ಮರಳು ಮಾಫಿಯಾಕ್ಕೆ ಮೊದಲ ಬಲಿ: ನಳಿನ್‌

7
ಮೂಲಾರಪಟ್ಣ ಸೇತುವೆ ಕುಸಿತ: ಅಧಿಕಾರಿಗಳ ನಿರ್ಲಕ್ಷವೂ ಕಾರಣ

ಮರಳು ಮಾಫಿಯಾಕ್ಕೆ ಮೊದಲ ಬಲಿ: ನಳಿನ್‌

Published:
Updated:
ನಳಿನ್ ಕುಮಾರ್ ಕಟೀಲ್

ಮಂಗಳೂರು: ಕುಸಿದಿರುವ ಮೂಲಾರಪಟ್ಣ ಸೇತುವೆಯು ಮರಳು ಮಾಫಿಯಾಕ್ಕೆ ಮೊದಲ ಬಲಿಯಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ಆರೋಪಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರ ಜತೆಗೂಡಿ ಆ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತ ಹಾಗೂ ಎಂಆರ್‌ಪಿಎಲ್‌ಗೆ ಸೂಚನೆ ನೀಡಲಾಗಿದೆ ಎಂದರು.

ಮರಳು ಗಣಿಗಾರಿಕೆಯಿಂದ ಸೇತುವೆಗೆ ಆಗುತ್ತಿರುವ ಹಾನಿಯ ಕುರಿತು ಎರಡು ವರ್ಷಗಳ ಹಿಂದೆಯೇ ಅಲ್ಲಿನ ಸ್ಥಳೀಯರು ವಿಡಿಯೊ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಪಿಲ್ಲರ್‌ ಕುಸಿತದ ಕುರಿತೂ ವಿಡಿಯೊದಲ್ಲಿ ತೋರಿಸಲಾಗಿತ್ತು. ಅದಾಗ್ಯೂ ಜಿಲ್ಲಾಡಳಿತ ಸೇತುವೆಯ ಬದಿಯಲ್ಲಿ ಯಂತ್ರ ಬಳಸಿ ನಡೆಸಲಾಗುತ್ತಿದ್ದ ಮರಳು ಗಣಿಗಾರಿಕೆ ತಡೆಯಲಿಲ್ಲ. ಕಳೆದ ಅವಧಿಯಲ್ಲಿ ಅಲ್ಲಿ ಆಡಳಿತದಲ್ಲಿ ಇದ್ದವರ ಪ್ರಭಾವ, ಬೆಂಬಲದೊಂದಿಗೆ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ ಎಂದು ದೂರಿದರು.

ಅಧಿಕಾರಿಗಳು ಇಂತಹ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ದುರಸ್ತಿಗೆ ಪ್ರಸ್ತಾವ ಸಲ್ಲಿಸಬೇಕು. 3–4 ವರ್ಷಗಳಿಂದ ಇಂತಹ ದೂರುಗಳಿದ್ದಾಗ, ಸೇತುವೆಯ ನಿರ್ವಹಣೆಗೆ ಮುಂದಾಗಬೇಕಿತ್ತು. ನಿರ್ವಹಣೆ ಮಾಡಲಾಗದಷ್ಟು ಹಾನಿಯಾಗಿದ್ದರೆ, ಆ ಬಗ್ಗೆಯೂ ಸರ್ಕಾರಕ್ಕೆ ಲಿಖಿತವಾಗಿ ತಿಳಿಸಬೇಕಿತ್ತು. ಇದೀಗ ಸೇತುವೆ ಕುಸಿದಿದ್ದು, ಎರಡು ವರ್ಷದವರೆಗೆ ಈ ಪ್ರದೇಶದ ಜನರ ನಿತ್ಯದ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಿನ ಫಲ್ಗುಣಿ ನದಿಯ ತೂಗು ಸೇತುವೆಗೆ ಸಂಪರ್ಕ ರಸ್ತೆ ಇಲ್ಲದಾಗಿದ್ದು, ಅದನ್ನು ಕಲ್ಪಿಸಲಾಗುತ್ತಿದೆ. ಸಮೀಪದ ತೋಡಿಗೆ ಮೋರಿಯ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ತೂಗುಸೇತುವೆಯವರೆಗೆ ಟೆಂಪೊಗಳು ಬರುತ್ತಿದ್ದು, ತೂಗು ಸೇತುವೆ ದಾಟಿದ ಬಳಿಕ ಇನ್ನೊಂದು ಬದಿಯಿಂದ ಟೆಂಪೊ ಮೂಲಕ ಜನರನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜತೆ ಮಾತನಾಡಿ, ಸಾರ್ವಜನಿಕರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ. ತಾತ್ಕಾಲಿಕವಾಗಿ ಪರ್ಮೀಟ್‌ ಹೊಂದಿರುವ ಬಸ್‌ಗಳ ಪೈಕಿ ಗುರುಪುರದತ್ತ ಹೋಗುವ ಬಸ್‌ಗಳು ಮೂಲಾರಪಟ್ಣದವರೆಗೆ ಸಂಚರಿಸಿ, ಮಂಗಳೂರಿಗೆ ಮರಳಬೇಕು. ಆ ಕಡೆಯಿಂದ ಬರುವ ಬಸ್‌ಗಳು ಮೂಲಾರಪಟ್ಣದವರೆಗೆ ಸಂಚರಿಸಬೇಕು. ಅಲ್ಲಿಂದ ತೂಗು ಸೇತುವೆ ಉಪಯೋಗಿಸಬಹುದು. ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ತೂಗು ಸೇತುವೆ ಬಳಕೆ ಮಾಡಬೇಕಾಗಿದೆ. ಮೂಲಾರಪಟ್ಣದಿಂದ ಕೊಳ್ತಮಜಲು–ಪೊಳಲಿ ರಸ್ತೆಯಾಗಿ 2 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ನಳಿನ್‌ಕುಮಾರ್ ಕಟೀಲ್‌ ತಿಳಿಸಿದರು.

15 ವರ್ಷ ಹಳೆ ಸೇತುವೆ ಪರಿಶೀಲನೆ

ಜಿಲ್ಲೆಯಲ್ಲಿ 15 ವರ್ಷಗಳಿಗಿಂತ ಹಳೆಯದಾದ ಎಲ್ಲ ಸೇತುವೆಗಳ ಸಾಮರ್ಥ್ಯವನ್ನು ತಜ್ಞರಿಂದ ಪರಿಶೀಲಿಸುವ ಕಾರ್ಯವನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಜಿಲ್ಲಾಡಳಿತ ಮಾಡದೇ ಇದ್ದಲ್ಲಿ, ಎನ್‌ಐಟಿಕೆ ತಜ್ಞರಿಂದ ಸೇತುವೆಗಳ ಸಾಮರ್ಥ್ಯವನ್ನು ಪರಿಶೀಲಿಸಲಾಗುವುದು ಎಂದು ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ಗುರುಪುರ ಸೇತುವೆಯೂ ಅಪಾಯದಲ್ಲಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಈಗಾಗಲೇ ₹33 ಕೋಟಿ ಮೊತ್ತದ ಟೆಂಡರ್‌ ಆಗಿದೆ. ಕಾಮಗಾರಿಯೂ ಆರಂಭವಾಗಲಿದೆ. ಅದಾಗ್ಯೂ ಈಗಿರುವ ಹಳೆಯ ಸೇತುವೆಯ ತಾತ್ಕಾಲಿಕ ರಕ್ಷಣೆಯ ಜವಾಬ್ದಾರಿಯನ್ನು ಅಧಿಕಾರಿಗಳು ಹೊತ್ತುಕೊಳ್ಳಬೇಕು. ಅದನ್ನು ಎನ್‌ಐಟಿಕೆ ತಜ್ಞರ ಮೂಲಕ ಪರಿಶೀಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !