ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹5 ಲಕ್ಷ ವೆಚ್ಚದಲ್ಲಿ ಕಲಾಕೃತಿ ನಿರ್ಮಾಣ, ನಿರ್ವಹಣೆಗೆ ಅಧಿಕಾರಿಗಳ ನಿರ್ಲಕ್ಷ್ಯ

Published 20 ಜೂನ್ 2024, 7:39 IST
Last Updated 20 ಜೂನ್ 2024, 7:39 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್‌ ಸಿಟಿಯಿಂದ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ‘ಐ ಲವ್‌ ತುಮಕೂರು’ ಎಂಬ ಕಲಾಕೃತಿಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಇಲ್ಲಿನ ಕಟ್ಟೆಗಳು ಮದ್ಯ ಪಾರ್ಟಿ ಆಯೋಜನೆಯ ಸ್ಥಳಗಳಾಗಿ ಬದಲಾಗಿವೆ.

ನಗರದ ಬಿಜಿಎಸ್‌ ವೃತ್ತ, ಅಮಾನಿಕೆರೆ ಮುಂಭಾಗದಲ್ಲಿ ‘ಐ ಲವ್‌ ತುಮಕೂರು’ ಎಂದು ಕನ್ನಡ, ಇಂಗ್ಲಿಷ್‌ ಭಾಷೆಯಲ್ಲಿ ಕಲಾಕೃತಿ ರಚಿಸಲಾಗಿದೆ. ಆದರೆ ಇದರ ನಿರ್ವಹಣೆಯಲ್ಲಿ ಸ್ಮಾರ್ಟ್‌ ಸಿಟಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಹಿಂದೆ ಬಿದ್ದಂತೆ ಕಾಣುತ್ತಿದೆ. ಕಲಾಕೃತಿ ಪಕ್ಕ, ಹಿಂದೆ ಮದ್ಯದ ಬಾಟಲಿ ಬಿಸಾಡಲಾಗಿದೆ. ನಗರದ ಹೃದಯ ಭಾಗ, ಸದಾ ಜನರು ಓಡಾಡುವ ಸ್ಥಳಗಳು ಅವ್ಯವಸ್ಥೆಯ ತಾಣಗಳಾಗಿ ಬದಲಾಗಿವೆ. ರಾತ್ರಿ ಸಮಯದಲ್ಲಿ ಅಕ್ರಮ ಚಟುವಟಿಕೆಗಳಿಗೆ ಈ ಜಾಗ ಬಳಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ನಗರದ ಸೌಂದರ್ಯೀಕರಣಕ್ಕೆ ಪಾಲಿಕೆ, ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಇದರಲ್ಲಿ ಈ ಕಲಾಕೃತಿಯೂ ಒಂದು. ಇದರ ನಿರ್ಮಾಣದ ನಂತರ ನಿರ್ವಹಣೆಯನ್ನು ಪಾಲಿಕೆಗೆ ವಹಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಇಲ್ಲಿನ ಸ್ವಚ್ಛತೆ ಕುರಿತು ಗಮನ ಹರಿಸಿಲ್ಲ. ಕಲಾಕೃತಿ ಬಳಿ ಮಳೆ ನೀರು ನಿಂತು ಗಬ್ಬು ವಾಸನೆ ಬೀರುತ್ತಿದೆ. ಜಿಲ್ಲೆಯ ವಿವಿಧ ಕಡೆಗಳಿಂದ ನಗರಕ್ಕೆ ಬಂದವರು ಕಲಾಕೃತಿ ಬಳಿ ಫೋಟೊ ತೆಗೆಸಿಕೊಳ್ಳುವಾಗ ಮೂಗು ಮುಚ್ಚಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಜನರು ಸ್ವಲ್ಪ ಹೊತ್ತು ಕೂಡ ಇಲ್ಲಿ ನಿಲ್ಲುತ್ತಿಲ್ಲ. ಫೋಟೊಗೆ ಫೋಸು ಕೊಟ್ಟು ಜಾಗ ಖಾಲಿ ಮಾಡುತ್ತಿದ್ದಾರೆ.

ಸಾಂಕ್ರಾಮಿಕ ರೋಗಗಳ ತಡೆಗೆ ಜಿಲ್ಲಾ ಆರೋಗ್ಯ ಇಲಾಖೆ, ಪಾಲಿಕೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತಾರೆ. ತಮ್ಮ ಕಚೇರಿ ಮುಂಭಾಗದ ಸ್ಥಳವೇ ಸಾಂಕ್ರಾಮಿಕ ರೋಗ ಹರಡುವ ಜಾಗವಾಗಿ ಬದಲಾಗಿದೆ. ಇದುವರೆಗೆ ಯಾರೊಬ್ಬರೂ ಇದರ ಸ್ವಚ್ಛತೆಗೆ ಮುಂದಾಗಿಲ್ಲ.

‘ಸ್ಮಾರ್ಟ್‌ ಸಿಟಿಯಿಂದ ಬೇಡದ ಕೆಲಸಗಳಿಗೆ ಹೆಚ್ಚಿನ ಹಣ ಪೋಲು ಮಾಡುತ್ತಿದ್ದಾರೆ. ಜನರಿಗೆ ಉಪಯೋಗವಾಗುವ ಯೋಜನೆ ರೂಪಿಸುತ್ತಿಲ್ಲ. ರಸ್ತೆ ಅಭಿವೃದ್ಧಿ ಬಿಟ್ಟರೆ ಇತರೆ ಕಾರ್ಯಗಳಿಗೆ ಅಧಿಕಾರಿಗಳು ಆದ್ಯತೆ ನೀಡುತ್ತಿಲ್ಲ. ಕೆಲಸಗಳು ಸಹ ಗುಣಮಟ್ಟದಿಂದ ಕೂಡಿಲ್ಲ’ ಎಂದು ನಗರದ ನಿವಾಸಿ ಅನಿಲ್‌ಕುಮಾರ್‌ ಆರೋಪಿಸಿದರು.

‘ಪ್ರತಿ ದಿನ ನೂರಾರು ಜನ ಓಡಾಡುವ ಸ್ಥಳದಲ್ಲಿಯೇ ಸ್ವಚ್ಛತೆ, ಅಗತ್ಯ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಕೇವಲ ಯೋಜನೆ ರೂಪಿಸಿ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅನುಷ್ಠಾನಗೊಳಿಸಿದರೆ ಸಾಲದು. ಅದರ ನಿರ್ವಹಣೆಯ ಬಗ್ಗೆಯೂ ಮುಂದಾಲೋಚನೆ ಇಟ್ಟುಕೊಳ್ಳಬೇಕು’ ಎಂದು ಶಿವಶಂಕರ್‌ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ಬಿಜಿಎಸ್‌ ವೃತ್ತದ ಕಲಾಕೃತಿ ಬಳಿ ಕಲುಷಿತ ನೀರು ಪ್ಲಾಸ್ಟಿಕ್‌
ತುಮಕೂರು ಬಿಜಿಎಸ್‌ ವೃತ್ತದ ಕಲಾಕೃತಿ ಬಳಿ ಕಲುಷಿತ ನೀರು ಪ್ಲಾಸ್ಟಿಕ್‌
ಕಲಾಕೃತಿ ಹಿಂಭಾಗದಲ್ಲಿ ಬಿಸಾಡಿರುವ ಮದ್ಯದ ಬಾಟಲಿ
ಕಲಾಕೃತಿ ಹಿಂಭಾಗದಲ್ಲಿ ಬಿಸಾಡಿರುವ ಮದ್ಯದ ಬಾಟಲಿ
ಎರಡು ಕಡೆ ಕಲಾಕೃತಿ ನಿರ್ಮಾಣ ಕಲಾಕೃತಿ ಬಳಿ ಸ್ವಚ್ಛತೆ ಮಾಯ ಜವಾಬ್ದಾರಿ ಮರೆತ ಅಧಿಕಾರಿಗಳು
ಸ್ವಚ್ಛತೆ ಮರೀಚಿಕೆ
ಮಹಾನಗರ ಪಾಲಿಕೆ ಮುಂಭಾಗದಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ನಗರದ ವಿವಿಧ ಕಡೆಗಳಲ್ಲಿ ಡೆಂಗಿ ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಅಧಿಕಾರಿಗಳು ತಮ್ಮ ಕಚೇರಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು ಮರೆತಿದ್ದಾರೆ. ನಗರದ ಹೃದಯ ಭಾಗದಲ್ಲಿಯೇ ಸ್ವಚ್ಛತೆ ಕಣ್ಮರೆಯಾಗಿದೆ. ಕೆ.ಪಿ.ಮಹೇಶ್‌ ಮಾಜಿ ಸದಸ್ಯರು ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT