ಶನಿವಾರ, ಡಿಸೆಂಬರ್ 7, 2019
22 °C
ಸಿದ್ಧಗಂಗಾಮಠದಲ್ಲಿ ನಡೆದ ಕಮ್ಮಾರ ಸಮುದಾಯದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರೊ.ಕೊಟ್ರೇಶ್ ಒತ್ತಾಯ

ಸಣ್ಣ ಸಮಾಜಗಳ ಅಭಿವೃದ್ಧಿಗೆ ನಿಗಮ ಸ್ಥಾಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಮ್ಮಾರ ಸಮುದಾಯ ಸೇರಿದಂತೆ ಸಣ್ಣ ಸಮಾಜಗಳು ಮುಖ್ಯವಾಹಿನಿಗೆ ಬರಲು ಪ್ರತಿ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸರ್ಕಾರ ಸ್ಥಾಪಿಸಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಕೊಟ್ರೇಶ್ ಒತ್ತಾಯಿಸಿದರು.

ಭಾನುವಾರ ಸಿದ್ಧಗಂಗಾಮಠದಲ್ಲಿ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ಧ ಕಮ್ಮಾರ ಸಮುದಾಯದ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಮಾತನಾಡಿದರು.

’ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಸಣ್ಣ ಸಮುದಾಯಗಳನ್ನು ಪ್ರತ್ಯೇಕ ವರ್ಗಕ್ಕೆ ಸೇರಿಸಿ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಹೇಳಿದರು.

ನಾಟ್ಯ ರಾಣಿ ಶಾಂತಲೆ, ಅಮರ ಶಿಲ್ಪಿ ಜಕಣಾಚಾರಿ ಮೊದಲಾದವರು ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದವರು. ತಮ್ಮ ಕಲೆ ಮೂಲಕ ಪ್ರಸಿದ್ಧರಾದವರು ಸಣ್ಣ ಸಮುದಾಯಗಳ ಅನೇಕರು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಿದ್ದಾರೆ. ಅವರ ಸಾಧನೆ ದಾಖಲಿಸದ ಕಾರಣ ಅವರು ಮರತೇ ಹೋಗಿದ್ದಾರೆ. ಇಂತಹ ಸಮುದಾಯಗಳ ಸ್ಥಿತಿಗತಿ, ಸಾಧಕರ ಬಗ್ಗೆ ಅಧ್ಯಯನಗಳು ನಡೆದು ಪುಸ್ತಕ ರೂಪದಲ್ಲಿ ದಾಖಲು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ದೇವರಾಜ ಅರಸು ಸಂಶೋಧನಾ ಕೇಂದ್ರದ ನಿರ್ದೇಶಕಿ ರೇಣುಕಾಂಬ, ’ಕಮ್ಮಾರ ಜನಾಂಗದ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಹಿನ್ನೆಲೆ ಅಧ್ಯಯನ ಮಾಡಬೇಕು. ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವ ಕಾರ್ಯಕ್ರಮಗಳು ಜಾರಿಯಾಗಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನಗಳು ಆಗಬೇಕು’ ಎಂದರು.

ಪ್ರೊ. ಗಂಗಾಧರ ದೈವಜ್ಞ, ಡಾ.ಆರ್.ಬಿ.ಕುಮಾರ್, ಪ್ರೊ. ವಾಸುದೇವ ಬಡಿಗೇರ ಮಾತನಾಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುಬ್ರಾ ನಾಯಕ, ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಎಲ್.ಎನ್.ಮಂಜುನಾಥ್, ಮುಖಂಡರಾದ ಕೆ.ಪಿ.ನಾಗೇಂದ್ರ, ಕೆ.ಘಮ್ಮರಾಜು, ಜಿ.ಎಸ್.ಕಮ್ಮಾರ್, ಕೆ.ಎಚ್ ಕೃಷ್ಣಮೂರ್ತಿ, ಟಿ.ನಾಗರಾಜು, ಅನಂತರಾಜು ಇದ್ದರು.

ಪ್ರತಿಕ್ರಿಯಿಸಿ (+)