ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೆತುವೆ: ಈಡೇರುವುದೇ ದಶಕದ ಕನಸು

ಹಾಸನದ ಹೊಸ ಬಸ್‌ ನಿಲ್ದಾಣ ಸಮೀಪದ ನಿಲ್ದಾಣ; ಹೆಚ್ಚುತ್ತಿರುವ ವಾಹನ ದಟ್ಟಣೆ, ಜನಪ್ರತಿನಿಧಿಗಳ ನಿರಾಸಕ್ತಿ
Last Updated 10 ಜೂನ್ 2018, 13:18 IST
ಅಕ್ಷರ ಗಾತ್ರ

ಹಾಸನ: ನಗರದ ಹೊಸ ಬಸ್‌ ನಿಲ್ದಾಣ ಸಮೀಪ ರೈಲು ಬರುವ ಸಮಯದಲ್ಲಿ ಹತ್ತು ನಿಮಿಷ ಗೇಟ್‌ ಹಾಕಿದರೆ ವಾಹನಗಳ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಇದಕ್ಕೆ ಕಾರಣ ರೈಲ್ವೆ ಮೇಲ್ಸೆತುವೆ ನಿರ್ಮಿಸದೇ ಇರುವುದು.

ಮೈಸೂರು, ಹೊಳೆನರಸೀಪುರ, ಕೈಗಾರಿಕಾ ಪ್ರದೇಶ, ಚನ್ನಪಟ್ಟಣ ಹೌಸಿಂಗ್‌ ಬೋರ್ಡ್‌ಗೆ ಹೋಗುವವರು ಇದೇ ದಾರಿಯಲ್ಲಿ ಸಾಗಬೇಕು. ರೈಲ್ವೆ ಮೇಲ್ಸೆತುವೆ ಇಲ್ಲದೆ ಸಂಚಾರ ಸಮಸ್ಯೆ ಹೆಚ್ಚುತ್ತಿದ್ದು, ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ತಪ್ಪಿದಲ್ಲ.

ಎನ್‌.ಆರ್‌.ವೃತ್ತದಿಂದ ರೈಲ್ವೆ ಗೇಟ್‌ವರೆಗಿನ ರಸ್ತೆ ಅತಿ ಕಿರಿದಾಗಿರುವ ಕಾರಣ ಸಂಚಾರಕ್ಕೆ ಅಡ್ಡಿಯಾಗಿದೆ. ರೈಲ್ವೆ ಮೇಲ್ಸೆತುವೆ ಬೇಡಿಕೆ ನಿನ್ನೆ, ಮೊನ್ನೆಯದಲ್ಲ. ದಶಕದಿಂದ ಪ್ರಗತಿಪರ ಸಂಘಟನೆಗಳು, ಸಂಘ, ಸಂಸ್ಥೆಗಳು ಹೋರಾಟ ನಡೆಸಿ, ಸಂಬಂಧಪಟ್ಟ ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಿದ್ದಂತೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗೆ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿಯಾದರೂ ಮುಕ್ತಿ ದೊರಕುವುದೇ ಎಂದು ಜಿಲ್ಲೆಯ ಜನರು ಕಾತರದಿಂದ ಇದ್ದಾರೆ.

ರೈಲ್ವೆ ಗೇಟ್‌ ಅನ್ನು ಹಾಕಿದಾಗ ಆಂಬುಲೆನ್‌ ಬಂದರೆ ರೋಗಿಯ ಪಾಡು ಹೇಳತೀರದದು. ಎನ್‌.ಆರ್‌.ವೃತ್ತದಿಂದ ರೈಲ್ವೆ ಗೇಟ್‌ವರೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದು ಸಮಸ್ಯೆಯಾಗಿದೆ. ಭೂ ಮಾಲೀಕರಿಗೆ ಶಾಶ್ವತ ಪರಿಹಾರ ಕಲ್ಪಿಸಿದರೆ ಕಾಮಗಾರಿ ಸುಗಮವಾಗಲಿದೆ.

‘ರಾಜಕೀಯ ಪ್ರಭಾವ ಬಳಸಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಸಂಸದ ಎಚ್‌.ಡಿ.ದೇವೇಗೌಡರು ಹಂಗರಹಳ್ಳಿ ರೈಲ್ವೆ ಮೇಲ್ಸೆತುವೆಗೆ ಮಂಜೂರಾತಿ ಪಡೆದುಕೊಂಡಿದ್ದಾರೆ. ಅದೇ ರೀತಿ ಹಾಸನದಲ್ಲೂ ಮೇಲ್ಸೆತುವೆ ನಿರ್ಮಾಣಕ್ಕೆ ಕಾಳಜಿ ವಹಿಸಬೇಕು’ ಎಂಬುದು ನಾಗರಿಕರ ಒತ್ತಾಯ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ.ಮಂಜು ಅವರು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇರುವಾಗಲೇ ಭೂಮಿ ಪೂಜೆ ದಿನಾಂಕ ಪ್ರಕಟಿಸುತ್ತಲೇ ಇದ್ದರು. ಆದರೆ ಕೆಲಸ ಆರಂಭವಾಗಲಿಲ್ಲ.

ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಅವರ ಮೇಲೆ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೇಂದ್ರದಲ್ಲಿ ತಮ್ಮದೆ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿರುವ ಕಾರಣ ಮೇಲ್ಸೆತುವೆ ಕಾಮಗಾರಿಗೆ ಚಾಲನೆ ನೀಡುತ್ತಾರೆ ಎಂಬ ಆಶಾಭಾವ ಜನರಲ್ಲಿ ಮೂಡಿದೆ. ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲೂ ರೈಲ್ವೆ ಮೇಲ್ಸೆತುವೆ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಹಾಗಾಗಿ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಎಂಬ ಕುತೂಹಲ ಜನರಲ್ಲಿದೆ.

ಡಿಸೆಂಬರ್ ಕಾಮಗಾರಿ ಆರಂಭ
‘ಹೊಸ ಬಸ್ ನಿಲ್ದಾಣ ಸಮೀಪ ರೈಲ್ವೆ ಮೇಲ್ಸೆತುವೆ ಕಾಮಗಾರಿ ತುರ್ತಾಗಿ ಆಗಬೇಕಿದ್ದು, ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೊಯೆಲ್‌ ಅವರನ್ನು ಜೂನ್ 15ರೊಳಗೆ ಭೇಟಿಯಾಗಿ ಮತನಾಡುತ್ತೇನೆ. ನಗರಕ್ಕೆ ಅತ್ಯವಶ್ಯಕವಾಗಿ ಆಗಬೇಕಿರುವ ಕೆಲಸವಾಗಿದ್ದು, ಡಿಸೆಂಬರ್‌ ವೇಳೆಗೆ ಕಾಮಗಾರಿ ಆರಂಭವಾಗಲಿದೆ. ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ಕುರಿತು ಅಧ್ಯಯನ ಮಾಡುತ್ತಿದ್ದೇನೆ. ಅದು ಗ್ರಾಮಾಂತರ ಪ್ರದೇಶವಾಗಿರುವುದರಿಂದ ಕೆಲಸ ಪೂರ್ಣಗೊಳಿಸಲು ಎರಡು ವರ್ಷ ಕಾಲಾವಕಾಶ ನೀಡಲಾಗಿತ್ತು. ಆದರೆ ಹಾಸನದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ಬೇಗ ಕೆಲಸ ಪೂರ್ಣಗೊಳಿಸಬೇಕಿದೆ.’
– ಪ್ರೀತಂ ಗೌಡ, ಶಾಸಕ, ಹಾಸನ

ಟೆಂಡರ್‌ ಪ್ರಕ್ರಿಯೆ ಪೂರ್ಣ
‘ರೈಲ್ವೆ ಮೇಲ್ಸೆತುವೆ ಸಂಬಂಧಿಸಿದಂತೆ ₹ 48 ಕೋಟಿ ವೆಚ್ಚದ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಜಾಗ ಒತ್ತುವರಿಯಾಗಿದ್ದರೆ ತೆರವು ಮಾಡಬೇಕು, ಅಗತ್ಯ ಇದ್ದರೆ ಭೂ ಸ್ವಾಧೀನ ಮಾಡಲಾಗುತ್ತದೆ. ಕಾಮಗಾರಿ ಪೂರ್ಣಗೊಂಡರೆ ಹಾಸನ –ಹೊಳೆನರಸೀಪುರ ರಸ್ತೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ಎ.ಮಂಜು (ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಹೇಳಿದ್ದು)

ವಾಹನ ಸಂಚಾರಕ್ಕೆ ಅನ್ಯ ಮಾರ್ಗ ಇಲ್ಲ

‘ಅನೇಕ ವರ್ಷಗಳ ಬೇಡಿಕೆಯಾಗಿರುವ ಹೊಸ ಬಸ್ ನಿಲ್ದಾಣ ಸಮೀಪ ರೈಲ್ವೆ ಗೇಟ್‌ ಬಳಿ ಮೇಲ್ಸೆತುವೆ ನಿರ್ಮಾಣ ಅಗತ್ಯವಾಗಿ ಮಾಡಬೇಕಿದೆ. ಗೇಟ್‌ ಹಾಕಿದಾಗ ಎನ್‌.ಆರ್‌.ವೃತ್ತದವರೆಗೂ ವಾಹನಗಳು ನಿಲ್ಲುತ್ತವೆ. ವಾಹನ ಸಂಚಾರಕ್ಕೆ ಬೇರೆ ಮಾರ್ಗ ಇಲ್ಲ.’
ಪ್ರಶಾಂತ್‌, ನಗರ ನಿವಾಸಿ, ನರಕಯಾತನೆಗೆ ಮುಕ್ತಿ ನೀಡಿ

‘ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೆ ತೆರಳುವ ವಾಹನ ಸವಾರರು ಅನುಭವಿಸುತ್ತಿರುವ ನರಕಯಾತನೆಗೆ ಮುಕ್ತಿ ಸಿಗಬೇಕಾಗಿದೆ. ನೂತನ ಬಸ್ ನಿಲ್ದಾಣ ನಿರ್ಮಾಣ ವಾದಾಗಿನಿಂದಲೂ ಜನರು ಮೇಲ್ಸೆತುವೆ ನಿರ್ಮಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಈ ಪ್ರಯತ್ನಕ್ಕೆ ಯಾವುದೇ ಫಲ ಇಲ್ಲ. ನೂತನ ಶಾಸಕ ಪ್ರೀತಂ ಗೌಡ ಅವರು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರೈಲ್ವೆ ಸಚಿವರ ಮೇಲೆ ಒತ್ತಡ ಹೇರಿ ಕಾಮಗಾರಿ ನಿರ್ಮಿಸಿ ಕೊಟ್ಟು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’
ದಿಲೀಪ್ ಉಗನೆ, ನಗರ ನಿವಾಸಿ

ಕಾಲೇಜಿಗೆ ಹೋಗಲು ತೊಂದರೆ

‘ಅನೇಕ ವರ್ಷಗಳಿಂದ ಮೇಲ್ಸೆತುವೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸದರೂ ಮಂಜೂರಾಗಿಲ್ಲ. ಗೇಟ್ ಬಂದ್‌ ಮಾಡಿದರೆ ಎನ್‌.ಆರ್‌.ವೃತ್ತದ ವರೆಗೂ ಟ್ರಾಫಿಕ್‌ ಜಾಮ್‌ ಆಗಲಿದೆ. ವಾಹನಗಳು ಹೋಗಬೇಕಾದರೆ ಕನಿಷ್ಟ ಅರ್ಧ ಗಂಟೆ ಬೇಕು. ಇದರಿಂದ ಶಾಲೆ,
ಕಾಲೇಜಿಗೆ ಹೋಗುವ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಲು ಆಗುತ್ತಿಲ್ಲ’
ಗೌತಮ್‌. ವಿದ್ಯಾರ್ಥಿ, ಸರ್ಕಾರಿ ಕಲಾ ಕಾಲೇಜು.

ಸಮಸ್ಯೆ ಮತ್ತಷ್ಟು ಉಲ್ಬಣ

‘ನಗರದಿಂದ ಕೈಗಾರಿಕಾ ಪ್ರದೇಶಕ್ಕೆ ಹೋಗಬೇಕಾದರೆ ರೈಲ್ವೆ ಗೇಟ್ ಮೂಲಕವೇ ಹೋಗಬೇಕು. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಸಂಜೆ ಮತ್ತು ಬೆಳಿಗ್ಗೆ ವೇಳೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡ ಉದ್ಘಾಟನೆ ಆಗುವಷ್ಟರಲ್ಲಿ ಮೇಲ್ಸೆತುವೆ ನಿರ್ಮಿಸದಿದ್ದರೆ ಸಮಸ್ಯೆ ಇನ್ನಷ್ಟು ಉಲ್ಬಣವಾಗಲಿದೆ.’
– ಪ್ರಿಯಾ, ಕಾಲೇಜು ವಿದ್ಯಾರ್ಥಿನಿ

ಕೇಂದ್ರದ ಮೇಲೆ ಒತ್ತಡ ಹೇರಿ

‘ಆಡಳಿತ ನಡೆಸಿದ ಸರ್ಕಾರಗಳ ನಿರ್ಲಕ್ಷ್ಯದಿಂದ ಯೋಜನೆ ಆರಂಭಗೊಂಡಿಲ್ಲ. ಜನರ ಕಷ್ಟಗಳ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ಹಲವು ಬಾರಿ ಸಂಘ, ಸಂಸ್ಥೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವರ್ಷದಿಂದ ವರ್ಷಕ್ಕೆ ಯೋಜನೆ ವೆಚ್ಚ ಏರಿಕೆ ಆಗುತ್ತಿದೆ. ಆದರೆ ಕಾಮಗಾರಿ ಆರಂಭಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈಗಲಾದರೂ ನೂತನ ಶಾಸಕ ಪ್ರೀತಂ ಜೆ. ಗೌಡ ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರು ಆಸಕ್ತಿ ವಹಿಸಿ ಕೇಂದ್ರದ ಮೇಲೆ ಒತ್ತಡ ಹೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಮೋಹನ್‌ಕುಮಾರ್‌, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT