ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್ | ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ

ಕಾಂಗ್ರೆಸ್‌ ಮುಖಂಡರ ಸಭೆ; ತಹಶೀಲ್ದಾರ್‌ಗೆ ಮನವಿ
Published 4 ಜುಲೈ 2024, 5:13 IST
Last Updated 4 ಜುಲೈ 2024, 5:13 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿರುವ ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ತಾಲ್ಲೂಕು ಕಚೇರಿ ಎದುರು ಬುಧವಾರ ಸಭೆ ನಡೆಸಿದರು. ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಹೇಮಾವತಿ ನಾಲಾ ಯೋಜನೆ ಅನುಷ್ಠಾನಗೊಂಡಿದ್ದೆ ಜಿಲ್ಲೆಯ ಕೆಲ ಭಾಗ ಸೇರಿದಂತೆ ಕುಣಿಗಲ್ ತಾಲ್ಲೂಕಿಗೆ ಅನುಕೂಲವಾಗಲೆಂದು. ಆದರೆ ನಾಲಾ ಕಾಮಗಾರಿ ಪೂರ್ಣಗೊಂಡು ಹೇಮಾವತಿ ನೀರು ನಾಲೆಗಳಲ್ಲಿ ಹರಿದು 25 ವರ್ಷವಾದರೂ ತಾಲ್ಲೂಕಿನ ಪಾಲಿನ 3.5 ಟಿಎಂಸಿ ನೀರನ್ನು ಇದುವರೆಗೂ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದರು.

ತಾಲ್ಲೂಕಿಗೆ ನೀರು ಬರುವ ಮೊದಲೇ ಜಿಲ್ಲೆಯ ಇತರೆ ತಾಲ್ಲೂಕು ಸೇರಿದಂತೆ ಕೃಷ್ಣ ಮೇಲ್ದಂಡೆ ಭಾಗಗಳಿಗೆ ನೀರು ಹರಿಯುತ್ತಿದ್ದು, ನೀರಿನ ವಿಚಾರದಲ್ಲಿ ತಾಲ್ಲೂಕಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ಅವರ ದೂರದೃಷ್ಟಿಯ ಫಲದಿಂದ ಲಿಂಕ್ ಕೆನಾಲ್ ಯೋಜನೆ ಜಾರಿಗೆ ಬಂದಿದೆ ಎಂದರು.

ಕಾಂಗ್ರೆಸ್‌ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಲಿಂಕ್‌ ಕೆನಾಲ್‌ ಕಾಮಗಾರಿ ಪ್ರಾರಂಭಿಸುತ್ತಿರುವ ಸಮಯದಲ್ಲಿ ತುಮಕೂರು, ಗುಬ್ಬಿ, ತುರುವೇಕೆರೆ ಭಾಗದ ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಸಂಪರ್ಕ ಕಾಲುವೆಯಿಂದ ಜಿಲ್ಲೆಯ ಇತರೆ ಭಾಗಗಳಿಗೆ ತೊಂದರೆಯಾಗುವುದಿಲ್ಲ. ತಾಲ್ಲೂಕಿನ ಪಾಲಿನ ನೀರು ಮಾತ್ರ ಪಡೆದುಕೊಳ್ಳಲು ಅಗತ್ಯವಿರುವ ಲಿಂಕ್‌ ಕೆನಾಲ್‌ಗೆ ಅಡ್ಡಿಪಡಿಸಬೇಡಿ ಎಂದು ಹೇಳಿದರು.

ಹೇಮಾವತಿ ನೀರು ಮೂಲ ಯೋಜನೆಯಲ್ಲಿಲ್ಲದ ತಾಲ್ಲೂಕುಗಳಿಗೆ ಹರಿಯುವಾಗ ಧ್ವನಿ ಎತ್ತದ ಪಕ್ಕದ ತಾಲ್ಲೂಕಿನ ಶಾಸಕರು ರಾಜಕೀಯ ಉದ್ದೇಶದಿಂದ ಈಗ ಅಡ್ಡಿಪಡಿಸುತ್ತಿದ್ದಾರೆ. ತಾಲ್ಲೂಕಿಗೆ ನೀರಿನ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದರೂ ದನಿ ಎತ್ತದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ವರ್ತನೆ ಖಂಡನೀಯ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಯೂತ್ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಗೌಡ, ಮುಖಂಡರಾದ ಶ್ರೀನಿವಾಸ್, ಬಿ.ಡಿ.ಕುಮಾರ್, ಹರೀಶ್, ರಂಗಸ್ವಾಮಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT