ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಮಫಲಕವೂ ಇಲ್ಲದ ಚಿಂಕಾರ ಅಭಯಾರಣ್ಯ

ವನ್ಯಜೀವಿ ಅಭಯಾರಣ್ಯವಾಗಿ ಘೋಷಣೆಯಾಗಿ ಎರಡು ವರ್ಷ ಕಳೆದರೂ ನಿರ್ಲಕ್ಷ್ಯ
Published 14 ಜೂನ್ 2024, 6:47 IST
Last Updated 14 ಜೂನ್ 2024, 6:47 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಅರಣ್ಯ ಪ್ರದೇಶ ‘ಚಿಂಕಾರ ವನ್ಯಜೀವಿ ಅಭಯಾರಣ್ಯ’ ಎಂದು ಘೋಷಣೆಯಾಗಿ ಎರಡು ವರ್ಷ ಕಳೆದರೂ ಅರಣ್ಯ ಇಲಾಖೆ ನಾಮಫಲಕ ಅಳವಡಿಸದಿರುವುದು ಪ್ರಾಣಿಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಇತ್ತೀಚೆಗೆ ನಡೆಯುತ್ತಿರುವ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಗೆ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಆದರೆ ಬುಕ್ಕಾಪಟ್ಟಣ ಹಾಗೂ ಸುತ್ತಲಿನ ಗ್ರಾಮದ ಜನರಿಗೆ ಸಹ ಇಲ್ಲಿ ಒಂದು ವನ್ಯಜೀವಿ ಅಭಯಾರಣ್ಯ ಇದೆ ಎನ್ನುವ ಅರಿವು ಇಲ್ಲ.

ವನ್ಯಜೀವಿ ಅಭಯಾರಣ್ಯದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 234 (ಶಿರಾ- ಹುಳಿಯಾರು ಮಾರ್ಗ) ಹಾದು ಹೋಗುತ್ತಿದ್ದು, ಇಲ್ಲಿ ‘ಕಾಡು ಪ್ರಾಣಿಗಳಿವೆ ಎಚ್ಚರಿಕೆ’, ‘ವಾಹನಗಳನ್ನು ನಿಧಾನವಾಗಿ ಚಲಿಸಿ’, ‘ಅತಿಯಾದ ಧ್ವನಿ ಬಳಕೆ ಮಾಡಬೇಡಿ’ ಎಂಬ ಸಂದೇಶದ ಮಾಹಿತಿ ಫಲಕಗಳನ್ನು ಸಹ ಅಳವಡಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಕ್ಕಾಪಟ್ಟಣ ಅರಣ್ಯ 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಈ ಅರಣ್ಯ ಪ್ರದೇಶ ವಿಸ್ತರಿಸಿಕೊಂಡಿದೆ.

ಭಾರತದಲ್ಲಿ ಒಟ್ಟು ಎಂಟು ರೀತಿಯ ಜಿಂಕೆ ತಳಿಗಳು ಕಂಡುಬರುತ್ತವೆ. ಅದರಲ್ಲಿ ಕರ್ನಾಟಕದಲ್ಲಿ ಚುಕ್ಕಿ ಜಿಂಕೆ (ಕೃಷ್ಣಮೃಗ), ಕೊಂಡು ಕುರಿ, ಚಿಂಕಾರ ಈ ಮೂರು ತಳಿಗಳು ಮಾತ್ರ ಕಂಡುಬರುತ್ತವೆ. ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಮೂರು ತಳಿಯ ಜಿಂಕೆಗಳು ಕಂಡು ಬರುತ್ತಿರುವುದು ವಿಶೇಷ.

ಮದಲಿಂಗನ ಕಣಿವೆ ಎಂಬ ಸುಂದರ ಗುಡ್ಡಗಳ ಸಾಲು, ಬೋರನಕಣಿವೆ ಜಲಾಶಯ, ಸಾಯಿಬಾಬಾ ದೇವಸ್ಥಾನ, ಧರ್ಮವೀರ ತೋಟಗಾರಿಕಾ ಕ್ಷೇತ್ರ ಮತ್ತು ಬಂಗಾರದ ಗಣಿ ಪ್ರದೇಶ ಸೇರಿದಂತೆ ಹತ್ತಾರು ಪ್ರೇಕ್ಷಣೀಯ ಸ್ಥಳಗಳನ್ನು ಸಹ ಅರಣ್ಯ ಪ್ರದೇಶ ಹೊಂದಿದೆ. ಈ ಅರಣ್ಯ ಪ್ರದೇಶದಲ್ಲಿ ಚಿರತೆ, ಕರಡಿ, ಕಾಡು ಹಂದಿ, ಚಿಪ್ಪು ಹಂದಿ, ಮುಳ್ಳು ಹಂದಿ, ಮೊಲ, ನವಿಲು ಸೇರಿದಂತೆ ನೂರಾರು ರೀತಿಯ ಅಪರೂಪದ ಜೀವಿಗಳು ಕಂಡುಬರುತ್ತವೆ. ಇಂತಹ ಒಂದು ಅರಣ್ಯ ಪ್ರದೇಶವನ್ನು ಗಮನಿಸಿದ ಸರ್ಕಾರ ಇದನ್ನು ಸಂರಕ್ಷಿತ ವನ್ಯಜೀವಿಧಾಮವನ್ನಾಗಿ ಘೋಷಣೆ ಮಾಡಿದೆ. ಆದರೆ ಅಧಿಕಾರಿಗಳು ಕನಿಷ್ಠ ನಾಮಫಲಕವನ್ನೂ ಅಳವಡಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವುದು ಪರಿಸರ ಪ್ರೇಮಿಗಳ ಆರೋಪ.

ಅರಣ್ಯ ಇಲಾಖೆ ಕಾಳಜಿ ವಹಿಸಿದರೆ ಇದು ಒಂದು ಉತ್ತಮ ಪ್ರವಾಸಿ ತಾಣವಾಗುವ ಎಲ್ಲ ಲಕ್ಷಣಗಳು ಇದ್ದು, ಪರಿಸರ ಪ್ರೇಮಿಗಳ ಮೆಚ್ಚಿನ ತಾಣವಾಗುವುದು ಸ್ಥಳೀಯರು ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT