ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ಪುರಸಭೆ ಚುನಾವಣೆ; ಸದ್ದು ಮಾಡುತ್ತಿವೆ ಹಣ, ಬೆಳ್ಳಿ ಬಟ್ಟಲು

Last Updated 28 ಮೇ 2019, 12:22 IST
ಅಕ್ಷರ ಗಾತ್ರ

ಕುಣಿಗಲ್: ಪುರಸಭೆ ಚುನಾವಣೆಯಲ್ಲಿ ಕಾಂಚಾಣ ಸದ್ದು ಮಾಡುತ್ತಿದ್ದರೆ, ಅಧಿಕಾರಿಗಳು ಸುಮ್ಮನಿದ್ದು ಚುನಾವಣೆಯನ್ನು ಮುಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಬುಧವಾರ ಚುನಾವಣೆ ನಡೆಯಲಿದ್ದು, ಮೂರು ಪಕ್ಷದ ಅಭ್ಯರ್ಥಿಗಳು ಮತ್ತು ಕೆಲವೆಡೆ ಪಕ್ಷೇತರ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಎಲ್ಲ ರೀತಿಯ ಕಸರತ್ತುಗಳನ್ನು ಮಾಡುವ ಮೂಲಕ ಕೊನೆ ಕ್ಷಣದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಪ್ರತಿ ಮತದಾರನೂ 21ನೇ ವಾರ್ಡ್ ಮತದಾರನಾಗಲು ಬಯಸುತ್ತಿದ್ದಾನೆ. ಕಾರಣ ಈ ವಾರ್ಡ್‌ಗೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ದೊರೆತ್ತಿದ್ದು, ಘಟಾನುಘಟಿಗಳು ಕಣದಲ್ಲಿದ್ದಾರೆ. ಒಬ್ಬರು ಬೆಳ್ಳಿ ಬಟ್ಟಲು ಕೊಟ್ಟರೆ, ಮತ್ತೊಬ್ಬರು ಕಾಮಾಕ್ಷಿ ದೀಪ ಮತ್ತು ನಗದು ನೀಡುತ್ತಿದ್ದಾರೆ. ಮಗದೊಬ್ಬರು ಬೆಳ್ಳಿ ಉಡುಗೊರೆ ಮತ್ತು ನಗದು ನೀಡಿ ಮತದಾರರನ್ನು ಸೆಳೆಯುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಸಹ ಮತದಾರರ ಕುಟುಂಬದ ಸದಸ್ಯರ ಸಂಖ್ಯೆ ಆಧಾರಿಸಿ ಹಣ ಮತ್ತು ಉಡುಗೊರೆಗಳನ್ನು ನೀಡುತ್ತಿದ್ದಾರೆ.

ಇನ್ನೂ 6ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ಪೈಪೋಟಿ ಇದ್ದು, ಕುರುಡು ಕಾಂಚಣ ಸದ್ದು ಮಾಡುತ್ತಿದೆ.

‘ಮೊದಲು ಹಣ ಹಂಚುತ್ತಿದ್ದ ವ್ಯವಸ್ಥೆಯೇ ಬೇರೆ, ಈಗಿನ ವ್ಯವಸ್ಥೆಯೇ ಬೇರೆಯಾಗಿದೆ. ಮತ ಕೇಳಲು ಹೋದರೆ ಕೈ, ಜೇಬು ನೋಡುವವರೇ ಹೆಚ್ಚಾಗಿದ್ದಾರೆ. ಈ ವ್ಯವಸ್ಥೆಯಲ್ಲಿ ಚುನಾವಣೆಯ ಸಹವಾಸವೇ ಬೇಡವಾಗಿದೆ’ ಎನ್ನುವರು ಮಾಜಿ ಸದಸ್ಯ ರಮೇಶ್.

‘ಜನ ಬುದ್ದಿವಂತರಾಗಿದ್ದಾರೆ. ಅಭ್ಯರ್ಥಿಗಳು ನೀಡುವ ಹಣ ನಿರಾಕರಿಸಿದರೆ ಅಭ್ಯರ್ಥಿಗಳು ‘ಇವರು ನಮ್ಮ ಪರವಾಗಿಲ್ಲ’ ಎಂದು ಭಾವಿಸಿ ಚುನಾವಣೆಯ ನಂತರ ಸಮಸ್ಯೆ ಮಾಡಬಹುದು. ಅದಕ್ಕೆ ನಿಷ್ಠುರ ಬೇಡ ಎಂದು ಅವರು ಕೊಟ್ಟದ್ದನ್ನು ಪಡೆದುಕೊಂಡು ತಮಗೆ ಬೇಕಾದವರಿಗೆ ಮತ ಹಾಕುತ್ತಾರೆ’ ಎನ್ನುವರು ಪಟ್ಟಣದ ನಿವಾಸಿ ಚಂದ್ರಮ್ಮ.

‘ದೂರು ಬಂದರೆ ಮಾತ್ರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸುವ ಅಧಿಕಾರಿಗಳು ಕೇಳುವ ಪ್ರಶ್ನೆ ಮತ್ತು ಸಾಕ್ಷಿಗಳನ್ನು ನೀಡುವ ಬದಲು ಸುಮ್ಮನಿರುವುದೇ ವಾಸಿ’ ಎನ್ನುತ್ತಾರೆ ಪುರುಷೋತ್ತಮ್.

‘ಇದೇ ರೀತಿಯ ವ್ಯವಸ್ಥೆ ಮುಂದುವರಿದರೆ ಚುನಾವಣೆ ಮಾಡುವುದು ಸಾಧ್ಯವಿಲ್ಲ’ ಎಂದು ಅಭ್ಯರ್ಥಿ ರಾಮು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT