ವಿದ್ಯಾವಂತರೇ ಹೆಚ್ಚು ಮಾದಕ ವ್ಯಸನಿಗಳು: ಎಎಸ್ಪಿ ಡಾ.ಶೋಭಾರಾಣಿ ಕಳವಳ

7
ಮಾದಕ ಪದಾರ್ಥಗಳ ಸೇವನೆಯ ಅಡ್ಡ ಪರಿಣಾಮ ಕುರಿತ ಜಾಗೃತಿ ಕಾರ್ಯಕ್ರಮ

ವಿದ್ಯಾವಂತರೇ ಹೆಚ್ಚು ಮಾದಕ ವ್ಯಸನಿಗಳು: ಎಎಸ್ಪಿ ಡಾ.ಶೋಭಾರಾಣಿ ಕಳವಳ

Published:
Updated:
Deccan Herald

ತುಮಕೂರು: ದೇಶದಲ್ಲಿ ವಿದ್ಯಾವಂತ ಯುವಕರೇ ಹೆಚ್ಚು ಮಾದಕ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಅಡ್ಡದಾರಿ ಹಿಡಿದು ಜೀವನ ಹಾಳು ಮಾಡಿಕೊಳ್ಳದೇ ಕುಟುಂಬದವರು ಹೆಮ್ಮೆ ಪಡುವ ರೀತಿ ಬದುಕಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಬಾಲಭವನ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಅಚರ್ಡ್ ಮಧ್ಯವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ‘ಮಾದಕ ಪದಾರ್ಥಗಳ ಸೇವನೆಯ ಅಡ್ಡ ಪರಿಣಾಮ’ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯು ಕಳ್ಳತನ, ಸುಳ್ಳು ಹೇಳುವುದು, ಕೌಟುಂಬಿಕ ಕಲಹ, ಅತ್ಯಾಚಾರ, ಮತ್ತಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರೇರಣೆ ನೀಡಿ ಯುವಕರು ತಪ್ಪು ದಾರಿ ತುಳಿಯುವಂತೆ ಮಾಡುತ್ತದೆ ಎಂದು ಹೇಳಿದರು.

ಅಚರ್ಡ್ ಮಧ್ಯವರ್ಜನ ಮತ್ತು ಪುನರ್ವಸತಿ ಕೇಂದ್ರದ ನಿರ್ವಾಹಕ ನಿರ್ದೇಶಕ ಡಾ.ಸದಾಶಿವಯ್ಯ ಮಾತನಾಡಿ, ‘ಮಾದಕ ವಸ್ತುಗಳ ಸೇವನೆಯು ಮನುಷ್ಯನ ಜೀವನವನ್ನು ಹಾಳು ಮಾಡುವುದಷ್ಟೇ ಅಲ್ಲ. ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್.ಜಿನರಾಳ್ಕರ್ ಮಾತನಾಡಿ, ‘ವಿದ್ಯಾರ್ಥಿಗಳು ಬುದ್ಧನ ಪಂಚಶೀಲ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಮಾದಕ ವಸ್ತುಗಳ ಸೇವನೆಯು ಮನುಷ್ಯನನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ, ನೈತಿಕವಾಗಿ ಅಧಃಪತನಕ್ಕೀಡು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಚರ್ಡ್ ಸಂಸ್ಥೆಯ ಹಿರಿಯ ಸಮಾಲೋಚಕ ವೈ.ಕೆ.ಸುಬ್ಬುಕೃಷ್ಣ ಅವರು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಸ್.ನಾಗರತ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !