ಶನಿವಾರ, ಮಾರ್ಚ್ 25, 2023
22 °C

ಬೆಂಗಳೂರು– ತುಮಕೂರು ರೈಲು ಸಂಚಾರ ಪುನರಾರಂಭಕ್ಕೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಬೆಂಗಳೂರು– ತುಮಕೂರು ನಡುವೆ ಕೋವಿಡ್ ಸಮಯದಲ್ಲಿ ನಿಲ್ಲಿಸಿದ್ದ ರೈಲು ಸಂಚಾರವನ್ನು ಮತ್ತೆ ಆರಂಭಿಸಬೇಕು ಎಂಬ ಬೇಡಿಕೆ ಪ್ರಯಾಣಿಕರಿಂದ ವ್ಯಕ್ತವಾಗಿದೆ.

ಕೋವಿಡ್ ಎರಡನೇ ಅಲೆ ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದ್ದು, ಬಹುತೇಕ ಚಟುವಟಿಕೆಗಳು ಆರಂಭವಾಗಿವೆ. ಎಲ್‌ಕೆಜಿಯಿಂದ ಎಲ್ಲಾ ಹಂತದ ಶಾಲಾ, ಕಾಲೇಜುಗಳು ಪ್ರಾರಂಭವಾಗಿವೆ. ಆದರೆ ತುಮಕೂರು– ಬೆಂಗಳೂರು ನಡುವೆ ನಿಲ್ಲಿಸಿರುವ ರೈಲುಗಳ ಸಂಚಾರವನ್ನು ಮತ್ತೆ ಆರಂಭಿಸುತ್ತಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ಗೆ ಮೊದಲು ಬೆಂಗಳೂರು– ತುಮಕೂರು ನಡುವೆ ನಾಲ್ಕು ಬಾರಿ ಮೆಮೊ ರೈಲು ಸಂಚರಿಸುತಿತ್ತು. ಬೆಂಗಳೂರಿನಿಂದ ಬೆಳಿಗ್ಗೆ 9.20 ಗಂಟೆಗೆ ಹೊರಟು ತುಮಕೂರಿಗೆ 11 ಗಂಟೆಗೆ ತಲುಪುತಿತ್ತು. ತುಮಕೂರಿನಿಂದ 11.20ಕ್ಕೆ ಬಿಟ್ಟು 1 ಗಂಟೆಗೆ ಬೆಂಗಳೂರು ಸೇರುತಿತ್ತು. ಬೆಂಗಳೂರಿನಿಂದ 1.40ಕ್ಕೆ ಹೊರಟು ತುಮಕೂರಿಗೆ 4 ಗಂಟೆಗೆ, ಮತ್ತೆ ಇಲ್ಲಿಂದ 4.15ಕ್ಕೆ ಹೊರಟು ಬೆಂಗಳೂರನ್ನು 6 ಗಂಟೆಗೆ ಸೇರುತಿತ್ತು.

ಈ ರೈಲು ಸಂಚಾರದಿಂದ ಬೆಂಗಳೂರು ನಡುವೆ ಸಂಚರಿಸುವವರಿಗೆ ಸಾಕಷ್ಟು ಅನುಕೂಲವಾಗಿತ್ತು. ಉದ್ಯೋಗಿಗಳು, ಇತರೆ ಕೆಲಸ ಕಾರ್ಯ ನಿಮಿತ್ತ, ವಿದ್ಯಾರ್ಥಿಗಳ ಸಂಚಾರಕ್ಕೆ ಸಹಕಾರಿಯಾಗಿತ್ತು. ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ದರ ₹80 ಹಾಗೂ ಪ್ಯಾಸೆಂಜರ್ ರೈಲಿನಲ್ಲಿ ₹20 ಇದೆ. ಎಕ್ಸ್‌ಪ್ರೆಸ್ 40 ನಿಮಿಷದಲ್ಲಿ, ಪ್ಯಾಸೆಂಜರ್ 1.30 ಗಂಟೆ ಅವಧಿಯಲ್ಲಿ ಬೆಂಗಳೂರು ತಲುಪುತ್ತದೆ. ಅಲ್ಪ ಹಣದಲ್ಲಿ, ಕಡಿಮೆ ಸಮಯದಲ್ಲಿ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಹಾಗಾಗಿ ಮತ್ತೆ ರೈಲು ಸಂಚಾರ ಆರಂಭಿಸಬೇಕು ಎಂದು ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ ಟಿ.‍ಪಿ.ಲೋಕೇಶ್ ಆಗ್ರಹಿಸಿದರು.

ತುಮಕೂರು– ಬೆಂಗಳೂರು ನಡುವೆ ವಿದ್ಯುದ್ದೀಕರಣ ಕೆಲಸವೂ ಪೂರ್ಣಗೊಂಡಿದ್ದು, ಮೆಮೊ ರೈಲು ಓಡಿಸಬಹುದು. ಡೀಸೆಲ್ ಬದಲಿಗೆ ವಿದ್ಯುತ್ ರೈಲು ಸಂಚರಿಸಿದರೆ ಖರ್ಚು ಕಡಿಮೆಯಾಗುತ್ತದೆ. ಡೀಸೆಲ್‌ನಲ್ಲಿ ಶೇ 70ರಷ್ಟು ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು.

ಮನವಿ: ತುಮಕೂರು– ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ಸಂಸದ ಜಿ.ಎಸ್.ಬಸವರಾಜು ಅವರನ್ನು ಭೇಟಿಮಾಡಿ ಚರ್ಚಿಸಿದರು. ಅಧಿಕಾರಿಗಳೊಂದಿಗೆ ನಡೆಯುವ ಸಭೆಯಲ್ಲಿ ಚರ್ಚಿಸಿ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಹಿಂದಿನಂತೆ ಎಕ್ಸ್‌ಪ್ರೆಸ್, ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭಿಸಬೇಕು. ಈ ವಾರ ನಡೆಯುವ ಬೆಂಗಳೂರು ವಿಭಾಗ ಮಟ್ಟದ ಸಂಸದರ ಸಭೆಯಲ್ಲಿ ರೈಲು ಸಂಚಾರ ಆರಂಭಿಸಲು ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ಆರಂಭಗೊಂಡಿದ್ದ ಎಲ್ಲ ಎಕ್ಸ್‌ಪ್ರೆಸ್ ರೈಲುಗಳಿಗೆ ಅಂಟಿಸಲಾಗಿದ್ದ ‘ಸ್ಪೆಷಲ್’ ಎಂಬ ವಿಶೇಷ ತೆಗೆದು ಮಾಮೂಲಿ ರೈಲುಗಳನ್ನಾಗಿ ಪರಿವರ್ತಿಸಬೇಕು. ಇದರಿಂದ ಪ್ರಯಾಣ ದರ ಕಡಿಮೆಯಾಗಲಿದೆ. ಉದ್ಯೋಗಿಗಳಿಗೆ ಅನುಕೂಲವಾಗಿದ್ದ ಬೆಂಗಳೂರಿನಿಂದ ಬೆಳಗ್ಗೆ 6.40ಕ್ಕೆ ಹೊರಡುತ್ತಿದ್ದ ಮಹಾಲಕ್ಷ್ಮಿ ರೈಲಿನ ಸಂಚಾರ ಆರಂಭಿಸಬೇಕು. ಸಂಜೆ 6.20ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದ ಅರಸೀಕೆರೆ ರೈಲನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.

ಕೋವಿಡ್ ನಂತರ ಆರಂಭಿಸಿರುವ ಎಕ್ಸ್‌ಪ್ರೆಸ್, ಪ್ಯಾಸೆಂಜರ್ ರೈಲುಗಳು ಯಶವಂತಪುರದವರೆಗೆ ಮಾತ್ರ ಸಂಚರಿಸುತ್ತಿವೆ. ಇವುಗಳನ್ನು ಮೊದಲಿನಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದವರೆಗೆ ವಿಸ್ತರಿಸಬೇಕು. ಇದರಿಂದ ಅರಸೀಕರೆ, ತಿಪಟೂರು, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಉದ್ಯೋಗ ನಿಮಿತ್ತ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕೇಂದ್ರ ನಿಲ್ದಾಣದಲ್ಲಿ ರೈಲುಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದರೆ ತುಮಕೂರು ಭಾಗದ ರೈಲುಗಳನ್ನು ಮೈಸೂರು, ರಾಮನಗರ, ಚೆನ್ನಪಟ್ಟಣದವರೆಗೆ ವಿಸ್ತರಿಸಬಹುದು. ಅಥವಾ ಯಶವಂತಪುರ– ಕೇಂದ್ರ ನಿಲ್ದಾಣದ ಮಧ್ಯೆ ನಿರಂತರವಾಗಿ ಡೆಮು ರೈಲು ಸಂಚಾರ ಆರಂಭಿಸಬೇಕು. ಎಲ್ಲ ಎಕ್ಸ್‌ಪ್ರೆಸ್ ರೈಲುಗಳಿಗೆ 2-3 ಸಾಮಾನ್ಯ ಬೋಗಿ ಅಳವಡಿಸಬೇಕು. ಯಶವಂತಪುರ-ಮಂಗಳೂರು ರೈಲಿಗೆ ಸಂಪರ್ಕ ಕಲ್ಪಿಸಲು ತುಮಕೂರಿನಿಂದ ಹಾಸನಕ್ಕೆ ಲಿಂಕ್ ರೈಲು ಆರಂಭಿಸಬೇಕು ಎಂದು ಮನವಿ ಮಾಡಿದರು.

ತುಮಕೂರು– ಅರಸೀಕೆರೆ ನಡುವೆ ಬೆಳಗ್ಗೆ 8ರ ನಂತರ ಸಂಜೆ 5 ಗಂಟೆವರೆಗೆ ಯಾವುದೇ ಪ್ಯಾಸೆಂಜರ್ ರೈಲು ಸಂಚಾರ ಇಲ್ಲವಾಗಿದೆ. ಈ ಅವಧಿಯಲ್ಲಿ ತುಮಕೂರಿನಿಂದ ಅರಸೀಕೆರೆಗೆ ಪ್ಯಾಸೆಂಜರ್ ಡೆಮು ರೈಲು ಆರಂಭಿಸಬೇಕು ಎಂದು ಕೇಳಿಕೊಂಡರು.

ವೇದಿಕೆ ಹಿರಿಯ ಉಪಾಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ಕರಣಂ ರಮೇಶ್, ಜಂಟಿ ಕಾರ್ಯದರ್ಶಿ ಸಗರ ಚಕ್ರವರ್ತಿ, ಖಜಾಂಚಿ ಆರ್.ಬಾಲಾಜಿ, ನಿರ್ದೇಶಕರಾದ ಸಿ.ನಾಗರಾಜ್, ಶಿವಕುಮಾರ್ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು