ಭಾನುವಾರ, ಸೆಪ್ಟೆಂಬರ್ 19, 2021
24 °C
ಕೊರಟಗೆರೆ: ಸಾಮಾನ್ಯ ಸಭೆಯಲ್ಲಿ ಅಧಿಕಾರಿ ವಿರುದ್ಧ ಸದಸ್ಯರ ಅಸಮಾಧಾನ

ಕೊರಟಗೆರೆ ಪ.ಪಂ ಎಂಜಿನಿಯರ್ ವಿರುದ್ಧ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ಪಟ್ಟಣ ಪಂಚಾಯಿತಿ ಎಂಜಿನಿಯರ್ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದ ಪಟ್ಟಣದ ಅಬಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ ಎಂದು ಸದಸ್ಯರು ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ಶನಿವಾರ ನಡೆದ ಪಟ್ಟಣ ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಸದಸ್ಯರು ಎಂಜಿನಿಯರ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಎಸ್‌ಟಿಪಿ, ಪಿಎಸ್‌ಟಿ ಯೋಜನೆ ಅಡಿ ಲಕ್ಷಾಂತರ ಹಣ ಉಳಿದಿದ್ದು, ಅದನ್ನು ಅಂದಾಜು ಪಟ್ಟಿ ಮತ್ತು ಟೆಂಡರ್ ಮಾಡದೆ ಎಂಜಿನಿಯರ್ ರಘು ಅವರು ತಿಂಗಳುಗಟ್ಟಲೆ ರಜೆ ಹಾಕುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೊನಿಗಳ ಅಭಿವೃದ್ಧಿ ಸಮರ್ಪಕವಾಗಿ ನಡೆಯುತ್ತಿಲ್ಲ. ಹಣ ವಾಪಸ್ ಹೋಗುವ ಹಂತಕ್ಕೆ ತಲುಪಿದೆ ಎಂದು ದೂರಿದರು.

ಪಟ್ಟಣದ ಕಣ್ಣಪ್ಪ ಸಮುದಾಯ ಭವನ ಕಾಮಗಾರಿಗೆ ಹಲವು ಬಾರಿ ಅಂದಾಜು ಪಟ್ಟಿ ಮಾಡಿಸಿ ಟೆಂಡರ್ ಪ್ರಕ್ರಿಯೆ ಸರಿಯಾಗಿ ನಿರ್ವಹಿಸದೆ ಎಂಜಿನಿಯರ್ ಬೇಜವ್ದಾರಿಯಿಂದ ಹಾಗೆ ಉಳಿದಿದೆ ಎಂದು ಸದಸ್ಯ ಲಕ್ಷ್ಮೀನಾರಾಯಣ್ ಮತ್ತು ಪುಟ್ಟನರಸಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ನಂದೀಶ್ ಮಾತನಾಡಿ, 4ನೇ ವಾರ್ಡ್‌ನಲ್ಲಿ ಸರ್ಕಾರಿ ಭೂಮಿ ಸಾಕಷ್ಟಿದೆ. ಭೂಗಳ್ಳರ ಮಾರಾಟದ ಕೇಂದ್ರ ಬಿಂದುವಾಗಿದೆ. ಮೊದಲು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗಗಳನ್ನು ಗುರುತಿಸಿ ಸ್ವಾಧೀನ ಮಾಡಿಕೊಂಡು ಬಡವರಿಗೆ ಹಂಚಬೇಕು ಎಂದು ಆಗ್ರಹಿಸಿದರು.

ಸದಸ್ಯ ಕೆ.ಆರ್.ಓಬಳರಾಜು ಮಾತನಾಡಿ, ಕಚೇರಿ ಸಿಬ್ಬಂದಿ ಅಧ್ಯಕ್ಷರ ಮೇಲೆ ಸುಳ್ಳು ಹೇಳಿ, ಹಣ ಪಡೆಯಲು ಕಡತಗಳನ್ನು ಬಾಕಿ ಉಳಿಸಿಕೊಳ್ಳುತ್ತಿರುವ ಬಗ್ಗೆ ಜನರಿಂದ ದೂರು ಬರುತ್ತಿವೆ. ಮೊದಲು ಎನ್‌ಒಸಿ ಬಗ್ಗೆ ಸಭೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸದಸ್ಯ ಪ್ರದೀಪ್ ಕುಮಾರ್ ಮಾತನಾಡಿ, ಹಲವು ತಿಂಗಳುಗಳಿಂದ ಬಸ್ ನಿಲ್ದಾಣದಿಂದ ಸಜ್ಜನ ಬೀದಿಗೆ ಹೋಗುವ ದಾರಿಯಲ್ಲಿ ತಳ್ಳುವ ಗಾಡಿಗಳು ಸೇರಿದಂತೆ ಅಂಗಡಿಗಳನ್ನು ರಸ್ತೆಯಲ್ಲೆ ಇಡಲಾಗುತ್ತಿದೆ. ಇದರಿಂದ ವಾಹನಗಳು ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಕೊಳೆತ ಕಸ ಹೆಚ್ಚಾಗಿ ಸುತ್ತಮುತ್ತಲ ಪ್ರದೇಶ ರೋಗಗ್ರಸ್ತವಾಗುತ್ತಿದೆ. ಇದನ್ನು ತೆರವುಗೊಳಿಸದಿದ್ದರೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸದಸ್ಯ ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿಯೇ ಕೊರಟಗೆರೆ ಪಟ್ಟಣ ಪಂಚಾಯಿತಿ ಕಳೆದ 7 ತಿಂಗಳಿನಿಂದ ಸರಬರಾಜಿನ ವಾರ್ಷಿಕ ಟೆಂಡರ್‌ ಮಾಡಿಲ್ಲ. ಇದರಿಂದ ಕಾಮಗಾರಿಗಳಲ್ಲಿ ಅವ್ಯವಹಾರ ಹೆಚ್ಚುತ್ತಿದೆ ಎಂದು ದೂರಿದರು.

ಎಂಜಿನಿಯರ್ ಟೆಂಡರ್ ಕಾಮಗಾರಿ ಸಮಯದಲ್ಲಿ ಮಾತ್ರ ಕಚೇರಿಗೆ ಹಾಜರಾಗಿ ಲಾಭಾಂಶಕ್ಕೆ ಮಾತ್ರ ಕೆಲಸ ಮಾಡುತ್ತಾರೆ. ಇಲ್ಲಿಯವರೆಗೂ ಕುಡಿಯುವ ನೀರಿನ ಬಗ್ಗೆ ಹೇಮಾವತಿ ನೀರು ಸರಬರಾಜು ಮಾಡುವ ಮುಖ್ಯ ಕೇಂದ್ರಕ್ಕಾಗಲಿ, ನೀರು ಶೇಖರಣೆಯಾಗುವ ಅಗ್ರಹಾರದ ಪವರ್ ಪ್ಲಾಂಟ್‌ನ್ನು ಒಮ್ಮೆಯೂ ಸರಿಯಾಗಿ ಗಮನಿಸಿಲ್ಲ ಎಂದು ಎಂಜಿನಿಯರ್‌ ವಿರುದ್ಧ ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು.

ಸಭೆಯಲ್ಲಿ ಅಧ್ಯಕ್ಷೆತೆಯನ್ನು ಮಂಜುಳಾ ಸತ್ಯನಾರಾಯಣ ವಹಿಸಿದ್ದರು. ಉಪಾಧ್ಯಕ್ಷೆ ಭಾರತಿ ಸಿದ್ದಮಲ್ಲಪ್ಪ, ಸದಸ್ಯರಾದ ಎ.ಡಿ.ಬಲರಾಮಯ್ಯ, ನಟರಾಜು, ಕಾವ್ಯ ರಮೇಶ್, ಹೇಮಾ ಮಂಜುನಾಥ್, ಅನಿತಾ, ಹುಸ್ನಾ ಪಾರಿಯಾ ಕಲೀಂ, ನಾಮನಿರ್ದೇಶಿತ  ಸದಸ್ಯರಾದ ರಂಗನಾಥ್, ಗೋವಿಂದರಾಜು, ಪ್ರೇಮಕುಮಾರ್, ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್, ಆರೊಗ್ಯಾಧಿಕಾರಿ ರೈಸ್ ಅಹಮದ್, ಕಂದಾಯ ನಿರೀಕ್ಷಕ ವೀರಭದ್ರಚಾರ್, ಸಿಬ್ಬಂದಿ ಮಹೇಶ್, ನಾಗರತ್ನಮ್ಮ, ಶೈಲೇಂದ್ರ, ಜಗನ್ನಾಥ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.