ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಶ್ಚಟಗಳಿಗೆ ದಾಸನಾಗುವ ಮನುಷ್ಯ ಎಂದಿಗೂ ಉದ್ಧಾರ ಆಗಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ವ್ಯಸನ ಮುಕ್ತರ ಸಮಾವೇಶ
Last Updated 5 ಅಕ್ಟೋಬರ್ 2019, 16:21 IST
ಅಕ್ಷರ ಗಾತ್ರ

ತುಮಕೂರು: ದುಶ್ಚಟಗಳಿಗೆ ದಾಸನಾಗುವ ಮನುಷ್ಯ ಎಂದಿಗೂ ಉದ್ಧಾರ ಆಗುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಶನಿವಾರ ಆಯೋಜಿಸಿದ್ದ ‘ಗಾಂಧಿ ಜಯಂತಿ, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ವ್ಯಸನ ಮುಕ್ತರ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ಮನಸ್ಸು ನಮ್ಮನ್ನು ಆಳಬಾರದು. ಮನಸ್ಸನ್ನು ನಮ್ಮ ಹಿಡತದಲ್ಲಿ ಇಟ್ಟುಕೊಳ್ಳಬೇಕು. ಸ್ನೇಹಿತರ ಸಹವಾಸದಿಂದ ಚಟಗಳನ್ನು ಬೆಳೆಸಿಕೊಳ್ಳುತ್ತೇವೆ. ದುಶ್ಚಟಗಳಿದ್ದರೆ ಸಮಾಜ, ಕುಟುಂಬದ ಸದಸ್ಯರು ನಮ್ಮಿಂದ ದೂರವಾಗುತ್ತಾರೆ. ಶಾಪ ಹಾಕುತ್ತಾರೆ ಎಂದರು.

ಎಲ್ಲರು ಗುರುತಿಸುವ, ಎಲ್ಲರು ಗೌರವಿಸುವ ವ್ಯಕ್ತಿಯಾಗಬೇಕು. ಅದರಲ್ಲೇ ಜೀವನದ ಸಾರ್ಥಕತೆ ಅಡಗಿದೆ. ಕುಟುಂಬದ ಸದಸ್ಯರು ಸಮಾಜದಲ್ಲಿ ಅವಹೇಳನ ಮಾಡಿಸಿಕೊಳ್ಳುವ ಸ್ಥಿತಿ ತರಬಾರದು. ನಮ್ಮನ್ನು ತಿದ್ದಿಕೊಳ್ಳುವುದೇ ದೊಡ್ಡ ಧರ್ಮ ಎಂದು ಹೇಳಿದರು.

ಅಯ್ಯಪ್ಪ ಸ್ವಾಮಿ ವೃತವೆಂದು 15 ದಿನ ಕುಡಿಯುವುದನ್ನು ಬಿಡುತ್ತಾರೆ. ವೃತ ಮುಗಿದ ಮರುದಿನ ಬಿಟ್ಟ ದಿನಗಳ ಮದ್ಯ ಪ್ರಮಾಣವನ್ನು ಸೇರಿಸಿ ಕುಡಿಯುತ್ತಾರೆ. ಇಂತಹ ಪ್ರವೃತ್ತಿ ಇದ್ದರೆ ವೃತಗಳನ್ನು ಮಾಡಿಯಾದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ತಪ್ಪು ಮಾಡುವುದು ಆಕಸ್ಮಿಕ, ತಿಳಿದಿದ್ದರೂ ತಪ್ಪು ಮಾಡುವುದು ದ್ರೋಹ ಎಂದು ಅವರು ತಿಳಿಸಿದರು.

ಜ್ಞಾನಕೇಂದ್ರದ ಅಧ್ಯಕ್ಷೆ ಶ್ರದ್ಧಾ ಅಮಿತ್‌, ವ್ಯಸನ ಮುಕ್ತ ಶಿಬಿರಗಳನ್ನು ನಡೆಸುವುದು ಕಾರ್ಯಸಾಧುವಲ್ಲ ಎಂದು ಬಹಳ ಜನ ಹೇಳಿದ್ದರು. ಅವರ ಮಾತು ಈಗ ಸುಳ್ಳಾಗಿದೆ. ನಾವು ಕುಡಿತವನ್ನು ದ್ವೇಷಿಸಬೇಕು, ಕುಡಕರನ್ನು ಅಲ್ಲ. ಶಿಬಿರಕ್ಕೆ ಜೀವಂತ ಶವವಾಗಿ ಬಂದವರನ್ನು, ‘ಶಿವ’ರನ್ನಾಗಿ ಮಾಡಿ ಕಳುಹಿಸುವ ಕೆಲಸ ನಡೆಯುತ್ತಿದೆ’ ಎಂದರು.

ದೇಹವೇ ದೇಗುಲ ಇದ್ದಂತೆ. ಅದನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಸಜ್ಜನರ ಸಂಘದಿಂದ ಒಳ್ಳೆಯ ಹವ್ಯಾಸಗಳು ಬರುತ್ತವೆ ಎಂದು ಹೇಳಿದರು.

ಮೇಯರ್‌ ಲಲಿತಾ ರವೀಶ್‌, ದುಶ್ಚಟಗಳಿಗೆ ಹಾಳಾಗದಿದ್ದರೆ ಉತ್ತಮ ಜೀವನ ನಿಮ್ಮದಾಗುತ್ತದೆ. ನೀವು ಚನ್ನಾಗಿದ್ದು, ನಿಮ್ಮ ಮಕ್ಕಳನ್ನು ಓದಿಸಿ ಅಧಿಕಾರಿಗಳನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದರು.

ತುಮಕೂರು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರೆಸ್‌ ರಾಜಣ್ಣ, ಜಿಲ್ಲಾ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಆರ್‌.ಕಾಮರಾಜು ಇದ್ದರು.

*
ವ್ಯಸನ ಮುಕ್ತದಿಂದ ಬದಲಾದ ಬದುಕು
ಸ್ನೇಹಿತರ ಸಹವಾಸದಿಂದ 26ನೇ ವಯಸ್ಸಿಗೆ ಕುಡಿಯುವುದನ್ನು ರೂಢಿಸಿಕೊಂಡೆ. ಅದರಿಂದ ನನ್ನ ಆದಾಯವು ಹೊಯ್ತು, ನೆಮ್ಮದಿಯೂ ಹೋಗಿತ್ತು. ಶಿಬಿರದ ಬಳಿಕ ಜೀವನಕ್ಕೆ ಮತ್ತೆ ಹೊಸ ಕಳೆ ಬಂದಿದೆ ಎಂದರು ಚನ್ನರಾಯಪಟ್ಟಣದ ಅಗ್ರಹಾರ ಬೆಳಗುಲಿಯ ಬಿ.ಎನ್‌.ಸುದರ್ಶನ್(43).

ಕುಡಿತದಿಂದಾಗಿ ಸರಿಸುಮಾರು ₹ 10 ಲಕ್ಷ ಕಳೆದುಕೊಂಡಿದ್ದೇನೆ. ಮನೆಯವರಿಂದಾಗಿ ಧರ್ಮಸ್ಥಳ ಸಂಸ್ಥೆಯವರು ನಡೆಸುವ ಶಿಬಿರದ ಬಗ್ಗೆ ತಿಳಿಯಿತು. ಮದ್ಯ ವ್ಯಸನದಿಂದಾಗುವ ಕಷ್ಟ–ನಷ್ಟಗಳನ್ನು ಶಿಬಿರದಲ್ಲಿ ತಿಳಿಹೇಳಿದರು. ಕುಡಿತ ಬಿಟ್ಟ ನಂತರ ಸಮಾಜದಲ್ಲಿ ಗೌರವ ಸಿಗುತ್ತಿದೆ ಎಂದು ಅವರು ಸಂತಸದಿಂದ ಹೇಳಿದರು.

ಮದ್ಯದ ಕಡೆ ಗಮನ ಹೋಗಲ್ಲ: ಶಿಬಿರದಲ್ಲಿ ಭಾಗವಹಿಸಿದ ಬಳಿಕ ನನ್ನ ಪಕ್ಕವೇ ಯಾರಾದರೂ ಕುಡಿದರೂ ಅತ್ತ ನನ್ನ ಗಮನ ಹೋಗುವುದಿಲ್ಲ ಎಂದು ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿಯ ರಾಜಯ್ಯ(38) ತಿಳಿಸಿದರು.

ಕೊಬ್ಬರಿ ಸುಲಿದ ಬಳಿಕ ಆಗುವ ಆಯಾಸವನ್ನು ತಣಿಸಿಕೊಳ್ಳಲು 15ನೇ ವಯಸ್ಸಿನಿಂದಲೇ ಕುಡಿಯಲು ಶುರು ಮಾಡಿದೆ. ಒಂದು ದಿನ ಕುಡಿತ ಬಿಟ್ಟರೂ ಏನೋ ಕಳೆದುಕೊಂಡ ಅನುಭವ ಆಗುತ್ತಿತ್ತು. ಕುಡಿದಾಗ ಜನ ನನ್ನ ಹತ್ತಿರ ಬರುತ್ತಿರಲಿಲ್ಲ. ಚಟದಿಂದ ದೂರವಾದ ಬಳಿಕ, ಮನೆಯವರು, ಊರಿನವರು ಈಗ ನನಗೆ ಹತ್ತಿರವಾಗಿದ್ದಾರೆ. ಮನೆಯಲ್ಲೂ ಸಂತೋಷ ನೆಲೆಸಿದೆ ಎಂದು ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT