

ತುಮಕೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ, ತಕ್ಷಣ ದರ ಇಳಿಕೆ ಮಾಡುವಂತೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಗುರುವಾರ ವಿವಿಧೆಡೆ ರಸ್ತೆ ತಡೆ, ಧರಣಿ ನಡೆಸಿದರು.

ನಗರದ ಸ್ವಾತಂತ್ರ್ಯ ಚೌಕದಲ್ಲಿ ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತೈಲದ ಮೇಲಿನ ತೆರಿಗೆ ಹೆಚ್ಚಳವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ರಸ್ತೆ ತಡೆ ನಡೆಸಿದವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಜನ ವಿರೋಧಿ, ರೈತ ವಿರೋಧಿ ಸರ್ಕಾರ ಬೆಲೆ ಹೆಚ್ಚಿಸಿ ಜನ ಸಾಮಾನ್ಯರಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ತೈಲ ಬೆಲೆ ಏರಿಕೆಯಿಂದ ಇತರೆ ಪದಾರ್ಥಗಳ ಬೆಲೆಯೂ ದುಬಾರಿಯಾಗಲಿದೆ. ಬಸ್ ಪ್ರಯಾಣ ದರ ಏರಿಸುವ ಸುಳಿವನ್ನು ಸಚಿವರು ನೀಡಿದ್ದಾರೆ. ನೀರಿನ ದರ ಹೆಚ್ಚಿಸುವ ಪ್ರಯತ್ನ ನಡೆದಿದೆ. ಈಗಲೇ ಹೆಚ್ಚಾಗಿರುವ ಹಾಲಿನ ದರ ಮತ್ತಷ್ಟು ಏರಿಕೆಯಾಗಲಿದೆ. ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿ ಜನರು ವಿಷ ಕುಡಿಯುವ ಭಾಗ್ಯ ನೀಡಲಿದೆ’ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ‘ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯ ಮರೆತು ಬೆಲೆ ಏರಿಕೆ ಮಾಡುತ್ತಿದೆ. ಹಾಲು ಉತ್ಪಾದಕರಿಗೆ ನೀಡಬೇಕಾದ ₹700 ಕೋಟಿ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ’ ಎಂದು ದೂರಿದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಕಾಯಾಧ್ಯಕ್ಷ ಟಿ.ಆರ್.ನಾಗರಾಜು, ಬಿಜೆಪಿ ನಗರ ಅಧ್ಯಕ್ಷ ಹನುಮಂತರಾಜು, ಮುಖಂಡರಾದ ಎಸ್.ಶಿವಪ್ರಸಾದ್, ದೊಡ್ಡಮನೆ ಗೋಪಾಲಗೌಡ, ಶ್ರೀನಿವಾಸ್‍ ಪ್ರಸಾದ್, ಸಂದೀಪ್‍ಗೌಡ, ಕೆ.ವೇದಮೂರ್ತಿ, ನವಚೇತನ್, ರುದ್ರೇಶ್, ನಂದೀಶ್, ಗಣೇಶ್‍ ಪ್ರಸಾದ್, ಸತ್ಯಮಂಗಲ ಜಗದೀಶ್, ಟಿ.ಜಿ.ನರಸಿಂಹರಾಜು, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಮಹೇಶ್, ಪುಟ್ಟರಾಜು, ಧನುಷ್ ನಾಯಕ್, ಸೋಲಾರ್ ಕೃಷ್ಣಮೂರ್ತಿ, ನಂಜುಂಡಸ್ವಾಮಿ, ಜ್ಯೋತಿ ತಿಪ್ಪೆಸ್ವಾಮಿ, ಲೀಲಾವತಿ, ವೆಂಕಟೇಶಾಚಾರ್, ಕೆಂಪರಾಜು, ನಂದಿನಾಥ್ ಮೊದಲಾದವರು ಇತರರು ಭಾಗವಹಿಸಿದ್ದರು.

ರಸ್ತೆ ತಡೆ: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ನಗರದ ಹೊರ ವಲಯದ ಗೂಳೂರಿನಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.

ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ, ರಾಜ್ಯದ ಜನರ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದೆ. ನಿತ್ಯ ಜೀವನಕ್ಕೆ ಅತ್ಯವಶ್ಯಕವಾದ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಏರಿಸಿದೆ. ತಕ್ಷಣ ಹೆಚ್ಚಿಸಿರುವ ದರವನ್ನು ಇಳಿಸಬೇಕುʼ ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದ್ದು, ನಿತ್ಯದ ಖರ್ಚಿಗೂ ಹಣವಿಲ್ಲದಂತಾಗಿದೆ. ಅದಕ್ಕಾಗಿ ಬೆಲೆ ಏರಿಕೆ ಮಾಡುವಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಮುಖಂಡರಾದ ಸಿದ್ದೇಗೌಡರು, ಶಿವಕುಮಾರ್‌, ಮಂಗಳಗೌರಮ್ಮ, ವೆಂಕಟೇಶ್‌, ನರಸಿಂಹಮೂರ್ತಿ, ಅನಸೂಯಮ್ಮ, ರವಿ, ಸಾರಂಗಿ ಶಂಕರಣ್ಣ ಮುಂತಾದವರು ಭಾಗವಹಿಸಿದ್ದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಗೂಳೂರಿನಲ್ಲಿ ಗುರುವಾರ ಧರಣಿ ನಡೆಸಿದರು. ಶಾಸಕ ಬಿ.ಸುರೇಶ್‌ಗೌಡ ನೇತೃತ್ವ ವಹಿಸಿದ್ದರು
ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಗೂಳೂರಿನಲ್ಲಿ ಗುರುವಾರ ಧರಣಿ ನಡೆಸಿದರು. ಶಾಸಕ ಬಿ.ಸುರೇಶ್‌ಗೌಡ ನೇತೃತ್ವ ವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT