ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ರೈತರನ್ನು ಕಾಡುತ್ತಿದೆ ಮೇವಿನ ಚಿಂತೆ

ಹೊರ ಜಿಲ್ಲೆ, ತಾಲ್ಲೂಕುಗಳಿಂದ ಮೇವು ಖರೀದಿಸುವ ಸ್ಥಿತಿ
Last Updated 23 ಜನವರಿ 2023, 4:40 IST
ಅಕ್ಷರ ಗಾತ್ರ

ಗುಬ್ಬಿ: ಅತಿವೃಷ್ಟಿಯಿಂದಾಗಿ ತಾಲ್ಲೂಕಿನಲ್ಲಿ ನಿರೀಕ್ಷಿತ ಯೋಜನೆಯಂತೆ ರಾಗಿ ಬಿತ್ತನೆಯಾಗದೆ ಬೆಳೆ ಕಡಿಮೆಯಾಗಿರುವ ಜತೆಗೆ ರಾಸುಗಳಿಗೆ ಮೇವಿನ ಕೊರತೆ ಉಂಟಾಗಿದೆ.

ಪ್ರತಿ ಬಾರಿ ಸುಗ್ಗಿ ಕಾಲದಲ್ಲಿ ರಾಗಿ ಓಕ್ಕಣೆ ಮಾಡಿ ಹುಲ್ಲನ್ನು ಬಣವೆ ಹಾಕುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿಯ ಅತಿಯಾದ ಮಳೆಯಿಂದಾಗಿ ರಾಗಿ ಬಿತ್ತನೆ ಸಾಧ್ಯವಾಗದೆ ಮೇವಿಗಾಗಿ ರೈತರು ಪರದಾಡುತ್ತಿದ್ದಾರೆ.

ಈ ಹಿಂದೆ ₹150 ರಿಂದ ₹200ಕ್ಕೆ ಸಿಗುತ್ತಿದ್ದ ಹುಲ್ಲಿನ ಪೆಂಡಿಗಳು ಇಂದು ₹400 ರಿಂದ ₹450 ಕೊಟ್ಟರೂ ಸಿಗದ ಸ್ಥಿತಿ ನಿರ್ಮಾಣವಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಹಳ್ಳಿಗಳಿಂದ ಪಟ್ಟಣಕ್ಕೆ ಹುಲ್ಲನ್ನು ತಂದು ಮಾರುತ್ತಿದ್ದ ಜನರು ಇಂದು ಎಲ್ಲೂ ಹುಲ್ಲು ಸಿಗದೇ ಕಷ್ಟಪಡುವಂತಾಗಿದೆ.

ಮೇವು ಬೇಕಾಗಿರುವ ರೈತರು ಅನಿವಾರ್ಯವಾಗಿ ಹೊರ ತಾಲ್ಲೂಕು ಮತ್ತು ಜಿಲ್ಲೆಗಳಿಗೆ ಹೋಗಿ ದುಬಾರಿ ಹಣವನ್ನು ತೆತ್ತು ಮೇವು ತರುತ್ತಿದ್ದಾರೆ.
ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ಹೆಚ್ಚಾದಂತೆ ಅಡಿಕೆ, ತೆಂಗು ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರೈತರು ರಾಗಿ, ಜೋಳ, ಹುರುಳಿ ಬೆಳೆಯುವ ಕಡೆ ಗಮನ ಕಡಿಮೆಯಾಗುತ್ತಿರುವುದು ಮೇವು ಕೊರತೆಯಾಗಲು ಮುಖ್ಯ ಕಾರಣ ಎಂದು ರೈತ ಜಯದೇವಯ್ಯ ಅಭಿಪ್ರಾಯಪಡುತ್ತಾರೆ.

ಈಗ ಬೇಸಿಗೆ ಸಮೀಪಿಸುತ್ತಿದ್ದು, ವಿದ್ಯುತ್ ಅಭಾವ ಹೆಚ್ಚಾಗಿ ತೋಟಗಳಿಗೆ ನೀರು ಹಾಯಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗುವುದರಿಂದ ಹಸಿ ಮೇವನ್ನು ಬೆಳೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹಲವು ರೈತರು ಬೇಸರ ವ್ಯಕ್ತಪಡಿಸುತ್ತಾರೆ.

ಸಮರ್ಪಕವಾಗಿ ವಿದ್ಯುತ್ ಒದಗಿಸಿದಲ್ಲಿ ಮೇವು ಬೆಳೆದುಕೊಂಡು ರಾಸುಗಳನ್ನು ಸಾಕಲು ಅನುಕೂಲವಾಗುತ್ತದೆ. ಆದರೆ ವಿದ್ಯುತ್ ಅನಿಶ್ಚಿತತೆಯಿಂದ ಸಾಧ್ಯವಾಗದೆ ರೈತರು ಅತಂತ್ರ ಸ್ಥಿತಿಯನ್ನು ಅನುಭವಿಸುವಂತಾಗಿದೆ ಎಂದು ರೈತ ಕೆಂಪರಾಜು ಅಭಿಪ್ರಾಯಪಟ್ಟರು.

ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಬೆಸ್ಕಾಂನವರು ಸಮರ್ಪಕವಾಗಿ ವಿದ್ಯುತ್ ನೀಡುವ ಮೂಲಕ ರೈತರ ಸಹಾಯಕ್ಕೆ ನಿಲ್ಲಬೇಕು ಎಂದು ರೈತ ಸಂಘದ ಕಾರ್ಯದರ್ಶಿ ಲೋಕೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT