ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಎಲ್ಲೆಡೆ ಕ್ರಿಸ್‌ಮಸ್‌ ಸಂಭ್ರಮ: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

Published 26 ಡಿಸೆಂಬರ್ 2023, 8:10 IST
Last Updated 26 ಡಿಸೆಂಬರ್ 2023, 8:10 IST
ಅಕ್ಷರ ಗಾತ್ರ

ತುಮಕೂರು: ಶಾಂತಿಯ ಸಂದೇಶ ಸಾರುವ ಕ್ರಿಸ್‌ಮಸ್‌ ಹಬ್ಬವನ್ನು ನಗರದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.

ಎಲ್ಲ ಚರ್ಚ್‌ಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಸ್ವಾತಂತ್ರ್ಯ ಚೌಕದ ಬಳಿಯ ಸಿಎಸ್‌ಐ ವೆಸ್ಲಿ ಚರ್ಚ್‌, ಹೊರಪೇಟೆಯ ಸಂತ ಲೂರ್ದು ಮಾತೆ ಚರ್ಚ್‌, ದೇವನೂರು ಚರ್ಚ್‌ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಹಬ್ಬದ ಆಚರಣೆಗೆ ಕಳೆದ ವಾರದಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಕ್ರೈಸ್ತರು ಹಬ್ಬದ ದಿನ ಹೊಸ ಬಟ್ಟೆ ಧರಿಸಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಸಿಹಿ ಹಂಚಿ ಪರಸ್ಪರ ಶುಭಾಶಯ ಕೋರಿದರು. ಚರ್ಚ್‌ಗೆ ಭೇಟಿ ನೀಡುವ ಎಲ್ಲರಿಗೂ ಕೇಕ್‌ ಹಂಚಿದರು. ಕ್ರಿಸ್‌ಮಸ್‌ ಪ್ರಯುಕ್ತ ಡಿಸೆಂಬರ್‌ 1ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮಕ್ಕಳು ಒಳಗೊಂಡಂತೆ ಎಲ್ಲ ವಯೋಮಾನದವರು ಸೆಂಟಾ ಕ್ಲಾಸ್‌ ವೇಷ ತೊಟ್ಟು ಮಿಂಚಿದರು. ಮಕ್ಕಳು ನಾನಾ ಬಗೆಯ ಉಡುಗೊರೆಗಳನ್ನು ಪಡೆದು ಖುಷಿಪಟ್ಟರು. ನಿರ್ಗತಿಕರು, ಬಡವರು ಸಹ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಅವರಿಗೆ ಆಹಾರ, ಬಟ್ಟೆ, ಇತರೆ ಸಾಮಗ್ರಿ ವಿತರಿಸಲಾಯಿತು. ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ಕ್ರೈಸ್ತರು ತಮ್ಮ ಅಕ್ಕಪಕ್ಕದ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯ ಕೋರಿದರು. ಮನೆ ಮಂದಿ ಒಟ್ಟಾಗಿ ಕುಳಿತು ಹಬ್ಬದೂಟ ಸವಿದರು.

ಸಿಎಸ್‌ಐ ವೆಸ್ಲಿ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿ‌ತ್ತು. ಮಕ್ಕಳು, ಮಹಿಳೆಯರು ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಸಿಎಸ್‌ಐ ವೆಸ್ಲಿ ಚರ್ಚ್‌ ಸಭಾಪಾಲಕ ಮಾರ್ಗನ್‌ ಸಂದೇಶ್‌ ಸಾಮೂಹಿಕ ಪ್ರಾರ್ಥನೆಯ ನಂತರ ಮಾತನಾಡಿ ‘ಏಸು ಹುಟ್ಟಿದ ದಿನದ ಸಂಕೇತವಾಗಿ ಕ್ರಿಸ್‍ಮಸ್‌ ಆಚರಿಸಲಾಗುತ್ತದೆ. ಈ ಬಾರಿ ಯಾವುದೇ ನಿರ್ಬಂಧಗಳು ಇಲ್ಲದೆ ಎಲ್ಲರು ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಕ್ರಿಸ್‌ಮಸ್‌ ಅನ್ನು ಬೆಳಕಿನ ಹಬ್ಬ ಎಂದು ಆಚರಿಸಲಾಗುತ್ತದೆ. ಕತ್ತಲಿನಲ್ಲಿ ಇದ್ದವರ ಬಾಳಿಗೆ ಏಸುಕ್ರಿಸ್ತ ಬೆಳಕಾಗಿ ಬಂದರು ಎಂಬ ನಂಬಿಕೆ ಇದೆ. ಹಾಗಾಗಿ ಎಲ್ಲ ಚರ್ಚ್‌ಗಳಲ್ಲಿ ದೀಪ ಬೆಳಗಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT