ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ದುಡ್ಡಲ್ಲಿ ಬ್ಯಾಂಕ್ ನಡೆಸುತ್ತೀರಾ?: ಕೇಂದ್ರ ಸಚಿವ ನಾರಾಯಣಸ್ವಾಮಿ ತರಾಟೆ

Published 4 ಆಗಸ್ಟ್ 2023, 15:51 IST
Last Updated 4 ಆಗಸ್ಟ್ 2023, 15:51 IST
ಅಕ್ಷರ ಗಾತ್ರ

ತುಮಕೂರು: ‘ಸರ್ಕಾರದ ಸಹಾಯಧನ ಹೊರತುಪಡಿಸಿ ಎಷ್ಟು ಜನರಿಗೆ ಬ್ಯಾಂಕ್‌ನಿಂದ ಸಾಲ ನೀಡಲಾಗಿದೆ? ಸರ್ಕಾರದ ದುಡ್ಡಲ್ಲಿ ಬ್ಯಾಂಕ್ ನಡೆಸುತ್ತೀರಾ?’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಚಿವರ ಪ್ರಶ್ನೆಗಳಿಗೆ ಉತ್ತರಿಸಲು ಲೀಡ್ ಬ್ಯಾಂಕ್ ಮ್ಯಾನೇಜರ್ ತಡವರಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಗ್ರಾಮೀಣ ಪ್ರದೇಶದ ರೈತರಿಗೆ, ಯುವಕರಿಗೆ ಬ್ಯಾಂಕ್‌ನಿಂದ ಏನು ಸಹಕಾರ ಇದೆ. ಕೋಳಿ, ಕುರಿ ಸಾಕಾಣಿಕೆ, ಸ್ವಯಂ ಉದ್ಯೋಗಕ್ಕೆ ಎಷ್ಟು ಸಾಲ ಕೊಡಲಾಗಿದೆ. ಯಾವ ಬ್ಯಾಂಕ್‌ನಿಂದ ಎಷ್ಟು ಸಾಲ ಕೊಟ್ಟಿದ್ದೀರಿ ಎಂದು ಸಾಲು ಸಾಲು ಪ್ರಶ್ನೆಗಳನ್ನು ಬ್ಯಾಂಕ್ ಅಧಿಕಾರಿಗಳ ಮುಂದಿಟ್ಟರು.

ಇದಕ್ಕೆ ಸರಿಯಾದ ಉತ್ತರವೇ ಸಿಗಲಿಲ್ಲ. ‘ಮಾಹಿತಿ ಇಲ್ಲದೆ ಸಭೆಗೆ ಏಕೆ ಬರುತ್ತೀರಿ? ಕೆಡಿಪಿ, ಜಿಲ್ಲಾಧಿಕಾರಿ ಸಭೆಯಲ್ಲಿ ಇವೆಲ್ಲ ಚರ್ಚೆ ಆಗಬೇಕು ಅಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಸಭೆಗೆ ಫಲಾನುಭವಿಗಳ ಪಟ್ಟಿ ಸಮೇತ ಹಾಜರಿರಬೇಕು. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ ಹಣ ಮೀಸಲಿಟ್ಟಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಅಧಿಕಾರಿಗಳು ಇತ್ತ ವಿಶೇಷ ಗಮನ ಹರಿಸಬೇಕು. ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವ ಕೆಲಸವಾಗಬೇಕು ಎಂದು ನಿರ್ದೇಶಿಸಿದರು.

ತುಂಗಾಭದ್ರಾ ಹಿನ್ನೀರಿನಿಂದ ಪಾವಗಡಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಬೇಗ ಮುಗಿಸಬೇಕು. ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಕೊಡುವುದನ್ನು ನಿಲ್ಲಿಸಲಾಗಿದೆ. ಹೀಗಾಗಿ ಆದ್ಯತೆ ಮೇರೆಗೆ ಈ ಕೆಲಸ ಕೈಗೊಳ್ಳಬೇಕು. ನರೇಗಾ ಯೋಜನೆಯಡಿ ವೈಯಕ್ತಿಕ, ಸಮುದಾಯ ಕಾಮಗಾರಿಗಳಿಗೆ ಒತ್ತು ಕೊಡಬೇಕು ಎಂದರು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ‘ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರು ಅವರ ಬದಲಿಗೆ ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಶೇ 50ರಷ್ಟು ಕಾರ್ಮಿಕರು ಬದಲಿ ಕೆಲಸ ಮಾಡಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಕೆಲಸದಲ್ಲಿ ತೊಡಗಿಸಿಕೊಳ್ಳುವ ಮಕ್ಕಳನ್ನು ಶಾಲೆಗೆ ಸೇರಿಸಿ, ಅವರ ಪೋಷಕರನ್ನು ಜೈಲಿಗೆ ಕಳುಹಿಸಿ. ಆಗ ಬಾಲ ಕಾರ್ಮಿಕ ಪದ್ಧತಿ ತಡೆಯಬಹುದು’ ಎಂದು ಹೇಳಿದರು.

ಭದ್ರಾ ಮೇಲ್ದಂಡೆ, ಎತ್ತಿನ ಹೊಳೆ ನೀರಾವರಿ ಯೋಜನೆ, ತುಮಕೂರು– ರಾಯದುರ್ಗ ರೈಲು ಯೋಜನೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ, ‘ನರೇಗಾ ಯೋಜನೆಯಡಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕಾಂಪೌಂಡ್, ಶೌಚಾಲಯ, ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಒತ್ತು ಕೊಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮಹಾನಗರ ಪಾಲಿಕೆ ಮೇಯರ್‌ ಎಂ.ಪ್ರಭಾವತಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಕೆ.ಶಹಪೂರ್‌ವಾಡ್‌, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸಭೆಯಲ್ಲಿ ಭಾಗವಹಿಸಿದ್ದರು.

ಇಂದು ಗೊಲ್ಲ ಮುಖಂಡರ ಸಭೆ

ಗೊಲ್ಲರು ಮೌಢ್ಯಾಚರಣೆಯಿಂದ ಹೊರ ಬರುವಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೊಲ್ಲ ಸಮುದಾಯದ ಮುಖಂಡರು ಪೂಜಾರಿಗಳ ಸಭೆ ನಡೆಯಲಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾಹಿತಿ ನೀಡಿದರು. ‘ಹೆರಿಗೆ ನಂತರ ಬಾಣಂತಿ ಶಿಶುವನ್ನು ಹೊರಗಿಡುವ ಮೌಢ್ಯಾಚರಣೆ ಇಂದಿಗೂ ಇದೆ. ಈ ಕುರಿತು ಗಮನ ಹರಿಸಬೇಕು. ಹೆರಿಗೆಯ ನಂತರ ತಾಯಿ ಮಗು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು’ ಎಂದು ದಿಶಾ ಸಮಿತಿ ಸದಸ್ಯೆ ಲೋಕೇಶ್ವರಿ ಪ್ರಭು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಮೇಲಿನಂತೆ ಉತ್ತರಿಸಿದರು.

ನೋಟಿಸ್ ಕೊಡಲು ಸೂಚನೆ

ಸಭೆಗೆ ಗೈರಾಗಿದ್ದ ಶಿರಾ ನಗರಸಭೆ ಆಯುಕ್ತರಿಗೆ ನೋಟಿಸ್ ನೀಡುವಂತೆ ಜಿ.ಪಂ ಸಿಇಒ ಜಿ.ಪ್ರಭು ಅವರಿಗೆ ಸಚಿವ ನಾರಾಯಣಸ್ವಾಮಿ ಸೂಚಿಸಿದರು. ‘ಶಿರಾದಲ್ಲಿ ಶನಿವಾರ ಅಧ್ಯಕ್ಷರ ಆಯ್ಕೆ ಸಭೆ ಇದೆ. ಆಯುಕ್ತರು ಇದರ ತಯಾರಿಯಲ್ಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇದರಿಂದ ಅಸಮಾಧಾನಗೊಂಡ ಸಚಿವರು ಕೂಡಲೇ ಕ್ರಮಕೈಗೊಳ್ಳಿ ಅಧಿಕಾರಿಗೆ ನೋಟಿಸ್‌ ಕೊಡಿ ಎಂದರು. ಶಿರಾ ವ್ಯಾಪ್ತಿಯಲ್ಲಿ ಶೌಚಾಲಯ ಕಟ್ಟಡ ನಿರ್ಮಿಸದೆ ಬಿಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಇದು ಸತ್ಯವೇ? ಈ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು. ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಗುತ್ತಿಗೆದಾರ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT