ಶನಿವಾರ, ಡಿಸೆಂಬರ್ 7, 2019
25 °C
ದಿಶಾ ಸಭೆಯಲ್ಲಿ ಕೃಷಿ ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಂಸದ ಮುದ್ದಹನುಮೇಗೌಡ

ಫಸಲ್ ಬಿಮಾ; 9 ಸಾವಿರ ಅರ್ಜಿ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ತುಮಕೂರು: ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಪ್ರಮುಖವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಲೋಪದೋಷಗಳು ಪ್ರಸ್ತಾಪವಾದವು.

ಸಂಸದರಾದ ಎಸ್‌.ಪಿ.ಮುದ್ದಹನುಮೇಗೌಡ ಹಾಗೂ ಬಿ.ಎನ್.ಚಂದ್ರಪ್ಪ, ಲೋಪಗಳ ಕಾರಣಕ್ಕೆ ಕೃಷಿ ಇಲಾಖೆ ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸಭೆಯ ಆರಂಭದಲ್ಲಿಯೇ ಮುದ್ದಹನುಮೇಗೌಡ ಯೋಜನೆಯಲ್ಲಿ ಎಷ್ಟು ರೈತರು ಅರ್ಜಿ ಸಲ್ಲಿಸಿದ್ದಾರೆ, ಎಷ್ಟು ಜನರಿಗೆ ವಿಮೆ ಹಣ ಬಂದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಂದ ಮಾಹಿತಿ ಕೇಳಿದರು.

‘2017–18ರಲ್ಲಿ 1.15 ಲಕ್ಷ ರೈತರು ವಿಮೆಗಾಗಿ ಅರ್ಜಿ ಸಲ್ಲಿಸಿದ್ದರು. ₹5.96 ಕೋಟಿ ವಿಮೆ ಹಣ ರೈತರ ಖಾತೆಗಳಿಗೆ ಜಮೆ ಆಗಿದೆ. 9 ಸಾವಿರ ಅರ್ಜಿಗಳು ತಿರಸ್ಕೃತವಾಗಿವೆ’ ಎಂದು ನಿರ್ದೇಶಕರು ವಿವರಿಸಿದರು.

ಆಗ ಅಸಮಾಧಾನಗೊಂಡ ಮುದ್ದಹನುಮೇಗೌಡ, ಅರ್ಜಿ ತಿರಸ್ಕಾರಕ್ಕೆ ಕಾರಣಗಳನ್ನು ಕೇಳಿದರು. ‘ರೈತರು ಅರ್ಜಿ ಭರ್ತಿ ಮಾಡುವಾಗ ಸಮರ್ಪಕವಾದ ಮಾಹಿತಿ ನೀಡದಿದ್ದರೆ, ಇಲ್ಲವೆ ಬೆಳೆಯ ಮಾಹಿತಿಯನ್ನು ತಪ್ಪಾಗಿ ದಾಖಲಿಸಿದ್ದರೆ ಅರ್ಜಿಗಳು ತಿರಸ್ಕಾರವಾಗುತ್ತವೆ. ಈ 9 ಸಾವಿರ ಅರ್ಜಿಗಳಲ್ಲಿ 3,792 ಅರ್ಜಿಗಳು ಬ್ಯಾಂಕಿನಿಂದ ವಿಮಾ ಕಂಪನಿಗೆ ತಡವಾಗಿ ಸಲ್ಲಿಸಿದ ಕಾರಣಕ್ಕೆ ತಿರಸ್ಕೃತವಾಗಿವೆ’ ಎಂದರು.

ಆಗ ಇಬ್ಬರೂ ಸಂಸದರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ‘ಏಕೆ ರೈತರ ಬಗ್ಗೆ ನಿಮಗೆ ತಾತ್ಸಾರ. ರೈತರು ವಿಮೆ ಹಣ ಬರುತ್ತದೆ ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ನೀವು ಅರ್ಜಿಯನ್ನು ತಿರಸ್ಕರಿಸಿ ರೈತರಿಗೆ ಈ ಬಗ್ಗೆ ಸೂಕ್ತ ಮಾಹಿತಿಯನ್ನೂ ನೀಡುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಬ್ಯಾಂಕ್–ಕೃಷಿ ಇಲಾಖೆ ಅಧಿಕಾರಿಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡರು. ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಮುದ್ದಹನುಮೇಗೌಡ, ‘ಇವರ ಮೇಲೆ ಅವರು ಅವರ ಮೇಲೆ ಇವರು ಆರೋಪ ಮಾಡುವುದನ್ನು ಬಿಡಿ. ರೈತರಿಗೆ ಮೊದಲು ನ್ಯಾಯ ದೊರೆಕಿಸಿಕೊಡಿ. ಬಡ ರೈತರ ಪ್ರೀಮಿಯಂ ಹಣವನ್ನು ಒಂದು ವರ್ಷ ಇಟ್ಟುಕೊಂಡು ವಾಪಸ್ ಕೊಟ್ಟಿದ್ದೀರಲ್ಲ. ನಿನಗೆ ನಾಚಿಕೆ ಆಗುವುದಿಲ್ಲವೇ. ನಿಮ್ಮಿಂದ ನಾವು ತಲೆತಗ್ಗಿಸಿಕೊಂಡು ಓಡಾಡಬೇಕಾಗಿದೆ’ ಎಂದು ತೀಕ್ಷ್ಮವಾಗಿ ನುಡಿದರು.

ಆಗ ಜಿಲ್ಲಾ ಪಂಚಾಯಿತಿ ಸಿಇಒ ಅನೀಸ್ ಕಣ್ಮಣಿ ಜಾಯ್, ‘ಬ್ಯಾಂಕ್ ಅಧಿಕಾರಿಗಳು ಹಾಗೂ ವಿಮಾ ಕಂಪನಿಯ ಪ್ರತಿನಿಧಿಗಳ ಸಭೆ ಕರೆಯಿರಿ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ತುಮಕೂರು–ದಾವಣಗೆರೆ ನಡುವಿನ ರೈಲ್ವೆ ವಿಚಾರವೂ ಪ್ರಮುಖವಾಗಿ ಪ್ರಸ್ತಾಪವಾಯಿತು. ‘ಶಿರಾ ತಾಲ್ಲೂಕಿನ 10 ಹಳ್ಳಿಗಳಲ್ಲಿ ಈಗಾಗಲೇ ಸರ್ವೆ ನಡೆಸಲಾಗಿದೆ. ಒಟ್ಟು ಈ ಯೋಜನೆಗೆ 796.10 ಎಕರೆ ಜಮೀನು ಸ್ವಾಧೀನವಾಗಬೇಕು. ಇದರಲ್ಲಿ 26.10 ಎಕರೆ ಸರ್ಕಾರಿ ಜಮೀನು ಇದೆ. ಈಗಾಗಲೇ 106.19 ಎಕರೆ ಜಮೀನು ಸ್ವಾಧೀನವಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ತುಮಕೂರಿನಿಂದ ಶಿವಮೊಗ್ಗದ ವರೆಗೆ ರಾಷ್ಟ್ರೀಯ ಹೆದ್ದಾರಿ 206ರ ವಿಸ್ತರಣೆಗೆ ಕುರಿತು ಸಂಸದರು ಮಾಹಿತಿ ಕೇಳಿದರು. ಆಗ ‘20 ಹೆಕ್ಟೇರ್ ಅರಣ್ಯ ಭೂಮಿ ವಿಸ್ತರಣೆ ಪಾಲಾಗಲಿದೆ. ಇಲ್ಲಿನ ಮರಗಳನ್ನು ಕಡಿಯಲು ಅನುಮತಿ ಕೋರಿದ್ದೇವೆ. ಇನ್ನೂ ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಯ ಅಧಿಕಾರಿ ತಿಳಿಸಿದರು.

ಆಗ ಜಿಲ್ಲಾ ಅರಣ್ಯಾಧಿಕಾರಿ, ಸಹಾಯಕ ಅರಣ್ಯಾಧಿಕಾರಿಯ ಅನುಪಸ್ಥಿತಿಯಲ್ಲಿ ತುಮಕೂರು ವಲಯ ಅರಣ್ಯಾಧಿಕಾರಿ ಉತ್ತರಿಸಲು ಮುಂದಾದರು. ಅವರು ಸೂಕ್ತ ಮಾಹಿತಿಯನ್ನು ತೆಗೆದುಕೊಂಡು ಬಂದಿರಲಿಲ್ಲ.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುದ್ದಹನುಮೇಗೌಡ, ‘ನಾವು ಸಭೆ ಕರೆದಿದ್ದರೂ ಮಾಹಿತಿ ತಂದಿಲ್ಲ. ನೀವು ಅನುಮತಿ ನೀಡದ ಕಾರಣ ವಿಸ್ತರಣೆ ಕಾಮಗಾರಿ ವಿಳಂಬವಾಗುತ್ತಿದೆ. ಈ ಬಗ್ಗೆ ಮಾಹಿತಿ ಕೊಡಿ’ ಎಂದು ಸೂಚಿಸಿದರು.

ಆಗ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ, ‘ತಕ್ಷಣವೇ ಮಾಹಿತಿಯನ್ನು ನಿಮ್ಮ ಕಚೇರಿಯಿಂದ ತರಿಸಿಕೊಳ್ಳಿ. ಸಭೆಗೆ ತಿಳಿಸಿ’ ಎಂದು ಆದೇಶಿಸಿದರು.  
 
ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಚೆ ಇಲಾಖೆ ಕಚೇರಿಗಳ ಮಾಹಿತಿ ನೀಡಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಗತಿ ಸಾಧಿಸಿಲ್ಲದ ಎಂದು ವಿಷಾದ ವ್ಯಕ್ತಪಡಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸಂಸದರು ಮಾಹಿತಿ ಪಡೆದರು.

ಬ್ಯಾಂಕ್ ಖಾಖೆ ಮುಚ್ಚಿದರೆ ಹೋರಾಟ

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಖೆಗಳನ್ನು ಮುಚ್ಚಲಾಗುತ್ತಿದೆ. ಹೋಬಳಿ ಕೇಂದ್ರಗಳಲ್ಲಿಯೂ ಈ ಕೆಲಸ ಆಗುತ್ತಿದೆ. ಹೀಗೆ ಮಾಡಿದರೆ ಗ್ರಾಮೀಣ ಜನರು ಸಾಲ ಪಡೆಯುವುದು ಹೇಗೆ, ವ್ಯವಹಾರ ನಡೆಸುವುದು ಹೇಗೆ. ಬ್ಯಾಂಕುಗಳ ಬಗ್ಗೆ ವಿಶ್ವಾಸವೇ ಮೂಡುವುದಿಲ್ಲ ಎಂದು ಮುದ್ದಹನುಮೇಗೌಡ ನುಡಿದರು.

‘ಹೀಗೆ ಬ್ಯಾಂಕ್‌ಗಳನ್ನು ಮುಚ್ಚಿದರೆ ನಾವು ಹೋರಾಟ ನಡೆಸಬೇಕಾಗುತ್ತದೆ. ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸುತ್ತೇವೆ’ ಎಂದರು.

ಪಾವಗಡ ತಾಲ್ಲೂಕು ಲಕ್ಕೇನಹಳ್ಳಿಗೆ ಬ್ಯಾಂಕ್ ಖಾಖೆ ತೆರೆಯುವಂತೆ ಮೂರು ವರ್ಷದಿಂದ ಹೇಳುತ್ತಲೇ ಇದ್ದೇವೆ. ಆದರೆ ಕ್ರಮ ಕೈಗೊಂಡಿಲ್ಲ. ನಮ್ಮ ಮಾತು ಅಷ್ಟು ನಿರ್ಲಕ್ಷ್ಯವೇ ಎಂದು ಬಿ.ಎನ್.ಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು