ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಇವ ನಮ್ಮವ’, ‘ಇವ ನಮ್ಮವ’ ಎಂದ ಜಿಲ್ಲೆಯ ಜನ: ವಿ.ಸೋಮಣ್ಣ

Published 5 ಜುಲೈ 2024, 14:39 IST
Last Updated 5 ಜುಲೈ 2024, 14:39 IST
ಅಕ್ಷರ ಗಾತ್ರ

ಚಿಕ್ಕನಾಯನಹಳ್ಳಿ: ಪಟ್ಟಣದಲ್ಲಿ ಶುಕ್ರವಾರ ನಾಗರಿಕ ಸೇವಾ ಸಮಿತಿಯಿಂದ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿ. ಸೋಮಣ್ಣ, ‘ನನ್ನ ಮೈ-ಚರ್ಮ ಸುಲಿದು ನಿಮಗೆ ಪಾದರಕ್ಷೆ ಮಾಡಿಕೊಟ್ಟರೂ ನಾನು ನಿಮ್ಮ ಋಣ ತೀರಿಸಲಾಗದು. ಈ ಋಣ ಶಾಶ್ವತವಾಗಿ ನನ್ನ ಮೇಲೆ ಉಳಿಯಲಿದೆ’ ಎಂದು ಭಾವುಕರಾಗಿ ನುಡಿದರು.

‘ನನ್ನನ್ನು ಹೊರಗಿನವ ಹೊರಗಿನವ ಎಂದು ಜರಿದು ಮಾತನಾಡುತ್ತಿದ್ದವರಿಗೆ ಜಿಲ್ಲೆಯ ಜನತೆ ಇವ ನಮ್ಮವ, ಇವ ನಮ್ಮವ ಎಂಬ ಉತ್ತರ ಕೊಟ್ಟು ಭ್ರಾತೃತ್ವದ ಪಾಠ ಹೇಳಿಕೊಟ್ಟಿದ್ದಾರೆ. ಗೆಲುವಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮುಖಂಡರು ಅವಿರತ ದುಡಿದರು’ ಎಂದರು.

‘ತಾಲ್ಲೂಕಿನ ನೀರಾವರಿ ಮತ್ತು ರೈಲು ಹಳಿ ಸಂಪರ್ಕಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನೂ ಮುತುವರ್ಜಿಯಿಂದ ನಿರ್ವಹಿಸಿ ಋಣ ತೀರಿಸಲು ಯತ್ನಿಸುವೆ’ ಎಂದು ಭರವಸೆ ನೀಡಿದರು.

ಮಹಿಳಾ ಸ್ವ-ಸಹಾಯ ಸಂಘದ ಗುಂಪುಗಳಿಗೆ ಸಾಲ ಸಹಾಯಧನದ ಚೆಕ್, ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಮೊಬೈಲ್ ವಿತರಿಸಲಾಯಿತು.

ಶಾಸಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ನವೋದಯ ಶಾಲೆ, ನೀರಾವರಿ ಯೋಜನೆ, ರೈಲ್ವೆ ಹಳಿ ಸಂಪರ್ಕ ಕಾಮಗಾರಿ, ಕ್ವಿಂಟಲ್‌ ಕೊಬ್ಬರಿಗೆ ₹15 ಸಾವಿರದಿಂದ ₹16 ಸಾವಿರ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವುವಂತೆ ಸಚಿವರಿಗೆ ಮನವಿ ಮಾಡಿದರು.

ಶೀಘ್ರ ಪ್ರತಿ ಪಂಚಾಯಿತಿಯಲ್ಲೂ ಒಂದೊಂದು ಇಂಗ್ಲಿಷ್‌ ಶಾಲೆ ಆರಂಭಿಸಿ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.

‘ಸೋಮಣ್ಣ ಅವರ ಲೋಕಸಭಾ ಚುನಾವಣಾ ಪ್ರಚಾರ ನಮ್ಮ ತಾಲ್ಲೂಕಿನಿಂದಲೇ ಪ್ರಾರಂಭವಾಗಿತ್ತು. ಈಗ ಮೊದಲ ಸನ್ಮಾನವೂ ಇಲ್ಲಿಂದಲೇ ಆರಂಭವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ಕೀರ್ತಿ, ಬಿಇಒ ಸಿ.ಎಸ್. ಕಾಂತರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ. ಹೊನ್ನಪ್ಪ, ತಾ.ಪಂ. ಇಒ ದೊಡ್ಡಸಿದ್ದಯ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಾಕ ರವಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಮಚಂದ್ರಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ಹೊನ್ನೇಬಾಗಿ ಶಶಿಧರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT