ತುಮಕೂರು: ಮಳೆ ಗಾಳಿಯ ಅಧ್ವಾನ; ತುರ್ತು ನಿರ್ವಹಣಾ ತಂಡ ರಚಿಸಿದ ಮಹಾನಗರ ಪಾಲಿಕೆ

ಶನಿವಾರ, ಮೇ 25, 2019
28 °C

ತುಮಕೂರು: ಮಳೆ ಗಾಳಿಯ ಅಧ್ವಾನ; ತುರ್ತು ನಿರ್ವಹಣಾ ತಂಡ ರಚಿಸಿದ ಮಹಾನಗರ ಪಾಲಿಕೆ

Published:
Updated:
Prajavani

ತುಮಕೂರು: ತುಮಕೂರು ಮಹಾನಗರದಲ್ಲಿ ಗುರುವಾರ ಮತ್ತು ಶುಕ್ರವಾರ ಮಳೆ, ಗಾಳಿಯಿಂದ ಆದ ಅಧ್ವಾನಕ್ಕೆ ಎಚ್ಚೆತ್ತ ಮಹಾನಗರ ಪಾಲಿಕೆಯ ಆಯುಕ್ತರು ತುರ್ತು ನಿರ್ವಹಣಾ ತಂಡವನ್ನು( ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್) ರಚನೆ ಮಾಡಿದೆ.

ಈ ತಂಡದಲ್ಲಿ ಹತ್ತು ಪೌರಕಾರ್ಮಿಕರು, ಒಂದು ಜೆಸಿಬಿ, ಗಸ್ತು ವಾಹನ, ಸಕ್ಕಿಂಗ್ ಆ್ಯಂಡ್ ಜೆಟ್ಟಿಂಗ್ ಯಂತ್ರಗಳು ಇದ್ದು, ಮಳೆ ಗಾಳಿಯಿಂದ ಸಮಸ್ಯೆ ಆದ ಸ್ಥಳಗಳಿಗೆ ತಕ್ಷಣಕ್ಕೆ ಧಾವಿಸಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಿದೆ. ಮಹಾನಗರ ಪಾಲಿಕೆ ನಿಯಂತ್ರಣ ಕೊಠಡಿಗೆ ಸ್ವೀಕೃತವಾಗುವ ದೂರುಗಳಿಗೆ ತುರ್ತಾಗಿ ಸ್ಪಂದಿಸುವುದು ಈ ತಂಡ ರಚನೆಯ ಪ್ರಮುಖ ಉದ್ದೇಶವಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ– 0816–2271200, 0816–2272200, ಮೊಬೈಲ್– 9449872599 ಗೆ ಸಾರ್ವಜನಿಕರು ಕರೆ ಮಾಡಬಹುದು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ಸಂಜೆ ಸುರಿದ ಮಳೆಗೆ ನಗರದ ಚಿಕ್ಕಪೇಟೆ, ಕೋತಿತೋಪು, ಎಸ್.ಎಸ್.ಪುರಂ, ಜಿಸಿಆರ್ ಕಾಲೋನಿ, ಜೆ.ಸಿ .ರಸ್ತೆ, ಮಂಡಿಪೇಟೆ ಮೇಳೆಕೋಟೆ, ಸಿದ್ಧಗಂಗಾ ಬಡಾವಣೆ, ಶಿರಾ ಗೇಟ್‌ನಲ್ಲಿ ಮಳೆಯಿಂದ ಸಮಸ್ಯೆಯಾಗಿತ್ತು. ಮಳೆಗಾಳಿ ಅರ್ಭಟ ಹೆಚ್ಚಾಗಿದ್ದರಿಂದ ವಿದ್ಯುತ್ ಸಂಪರ್ಕ ಕೂಡಾ ಹೆಚ್ಚು ಕೈಕೊಟ್ಟಿತ್ತು.

ಶಿರಾ ಗೇಟ್‌ನ ರಸ್ತೆ, ಕೋತಿ ತೋಪುರಸ್ತೆಗಳಲ್ಲಿ ಗಿಡದ ಕೊಂಬೆಗಳು ಬಿದ್ದಿದ್ದರೆ ಚಿಕ್ಕಪೇಟೆಯಲ್ಲಿ ಮೊಬೈಲ್ ಟವರ್ ಗಾಳಿಗೆ ಉರುಳಿ ಬಿದ್ದಿತ್ತು. ಗುಬ್ಬಿ ಗೇಟ್‌ನಲ್ಲಿ ಚರಂಡಿಯಲ್ಲಿ ತ್ಯಾಜ್ಯ ಕಟ್ಟಿಕೊಂಡು ಚರಂಡಿಯಲ್ಲಿ ನೀರು ಹರಿಯದೇ ರಸ್ತೆ ಮೇಲೆ ಹರಿದಿತ್ತು.

‘ಶಿರಾ ಗೇಟ್, ಕೋತಿತೋಪು, ಗುಬ್ಬಿ ಗೇಟ್, ಜಿಸಿಆರ್ ಕಾಲೋನಿ ಸೇರಿದಂತೆ ಅನೇಕ ಕಡೆಗಳಲ್ಲಿ ಪಾಲಿಕೆ ತಂಡವು ತುರ್ತು ಕಾರ್ಯಾಚರಣೆ ಕೈಗೊಂಡು ಸರಿಪಡಿಸಿದೆ. ಚಿಕ್ಕಪೇಟೆಯಲ್ಲಿ ಬಿದ್ದ ಮೊಬೈಲ್ ಟವರ್ ತೆರವಿಗೆ ಪರಿಣಿತ ತಂಡ ಪಾಲಿಕೆಯಲ್ಲಿ ಇಲ್ಲದೇ ಇದ್ದುದರಿಂದ ಅಗ್ನಿಶಾಮಕ ದಳದವರು ತೆರವುಗೊಳಿಸಿದ್ದಾರೆ’ಎಂದು ಪಾಲಿಕೆ ಪರಿಸರ ಎಂಜಿನಿಯರ್ ಮೃತ್ಯುಂಜಯಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !