ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಬಿಟಿ ಕ್ಷೇತ್ರಕ್ಕೆ ಉತ್ತಮ ತಾಣ

ಶಿವಕುಮಾರ ಸ್ವಾಮೀಜಿ ಜೈವಿಕವನ ಉದ್ಘಾಟಿಸಿದ ಡಿಸಿಎಂ ಅಶ್ವತ್ಥನಾರಾಯಣ
Last Updated 12 ಆಗಸ್ಟ್ 2020, 16:54 IST
ಅಕ್ಷರ ಗಾತ್ರ

ತುಮಕೂರು: ರಾಜಧಾನಿ ಬೆಂಗಳೂರಿಗೆ ಸರಿಸಮನಾಗಿ ಅಷ್ಟೇ ವೇಗದಿಂದ ಬೆಳೆಯುತ್ತಿರುವ ತುಮಕೂರು ಜಿಲ್ಲೆಯಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಗ್ರಾಮೀಣಾಭಿವೃದ್ಧಿ ಕೇಂದ್ರದಡಿ ಪಂಡಿತನಹಳ್ಳಿ ಬಳಿ ಸ್ಥಾಪಿಸಿರುವ ಶಿವಕುಮಾರ ಸ್ವಾಮೀಜಿ ಜೈವಿಕ ಉದ್ಯಾನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕವಾಗಿ ಶ್ರೀಮಂತವಾಗಿರುವ ತುಮಕೂರು ಜಿಲ್ಲೆಯಲ್ಲಿ ಬಿಟಿ ಕ್ಷೇತ್ರಕ್ಕೆ ಹೇಳಿಮಾಡಿಸಿದ ವಾತಾವರಣ ಇದೆ. ಇದೀಗ ಲೋಕಾರ್ಪಣೆ ಆಗಿರುವ ಜೈವಿಕವನವೂ ಉತ್ತಮ ಪ್ರಯತ್ನವಾಗಿದೆ ಎಂದರು.

ತುಮಕೂರು ನಗರದ ಸುತ್ತಮುತ್ತಲಿನ ಪ್ರದೇಶಗಳು ಹಿಂದುಳಿದಿವೆ. ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಈ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು. ಅದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡಲಿದೆ. ಅಭಿವೃದ್ಧಿಯಲ್ಲಿ ಸುಸ್ಥಿರತೆ ಮತ್ತು ವಾಣಿಜ್ಯಾತ್ಮಕ ಅವಕಾಶ ಇಲ್ಲವಾದರೆ ಆ ಪ್ರಗತಿಗೆ ಯಾವುದೇ ಅರ್ಥ ಇರುವುದಿಲ್ಲ ಎಂದು ಹೇಳಿದರು.

ಶೈಕ್ಷಣಿಕವಾಗಿ ಬಹಳಷ್ಟು ಮುಂದುವರಿದಿರುವ ತುಮಕೂರಿನಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಸಮಸ್ಯೆ ಆಗುವುದಿಲ್ಲ. ಉತ್ತಮ ಹಾಗೂ ರಚನಾತ್ಮಕ ಯೋಜನೆಯನ್ನು ರೂಪಿಸಿ ಅದನ್ನು ಸಮರ್ಥವಾಗಿ ಜಾರಿ ಮಾಡುವ ಇಚ್ಛಾಶಕ್ತಿ ಬೇಕು. ಅಂತಹ ಇಚ್ಛಾಶಕ್ತಿ ಯಡಿಯೂರಪ್ಪ ಸರ್ಕಾರಕ್ಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಜತೆಗೆ ಬದ್ಧತೆ ಹಾಗೂ ರಾಜಿಯಾಗದ ಗಟ್ಟಿತನವೂ ಸರ್ಕಾರಕ್ಕೆ ಇದೆ ಎಂದು ಅವರು ನುಡಿದರು.

ಕೊರೊನಾ ನಮ್ಮ ಜೀವನಕ್ರಮವನ್ನು ಬದಲಿಸಿದೆ. ಜಗತ್ತೇ ಒಂದು ಹಳ್ಳಿಯಂತೆ ಆಗಿದೆ. ತಂತ್ರಜ್ಞಾನ ನಮ್ಮೆಲ್ಲರನ್ನು ಹತ್ತಿರ ಮಾಡಿದೆ. ಈಗ ಯಾವುದೂ ಹತ್ತಿರವೂ ಅಲ್ಲ, ದೂರವೂ ಅಲ್ಲ. ಜರ್ಮನಿಯಂಥ ದೇಶದ ಕುಗ್ರಾಮದ ಪ್ರದೇಶದಲ್ಲೂ ಅದ್ಭುತವಾದ ಪ್ರಗತಿ ನೋಡಬಹುದು. ಅಂತಹ ಸ್ಥಿತಿಯನ್ನು ನಮ್ಮ ದೇಶದಲ್ಲೂ ನೋಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅದು ಸಾಕಾರವಾಗುತ್ತಿದೆ ಎಂದು ಸಚಿವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘ನಮ್ಮ ಜಿಲ್ಲೆಗೆ ಬಂದು ಹೋದ ಮೇಲೆ ಅಶ್ವತ್ಥನಾರಾಯಣ್ ಅವರು ಇಲ್ಲಿಗೆ ಏನಾದರೂ ಮಾಡಬೇಕು. ಸೈನ್ಸ್ ಪಾರ್ಕ್ ಮತ್ತು ಟೆಕ್ನಾಲಜಿ ಪಾರ್ಕ್ ಮಾಡಿಕೊಡಬೇಕು. ಇದಕ್ಕಾಗಿ ನಾವು ಜಾಗವನ್ನು ಗುರುತಿಸಿಕೊಡುತ್ತೇವೆ’ ಎಂದು ಕೋರಿದರು.

‘ಜಿಲ್ಲೆಯಲ್ಲಿ ತೆಂಗು, ಕೊಬ್ಬರಿ ಪ್ರಮುಖ ಬೆಲೆ. ಕೊಬ್ಬರಿ ಎಣ್ಣೆಯನ್ನು ಮಾರುಕಟ್ಟೆ ಮಾಡಲು ಒಂದು ಬ್ರಾಂಡ್‌ ಸೃಷ್ಟಿಸಬೇಕಾಗಿದೆ. ಈ ಕಾರಣದಿಂದ ಅಶ್ವತ್ಥನಾರಾಯಣ್ ಅವರು ನಮಗೆ ಇಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬ್ರಾಂಡಿಗ್ ಬಗ್ಗೆ ಆಲೋಚನೆ ಮಾಡಬೇಕಾಗಿದೆ’ ಎಂದು ಹೇಳಿದರು.

ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿದರು. ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಂ.ಆರ್.ದಿನೇಶ್ ಹಾಜರಿದ್ದರು.

***

ವಿ.ವಿ ಅಭಿವೃದ್ಧಿ; ಕುಲಪತಿ ಜತೆ ಚರ್ಚೆ

ತುಮಕೂರು ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರಿಂದ ಸಚಿವರು ಮಾಹಿತಿ ಪಡೆದರು. ಬಿದರಕಟ್ಟೆ ಬಳಿ ನಿರ್ಮಾಣವಾಗುತ್ತಿರುವ ನೂತನ ಕ್ಯಾಂಪಸ್ ವೀಕ್ಷಣೆಯನ್ನು ಸಚಿವರು ಮಾಡಬೇಕಿತ್ತು. ಈ ಕಾರ್ಯಕ್ರಮಕ್ಕಾಗಿಗೆ ಮತ್ತೆ ಬರುವೆ ಎಂದು ಅಶ್ವತ್ಥನಾರಾಯಣ, ವಿ.ವಿಯ ಆಡಳಿತ ಮತ್ತು ಅಭಿವೃದ್ಧಿಯ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಇತ್ತೀಚೆಗೆ ನಿಧನರಾದ ಶಿರಾ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ್ ಅವರ ಮನೆಗೂ ಭೇಟಿ ನೀಡಿದ ಅಶ್ವತ್ಥನಾರಾಯಣ, ಸತ್ಯನಾರಾಯಣ್ ಅವರ ಪತ್ನಿ ಹಾಗೂ ಪುತ್ರನಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT