ಸೋಮವಾರ, ಸೆಪ್ಟೆಂಬರ್ 27, 2021
21 °C
ದೇಶದ ಸ್ವಾತಂತ್ರ್ಯಕ್ಕಾಗಿ ಹತ್ತು ವರ್ಷ ಹೋರಾಡಿದ್ದ ನಂಜುಂಡಯ್ಯ

ಆಸ್ತಿ ದಾಖ‌ಲೆಗಾಗಿ 50 ವರ್ಷದಿಂದ ಹೋರಾಟ ನಡೆಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರ!

ಟಿ.ಎಚ್.ಗುರುಚರಣ್ ಸಿಂಗ್ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಸ್ವಾತಂತ್ರ್ಯಕ್ಕಾಗಿ ಹತ್ತಾರು ವರ್ಷ ಹೋರಾಡಿ, ಬ್ರಿಟೀಷರಿಂದ ಥಳಿತಕ್ಕೊಳಗಾಗಿ, ಸೆರೆವಾಸ ಅನುಭವಿಸಿದ ಸ್ವಾತಂತ್ರ ಹೋರಾಟಗಾರ, ಸರ್ಕಾರ ನೀಡಿದ ಜಮೀನಿನ ದಾಖಲೆ ಪಡೆಯಲು ಐವತ್ತು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ.

ತಾಲ್ಲೂಕಿನ ಯಡವಾಣಿ ಗ್ರಾಮದ ವೈ.ಸಿ.ನಂಜುಂಡಯ್ಯ, ಹತ್ತನೇ ತರಗತಿ ಓದುತ್ತಿರುವಾಗಲೇ ಸ್ವಾತಂತ್ರ ಚಳವಳಿಯಲ್ಲಿ ಧುಮುಕಿದ್ದರು. ಪೊಲೀಸ್ ಕಸ್ಟಡಿಯಲ್ಲಿಯೇ ಪರೀಕ್ಷೆ ಬರೆದು ಉತ್ತೀರ್ಣರಾದರು. ಗೋವಾ ವಿಮೋಚನೆ ಹೋರಾಟದಲ್ಲಿ ಜಗನ್ನಾಥ್ ಜೋಶಿ ನೇತೃತ್ವದಲ್ಲಿ ಹೋರಾಡಿ ಗುಂಡಿನೇಟು ತಿಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ತುರ್ತುಪರಿಸ್ಥಿತಿ ಸಮಯದಲ್ಲಿ 18 ತಿಂಗಳು ಸೆರೆವಾಸ ಅನುಭವಿಸಿದ್ದರು.

ನಂಜುಂಡಯ್ಯ ಅವರು ಸರ್ಕಾರ ದಿಂದ ಹಂಚಿಕೆಯಾಗಿದ್ದ ಜಮೀನಿನ ದಾಖಲೆಗಳನ್ನು ತಮ್ಮ ಹೆಸರಿಗೆ ಪಡೆದುಕೊಳ್ಳಲು ಐವತ್ತು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ.

ಕೃಷಿ ಪದವಿಧರ ನಂಜುಂಡಯ್ಯ ಸೇರಿದಂತೆ 17 ಮಂದಿಗೆ ಕೃಷಿ ಕೈಗೊಳ್ಳಲು ಮಾರ್ಕೋನಹಳ್ಳಿ ಜಲಾಶಯದ ವ್ಯಾಪ್ತಿಯ ಯಡವಾಣಿ ಮತ್ತು ಚಂದನಹಳ್ಳಿಯಲ್ಲಿ ಒಟ್ಟು 11.16 ಎಕರೆಯನ್ನು 1984ರಲ್ಲಿ ಮಂಜೂರು ಮಾಡಲಾಗಿತ್ತು. ದಾಖಲೆಗಳು ನಂಜುಂಡಯ್ಯ ಅವರ ಹೆಸರಿನಲ್ಲಿತ್ತು. 1999- 2000 ಸಾಲಿನಲ್ಲಿ ಕಂದಾಯ ಅಧಿಕಾರಿಗಳು ದಾಖಲೆಗಳಲ್ಲಿದ್ದ ತಮ್ಮ ಹೆಸರನ್ನು ಕೈಬಿಟ್ಟು ಹಕ್ಕು ದಾಖಲೆಗಳನ್ನು ಅಸ್ತವ್ಯಸ್ತಗೊಳಿಸಿ ದ್ದಾರೆ ಎಂದು ನಂಜಂಡಯ್ಯ ಆರೋಪಿಸುತ್ತಾರೆ.

ದಾಖಲೆ ಸರಿಪಡಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೈಕೋರ್ಟ್ ಮತ್ತು ಲೋಕಾಯುಕ್ತಾ ನ್ಯಾಯಾಲಯಗಳಿಗೆ ಮನವಿ ಸಲ್ಲಿಸಿದಾಗ, ಲೋಕಾಯುಕ್ತಾ ನ್ಯಾಯಾಲಯದಲ್ಲಿ ನಿಗದಿತ ಅವಧಿಯಲ್ಲಿ ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದ ಮೇರೆಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆದರೆ ಅಸ್ತವ್ಯಸ್ತಗೊಂಡಿದ್ದ ದಾಖಲೆ ಸರಿಪಡಿಸಿಲ್ಲ. ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, 2019ರಲ್ಲಿ ಆಯೋಗ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಜಿಲ್ಲಾಧಿಕಾರಿ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ.

₹5 ಲಕ್ಷದ ಚೆಕ್ ತಿರಸ್ಕಾರ: ನಂಜುಂಡಯ್ಯ, ಸರ್ಕಾರದ ಯಾವುದೇ ಸೌಲಭ್ಯ ಪಡೆಯುತ್ತಿಲ್ಲ. ಈಚೆಗೆ ಬಿಜೆಪಿ ಮುಖಂಡ ರಾಜೇಶ್ ಗೌಡ, ಕಾರ್ಯಕ್ರಮವೊಂದರಲ್ಲಿ ₹5 ಲಕ್ಷದ ಚೆಕ್‌ ನೀಡಿದ್ದರು. ದೇಶಕ್ಕಾಗಿ ಮಾಡಿರುವ ಸೇವೆಗೆ ಯಾರಿಂದಲೂ ಪ್ರತಿಫಲ ಪಡೆಯುವುದಿಲ್ಲ ಎಂದು ಅದನ್ನು ತಿರಸ್ಕರಿಸಿದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು