ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಜಿಲ್ಲೆಯಲ್ಲಿ ಡೆಂಗಿ ಉಲ್ಬಣ

ಗಬ್ಬು ವಾಸನೆ ಬೀರುತ್ತಿದೆ ಸ್ಮಾರ್ಟ್‌ ಸಿಟಿ; ತಿಂಗಳಲ್ಲಿ 47 ಪ್ರಕರಣ ದೃಢ
Published 4 ಜುಲೈ 2024, 4:55 IST
Last Updated 4 ಜುಲೈ 2024, 4:55 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಮಳೆಗಾಲದ ಆರಂಭದಲ್ಲೇ ಡೆಂಗಿ ಉಲ್ಬಣಗೊಂಡಿದ್ದು, ಕಳೆದ ಒಂದು ತಿಂಗಳಲ್ಲಿ ಹೊಸದಾಗಿ 47 ಪ್ರಕರಣಗಳು ದೃಢಪಟ್ಟಿವೆ.

ಈ ವರ್ಷದ ಜನವರಿಯಿಂದ ಮೇ ಅಂತ್ಯದ ವರೆಗೆ 123 ಪ್ರಕರಣಗಳು ವರದಿಯಾಗಿದ್ದವು. ಜುಲೈ ಪ್ರಾರಂಭಕ್ಕೆ ಈ ಸಂಖ್ಯೆ 170ಕ್ಕೆ ತಲುಪಿದೆ. ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ. ಗುಣಮಟ್ಟದ ಚಿಕಿತ್ಸೆ ನೀಡುವ, ರೋಗ ಹರಡುವಿಕೆ ತಡೆಯುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗಿ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ ಮೀಸಲಿರಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಡೆಂಗಿ ಪ್ರಕರಣಗಳ ಸಂಖ್ಯೆ ಏರಿಕೆಯತ್ತ ಸಾಗಿದೆ. 2022ರಲ್ಲಿ 187 ಪ್ರಕರಣಗಳು ದಾಖಲಾಗಿದ್ದವು, 2023ರಲ್ಲಿ 361 ಮಂದಿಯಲ್ಲಿ ಡೆಂಗಿ ಸೋಂಕು ಕಾಣಿಸಿಕೊಂಡಿತ್ತು. ಕಳೆದ 6 ತಿಂಗಳಲ್ಲಿ ಒಟ್ಟು 1,542 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 170 ಜನರಲ್ಲಿ ಡೆಂಗಿ ದೃಢಪಟ್ಟಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಇದೇ ವರ್ಷ ಫೆಬ್ರುವರಿಯಲ್ಲಿ ಅತ್ಯಧಿಕ 43 ಪ್ರಕರಣಗಳು ವರದಿಯಾಗಿದ್ದವು. ಇದೀಗ ಜೂನ್‌ನಲ್ಲಿ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿದೆ. ಸ್ಮಾರ್ಟ್‌ಸಿಟಿಯಲ್ಲೇ ಡೆಂಗಿ ಹರಡುವಿಕೆ ಜಾಸ್ತಿ ಇದೆ. ತುಮಕೂರು ಮತ್ತು ಶಿರಾ ತಾಲ್ಲೂಕುಗಳಲ್ಲಿ ಹೆಚ್ಚಿನ ಜನರು ಡೆಂಗಿ ರೋಗದಿಂದ ಬಳಲುತ್ತಿದ್ದಾರೆ. ‘ಸ್ಮಾರ್ಟ್‌ ಸಿಟಿ ಸ್ವಚ್ಛವಾಗಿಲ್ಲ, ನಗರ ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನವಾಗಿ ಬದಲಾಗಿದೆ. ನೀರು ನಿಲ್ಲುವ ಸ್ಥಳಗಳು ಶುಭ್ರವಾಗಿಲ್ಲ’ ಎಂದು ಇಲ್ಲಿನ ಜನರು ದೂರುತ್ತಿದ್ದಾರೆ.

‘ಸ್ಮಾರ್ಟ್‌ ಸಿಟಿಯಲ್ಲಿ ಚರಂಡಿ, ರಾಜ ಕಾಲುವೆ ಸೇರಿದಂತೆ ಇತರೆ ಪ್ರದೇಶಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ನಗರ ಸ್ವಚ್ಛವಾಗಿಟ್ಟುಕೊಂಡು, ರೋಗಗಳು ಹರಡದಂತೆ ಕ್ರಮ ವಹಿಸಬೇಕು. ಫಾಗಿಂಗ್‌ ವ್ಯವಸ್ಥೆ ಮಾಡುವಂತೆ ಪ್ರತಿ ಬಾರಿ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗುತ್ತದೆ. ಆದರೆ ಈ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಹಿಂದೆ ಸಭೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು.

ನಗರದಲ್ಲಿ ಡೆಂಗಿ ಪ್ರಕರಣಗಳು ಏರಿಕೆಯಾದ ಸಮಯದಲ್ಲಿ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಅಧಿಕಾರಿಗಳು ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಫಾಗಿಂಗ್‌ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತಾರೆ. ನಂತರ ಏನು ಬೆಳವಣಿಗೆಯಾಯಿತು? ಪ್ರಕರಣ ತಡೆಗೆ ಏನೆಲ್ಲ ಕ್ರಮಕೈಗೊಳ್ಳಲಾಗಿದೆ ಎಂಬುವುದನ್ನು ಪರಿಶೀಲನೆ ಮಾಡುವುದಿಲ್ಲ. ಕೇವಲ ಸಭೆ ಮಾಡಿ ಸುಮ್ಮನಾಗುತ್ತಿದ್ದಾರೆ. ಡೆಂಗಿ ನಿಯಂತ್ರಣಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ’ ಎಂದು ವೈದ್ಯರೊಬ್ಬರು ಪ್ರತಿಕ್ರಿಯಿಸಿದರು.

ಜನವರಿಯಿಂದ ಜೂನ್‌ ವರೆಗೆ ದಾಖಲಾದ ಡೆಂಗಿ ಪ್ರಕರಣಗಳು

ತಾಲ್ಲೂಕು;ಪ್ರಕರಣ

ಚಿಕ್ಕನಾಯಕನಹಳ್ಳಿ;9

ಗುಬ್ಬಿ;13

ಕೊರಟಗೆರೆ;16

ಕುಣಿಗಲ್;5

ಮಧುಗಿರಿ;10

ಪಾವಗಡ;7

ಶಿರಾ;20

ತಿಪಟೂರು;11

ತುರುವೇಕೆರೆ;13

ತುಮಕೂರು;52

ಹೊರಗಡೆಯಿಂದ ಬಂದವರು;14

ಒಟ್ಟು;170

ಪ್ರತಿ ವರ್ಷ ಹೆಚ್ಚುತ್ತಿದೆ ಡೆಂಗಿ 6 ತಿಂಗಳಲ್ಲಿ 170 ಡೆಂಗಿ ಪ್ರಕರಣ ದೃಢ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ, ಪಾಲಿಕೆ

ಗಂಭೀರ ಪ್ರಕರಣ ಇಲ್ಲ ಡೆಂಗಿ ಸೋಂಕು ಕಾಣಿಸಿಕೊಂಡವರಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಚಿಕಿತ್ಸೆ ಪಡೆದು ವಾಪಸಾಗುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲ. ಜ್ವರದ ಲಕ್ಷಣಗಳು ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಡಾ.ಚಂದ್ರಶೇಖರ್‌ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಜಿಲ್ಲಾ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT