ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡವರು– ಉಳ್ಳವರ ಮಧ್ಯೆ ಸಂಘರ್ಷ’

ಮುದ್ದಹನುಮೇಗೌಡರ ಜತೆ ಸಂವಾದ
Published 7 ಏಪ್ರಿಲ್ 2024, 4:41 IST
Last Updated 7 ಏಪ್ರಿಲ್ 2024, 4:41 IST
ಅಕ್ಷರ ಗಾತ್ರ

ತುಮಕೂರು: ‘ಲೋಕಸಭೆ ಚುನಾವಣೆ ಬಡವರು– ಉಳ್ಳವರ ಮಧ್ಯದ ಸಂಘರ್ಷ. ನಾನು ಹಣದಲ್ಲಿ ದುರ್ಬಲನಾಗಿದ್ದರೂ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಮಾನವೀಯತೆಯ ಹೃದಯ ಶ್ರೀಮಂತಿಕೆ ಹೊಂದಿದ್ದೇನೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಸ್ಲಂ ಜನಾಂದೋಲನ ಕರ್ನಾಟಕ,‌ ಕೊಳೆಗೇರಿ ನಿವಾಸಿಗಳ ಸಮಿತಿಯಿಂದ ಹಮ್ಮಿಕೊಂಡಿದ್ದ ಬಾಬು ಜಗಜೀವನ್‌ ರಾಂ ಜಯಂತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಲಂ ಜನರ ಒತ್ತಾಯಗಳನ್ನು ಈಗಾಗಲೇ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಸಮಾನ ಶಿಕ್ಷಣ ಹಕ್ಕು, ರಾಷ್ಟ್ರೀಯ ಭೂ ಬ್ಯಾಂಕ್‌ ನೀತಿ, ವಸತಿ ಹಕ್ಕು ಕಾಯ್ದೆ ಜಾರಿ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗುವುದು. ಸಂಸತ್ ಸದಸ್ಯರ ನಿಧಿಯಿಂದ ಸ್ಲಂಗಳ ಅಭಿವೃದ್ಧಿಗೆ ಅನುದಾನ ಕೊಡಲಾಗುವುದು ಎಂದು ಭರವಸೆ ನೀಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ದೇಶಕ್ಕೆ ಮೋದಿ ಗ್ಯಾರಂಟಿ ಎಂದು ಬಿಜೆಪಿ ಹೇಳುವ ಮೂಲಕ ಜನರನ್ನು ಭ್ರಮೆಯಲ್ಲಿ ಮುಳುಗಿಸಿದೆ. ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗುತ್ತದೆ. ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಬಡವರನ್ನು ಗೇಲಿ ಮಾಡಿದವರಿಗೆ ಈ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು’ ಎಂದರು.

‘ಬಿಜೆಪಿ ಮತ್ತೊಮ್ಮೆ ಆಡಳಿತಕ್ಕೆ ಬಂದರೆ ಸನಾತನ ಧರ್ಮವನ್ನು ಜಾರಿಗೆ ತರುತ್ತದೆ. ಮೀಸಲಾತಿ ಕಿತ್ತು ಕಾರ್ಪೊರೇಟ್‌ ಕುಳಗಳ ಪರವಾಗಿ ಕಾನೂನು ರೂಪಿಸುತ್ತದೆ. ಹಾಗಾಗಿ ನಾವೆಲ್ಲಾ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಚಿಂತಕ ಕೆ.ದೊರೈರಾಜ್‌, ‘ಸಂವಿಧಾನ ಉಳಿಸಲು, ಜನರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್‌ ಬೆಂಬಲಿಸಬೇಕು. ಎಲ್ಲ ಸಮುದಾಯಗಳ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮುದ್ದಹನುಮೇಗೌಡ ಅವರನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ’ ಎಂದು ತಿಳಿಸಿದರು.

ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಕಾಂಗ್ರೆಸ್‌ ಮುಖಂಡರಾದ ಎನ್.ಗೋವಿಂದರಾಜ್‌, ಡಾ.ಬಸವರಾಜು, ಡಾ.ಮುರುಳೀಧರ್‌, ವಾಲೆಚಂದ್ರಯ್ಯ, ಜಿ.ಟಿ.ವೆಂಕಟೇಶ್, ಶಿವಕುಮಾರ್, ದಲಿತ ಸಂಘರ್ಷ ಸಮಿತಿಯ ನರಸೀಯಪ್ಪ, ನರಸಿಂಹಯ್ಯ, ಬಿ.ಎಚ್‌.ಗಂಗಾಧರ್, ರಾಮಚಂದ್ರ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‍ ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ, ಪತ್ರಕರ್ತ ಎಸ್.ನಾಗಣ್ಣ, ಮುಖಂಡರಾದ ಕೊಟ್ಟಶಂಕರ್, ಪಿ.ಎನ್‌.ರಾಮಯ್ಯ, ಡ್ಯಾಗೇರಹಳ್ಳಿ ವಿರೂಪಾಕ್ಷ, ರಂಗಧಾಮಯ್ಯ, ಮೋಹನ್, ಜಯಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT