ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ

ರಾಜ್ಯ ಸರ್ಕಾರ ವಜಾಗೆ ಒತ್ತಾಯ; ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಗರಣ
Published 29 ಜೂನ್ 2024, 6:11 IST
Last Updated 29 ಜೂನ್ 2024, 6:11 IST
ಅಕ್ಷರ ಗಾತ್ರ

ತುಮಕೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹187 ಕೋಟಿ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದರು. ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಪ್ರತಿಕೃತಿ ದಹಿಸಿದರು.

ನಗರದ ಬಿಜಿಎಸ್ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಕಚೇರಿಗೆ ಮುತ್ತಿಗೆ ಹಾಕಲು ಮುಂದಾದವರನ್ನು ವಶಕ್ಕೆ ಪಡೆದ ಪೊಲೀಸರು, ನಂತರ ಬಿಡುಗಡೆ ಮಾಡಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಿರಿಸಿದ್ದ ₹187 ಕೋಟಿ ದುರುಪಯೋಗ ನಡೆದಿದೆ. ಈ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಚುನಾವಣೆಗಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬೇನಾಮಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಭ್ರಷ್ಟಾಚಾರ ನಡೆಸಲಾಗಿದೆ. ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರ ಕಣ್ಣೊರೆಸಲು ಎಸ್‍ಐಟಿ ತನಿಖೆಗೆ ವಹಿಸಿದ್ದು, ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಆದರೆ ಪ್ರಮುಖ ಆರೋಪಿಗಳನ್ನು ರಕ್ಷಣೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಶಾಸಕ ಬಿ.ಸುರೇಶ್‍ಗೌಡ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಹಗರಣಗಳೇ ತುಂಬಿದ ಲೂಟಿ ಸರ್ಕಾರ. ಬಿಟ್ಟಿ ಭಾಗ್ಯದ ಗುಂಗಿನಲ್ಲಿದ್ದು, ಜನರ ಹಿತ ಮರೆತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವೂ ಇದೆ. ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅನಿಲ್‍ಕುಮಾರ್, ‘ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿದ್ದ ಹಣವನ್ನು ಲೂಟಿ ಮಾಡಲಾಗಿದೆ. ತೆಲಂಗಾಣ, ಆಂಧ್ರಪ್ರದೇಶದ ಚುನಾವಣೆಗೆ ಬಳಸಿಕೊಳ್ಳಲಾಗಿದೆ’ ಎಂದು ದೂರಿದರು.

ಜೆಡಿಎಸ್ ಎಸ್.ಟಿ ಘಟಕದ ರಾಜ್ಯ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ‘ವಾಲ್ಮೀಕಿ ನಿಗಮದಲ್ಲಿದ್ದ ಕೋಟ್ಯಂತರ ರೂಪಾಯಿ ಲೂಟಿ ಮಾಡಿ, ಪರಿಶಿಷ್ಟ ಸಮಾಜದವರಿಗೆ ಅನ್ಯಾಯ ಮಾಡಲಾಗಿದೆ. ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಪಡೆದು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ. ಹಗರಣಕ್ಕೆ ಮುಖ್ಯಮಂತ್ರಿ ನೇರ ಹೊಣೆ’ ಎಂದು ಆಪಾದಿಸಿದರು.

ಬಿಜೆಪಿ ಮುಖಂಡ ಕೊರಟಗೆರೆ ಅನಿಲ್‍ಕುಮಾರ್, ‘ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರ ನಡೆಸಿ, ಬೆಲೆ ಏರಿಕೆ ಮಾಡುವಲ್ಲಿ ನಿರತವಾಗಿದೆ. ಭ್ರಷ್ಟರಿಗೆ ಶಿಕ್ಷೆ ಆಗಬೇಕು’ ಎಂದು ಒತ್ತಾಯಿಸಿದರು.

ಗುಬ್ಬಿ ಜೆಡಿಎಸ್ ಮುಖಂಡ ನಾಗರಾಜು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ವಿಜಯ್‍ಗೌಡ, ಬಿಜೆಪಿ ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಯು.ಆರ್.ವೆಂಕಟೇಶ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ವಕ್ತಾರ ಎಚ್.ಎನ್.ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ರವೀಶಯ್ಯ, ಪ್ರಧಾನ ಕಾರ್ಯದರ್ಶಿ ಗಂಗರಾಜು, ಸಂದೀಪ್‍ಗೌಡ, ಮುಖಂಡರಾದ ಎಸ್.ಪಿ.ಚಿದಾನಂದ್, ಟಿ.ಎಚ್.ಹನುಮಂತರಾಜು, ರಾಕೇಶ್, ದಯಾನಂದ್, ಬಂಬೂ ಮೋಹನ್, ಸಿದ್ದರಾಮಯ್ಯ, ನವಚೇತನ್, ಧನುಷ್ ನಾಯಕ್, ಕೆ.ವೇದಮೂರ್ತಿ, ಟಿ.ಆರ್.ಸದಾಶಿವಯ್ಯ, ಜಿ.ಎನ್.ಬೆಟ್ಟಸ್ವಾಮಿ, ಬೆಳ್ಳಿ ಲೋಕೇಶ್, ಸತ್ಯಮಂಗಲ ಜಗದೀಶ್, ಧರಣೇಂದ್ರಕುಮಾರ್, ರಂಗನಾಥ್, ಇಂದ್ರಕುಮಾರ್, ಅಣ್ಣೇನಹಳ್ಳಿ ಶಿವಕುಮಾರ್, ಪುರುಷೋತ್ತಮ್,
ಪುಟ್ಟರಾಜು ಭಾಗವಹಿಸಿದ್ದರು.

ಶಾಸಕ ಬಿ.ಸುರೇಶ್‌ಗೌಡ ಇತರರನ್ನು ಪೊಲೀಸರು ವಶಕ್ಕೆ ಪಡೆದರು
ಶಾಸಕ ಬಿ.ಸುರೇಶ್‌ಗೌಡ ಇತರರನ್ನು ಪೊಲೀಸರು ವಶಕ್ಕೆ ಪಡೆದರು
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮುಖಂಡ ವೈ.ಎಚ್.ಹುಚ್ಚಯ್ಯ ಇತರರನ್ನು ಪೊಲೀಸರು ವಶಕ್ಕೆ ಪಡೆದರು
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮುಖಂಡ ವೈ.ಎಚ್.ಹುಚ್ಚಯ್ಯ ಇತರರನ್ನು ಪೊಲೀಸರು ವಶಕ್ಕೆ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT