ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ, ಎತ್ತಿನಹೊಳೆಯಿಂದ ಜಿಲ್ಲೆ ಸಮೃದ್ಧ

Last Updated 16 ಆಗಸ್ಟ್ 2021, 1:20 IST
ಅಕ್ಷರ ಗಾತ್ರ

ತುಮಕೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಮುಂದಿನ ವರ್ಷ ಪೂರ್ಣಗೊಂಡು ನಾಲೆಯಲ್ಲಿ ನೀರು ಹರಿಯಲಿದೆ. ಇದರಿಂದ ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.

ನಗರದ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಎತ್ತಿನಹೊಳೆ ಕಾಮಗಾರಿಯೂ ಚುರುಕುಗೊಂಡಿದ್ದು, ಒಂದೂವರೆ ವರ್ಷದಲ್ಲಿ ನೀರು ಲಭ್ಯವಾಗಲಿದೆ. ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ಭಾಗಕ್ಕೆ ಹೆಚ್ಚು ನೆರವಾಗಲಿದೆ. ಕೊರಟಗೆರೆ ತಾಲ್ಲೂಕಿನಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ರೈತರು ಜಮೀನು ಬಿಟ್ಟುಕೊಡುತ್ತಿಲ್ಲ. ಹಾಗಾಗಿ ಕೆಲಸ ಸ್ವಲ್ಪ ಮಟ್ಟಿಗೆ ತಡವಾಗಿದೆ. ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳು ಪೂರ್ಣಗೊಂಡು, ಹೇಮಾವತಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡರೆ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಲಿದೆ. ಕೆರೆಯ ಸಾಮರ್ಥ್ಯದಲ್ಲಿ ಅರ್ಧದಷ್ಟು ನೀರನ್ನಾದರೂ ಭರ್ತಿ ಮಾಡಬಹುದು. ಬೆಂಗಳೂರಿನವೃಷಭಾವತಿ ನದಿಯ ಕೊಳಚೆ ನೀರನ್ನು ಸಂಸ್ಕರಿಸಿ ತುಮಕೂರು ತಾಲ್ಲೂಕು ಗ್ರಾಮಾಂತರ ಭಾಗದ ಕೆರೆಗಳನ್ನು ತುಂಬಿಸಲಾಗುವುದು. ಇದರಿಂದಾಗಿ ಜಿಲ್ಲೆ ನೀರಾವರಿಯಿಂದ ಸಮೃದ್ಧವಾಗಲಿದೆ ಎಂದು
ತಿಳಿಸಿದರು.

ತೋಟಗಾರಿಕೆ ಬೆಳೆಗೆ ನೆರವಾಗುವ ಸಲುವಾಗಿ ಈರುಳ್ಳಿಗಾಗಿ ಶೀತಲ ಘಟಕ ತೆರೆಯಲಾಗಿದೆ. ಗುಬ್ಬಿ, ಶಿರಾ ತಾಲ್ಲೂಕಿನಲ್ಲಿ ಹೂ, ಹಣ್ಣು, ತರಕಾರಿ ದಾಸ್ತಾನು ಮಾಡಲು ಶೀತಲ ಘಟಕ ಸ್ಥಾಪಿಸಲಾಗುತ್ತಿದೆ. ಚಿಕ್ಕನಾಯಕನಹಳ್ಳಿ, ತಿಪಟೂರು ಭಾಗದಲ್ಲಿ ಮೂರು ಘಟಕ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಆಮ್ಲಜನಕ ಉತ್ಪಾದನೆ: ಜಿಲ್ಲಾ ಆಸ್ಪತ್ರೆ, ತಾಲ್ಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನೆ ಘಟಕಗಳ ನಿರ್ಮಾಣ ಕಾರ್ಯ ನಡೆದಿದ್ದು, ಶೀಘ್ರ ಕೆಲಸ ಪೂರ್ಣಗೊಳ್ಳಲಿದೆ.ಕೋವಿಡ್ ಎರಡನೇ ಅಲೆ ಸಮಯದಲ್ಲಿ ಆಮ್ಲಜನಕ ಸಿಗದೆ ಹಲವರು ಸಾವನ್ನಪ್ಪಬೇಕಾಯಿತು. ಈಗ ಆರಂಭಿಸಿರುವ ಘಟಕ ನಿರ್ಮಾಣ ಕೆಲಸ ಮುಕ್ತಾಯವಾದರೆ ಜಿಲ್ಲೆಯಿಂದ ಇತರೆಡೆಗೆ ಆಮ್ಲಜನಕ ಕೊಡುವಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ ಎಂದು ವಿವರಿಸಿದರು.

ಸರಳ ಆಚರಣೆ: ಕೋವಿಡ್‌ನಿಂದಾಗಿ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಪೊಲೀಸ್, ಗೃಹರಕ್ಷಕ ದಳ, ಅರಣ್ಯ ರಕ್ಷಕ ತಂಡ, ಮಾಜಿ ಸೈನಿಕರ ತಂಡಗಳಷ್ಟೇ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿಲ್ಲ.

ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್, ಚಿದಾನಂದಗೌಡ, ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ಎಸ್.ಆರ್.ಪಾಟೀಲ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT