ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಐದು ಕೋಟಿ ಕಾಮಗಾರಿ ಅರ್ಧಂಬರ್ಧ

ಮೈಲಾರಿ ಲಿಂಗಪ್ಪ
Published 9 ಮಾರ್ಚ್ 2024, 5:45 IST
Last Updated 9 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ತುಮಕೂರು: ನಗರದಾದ್ಯಂತ ನಾಮಫಲಕಗಳನ್ನು ಅಳವಡಿಸಲು ಮಹಾನಗರ ಪಾಲಿಕೆಯಿಂದ 3 ವರ್ಷದ ಹಿಂದೆ ಆರಂಭಿಸಿದ್ದ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ.

₹5 ಕೋಟಿ ವೆಚ್ಚದ ಕಾಮಗಾರಿಗೆ 2021ರಲ್ಲಿ ಚಾಲನೆ ನೀಡಲಾಗಿತ್ತು. ಈಗಾಗಲೇ ಅಳವಡಿಸಿದ್ದ ಫಲಕಗಳು ವರ್ಷ ಕಳೆಯುವ ಮುನ್ನವೇ ಹಾಳಾಗುತ್ತಿವೆ. ಹಲವು ಕಡೆಗಳಲ್ಲಿ ನಾಮಫಲಕದ ಕಂಬಗಳು ರಸ್ತೆಗೆ ವಾಲುತ್ತಿವೆ. ಕೆಲವು ಕಡೆ ಬಿದ್ದಿವೆ. ಫಲಕದಲ್ಲಿ ಅಳವಡಿಸಿದ್ದ ಶಾಸಕರು, ಪಾಲಿಕೆಯ ಸದಸ್ಯರು ಹಾಗೂ ಬೀದಿಯ ಹೆಸರಿರುವ ಸ್ಟಿಕ್ಕರ್‌ ಕಿತ್ತು ಹೋಗುತ್ತಿದೆ. ‘ಕಳಪೆ’ ಕಾಮಗಾರಿ ನಡೆದಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ನಗರದಲ್ಲಿ ಒಟ್ಟು 5,740 ನಾಮಫಲಕ ಅಳವಡಿಸುವ ಗುರಿ ಹೊಂದಲಾಗಿತ್ತು. ಇದುವರೆಗೆ 4,670 ಬೋರ್ಡ್‌ ಹಾಕಿದ್ದಾರೆ. 1,070 ಬೋರ್ಡ್‌ ಹಾಕುವ ಕೆಲಸ ಇನ್ನೂ ನಡೆಯುತ್ತಿದೆ. ಈಗ ಅಳವಡಿಸಿರುವ ನಾಮಫಲಕಗಳನ್ನು ಹಲವು ಕಡೆಗಳಲ್ಲಿ ಖಾಲಿ ಬಿಡಲಾಗಿದೆ. ಅಧಿಕಾರಿಗಳು ಮಾತ್ರ ಕಾಮಗಾರಿಯ ಕೆಲಸಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಹೇಳುತ್ತಿದ್ದಾರೆ.

ಪ್ರತಿಯೊಂದು ನಾಮಫಲಕಕ್ಕೆ ₹7,725 ವೆಚ್ಚ ಮಾಡಲಾಗಿದೆ. ಗುಂಡಿ ತೆಗೆದು, ಕಂಬ ಹಾಕಿ, ವಿಳಾಸ ಬರೆಯುವುದಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಖರ್ಚು ಮಾಡಲಾಗಿದೆ. ಒಟ್ಟು 5 ಪ್ಯಾಕೇಜ್‌ಗಳ ರೂಪದಲ್ಲಿ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿತ್ತು. ಕೆಲಸಗಳು ಸಹ ಭರದಿಂದ ಆರಂಭವಾಗಿದ್ದವು. ಮೊದಲ ಪ್ಯಾಕೇಜ್‌ನಲ್ಲಿ 1ರಿಂದ 7ನೇ ವಾರ್ಡ್‌, 2ನೇ ಹಂತದಲ್ಲಿ 8ರಿಂದ 14, ಮೂರನೇ ಪ್ಯಾಕೇಜ್‌ನಲ್ಲಿ 16ರಿಂದ 21, ನಾಲ್ಕನೇ ಪ್ಯಾಕೇಜ್‌ನಲ್ಲಿ 22ರಿಂದ 28 ಹಾಗೂ ಐದರಲ್ಲಿ 29ರಿಂದ 35ನೇ ವಾರ್ಡ್‌ ಎಂದು ಪ್ರತ್ಯೇಕವಾಗಿ ಪ್ಯಾಕೇಜ್‌ ರೂಪದಲ್ಲಿ ಟೆಂಡರ್‌ ಕೊಡಲಾಗಿತ್ತು.

ಪ್ರತಿ ಪ್ಯಾಕೇಜ್‌ಗೆ ₹1 ಕೋಟಿ ವ್ಯಯಿಸಲಾಗಿದೆ. ಇಬ್ಬರು ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಆಯಾ ವಾರ್ಡ್‌ನ ಸದಸ್ಯರು ಇದರ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಬೋರ್ಡ್‌ನಲ್ಲಿ ಹೆಸರು, ರಸ್ತೆಯ ಮಾಹಿತಿ ಬರೆಸುವುದು ಸೇರಿದಂತೆ ಎಲ್ಲ ಉಸ್ತುವಾರಿ ಸದಸ್ಯರು ತೆಗೆದುಕೊಂಡಿದ್ದರು.

‘ಪ್ರತಿ ರಸ್ತೆ, ಅಡ್ಡರಸ್ತೆಗೆ ಬೋರ್ಡ್‌ ಹಾಕಿದ್ದಾರೆ. ಯಾವುದಾದರೂ ಒಂದು ಪ್ರಮುಖ ರಸ್ತೆಗೆ ನಾಮಫಲಕ ಅಳವಡಿಸಿ, ಮಾಹಿತಿಗೆ ಅಗತ್ಯ ಅಂಶಗಳನ್ನು ಬರೆದಿದ್ದರೆ ಸಾಕಾಗಿತ್ತು. ಅಧಿಕಾರಿಗಳು ಸಾರ್ವಜನಿಕರ ಹಣ ಪೋಲು ಮಾಡಲು ಇಂತಹ ಕಾಮಗಾರಿಗಳನ್ನು ಮಾಡುತ್ತಿದ್ದಾರೆ’ ಎಂಬುವುದು ಸಾರ್ವಜನಿಕರ ಆರೋಪ.

‘ಅಧಿಕಾರಿಗಳು ಹೇಳುವುದು ಒಂದು, ಮಾಡುವುದು ಮತ್ತೊಂದು. ಲೆಕ್ಕ ಹೇಳಿದಷ್ಟು ಬೋರ್ಡ್‌ಗಳನ್ನು ಹಾಕಿಲ್ಲ. ಸುಳ್ಳು ಲೆಕ್ಕ ಹೇಳುತ್ತಿದ್ದಾರೆ. ಒಂದು ನಾಮಫಲಕ ಅಳವಡಿಸಲು ₹7 ಸಾವಿರ ಖರ್ಚು ಮಾಡಿದ್ದಾರೆ. ಅಷ್ಟೊಂದು ಖರ್ಚು ಮಾಡಬೇಕಾದ ಅಗತ್ಯ ಕೂಡ ಇರಲಿಲ್ಲ’ ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದರು.

‘ಜನರಿಗೆ ಮಾಹಿತಿ ಸಿಗುತ್ತದೆ’

ರಸ್ತೆಗೆ ನಾಮಫಲಕ ಹಾಕಿರುವುದರಿಂದ ಜನರಿಗೆ ಮಾಹಿತಿ ಸಿಗುತ್ತದೆ. ಯಾವ ರಸ್ತೆ ಎಂದು ತಿಳಿಯಲು ಸಹಾಯಕವಾಗುತ್ತದೆ. ನಮ್ಮ ವಾರ್ಡ್‌ನ ಬೋರ್ಡ್‌ಗಳಲ್ಲಿ ನನ್ನ ಹೆಸರಿನ ಬದಲಾಗಿ ಸಂವಿಧಾನದ ಪೀಠಿಕೆ ಹಾಕಿಸಿದ್ದೇನೆ. ಇದರಿಂದ ಜನರಿಗೆ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ– ಜೆ.ಕುಮಾರ್‌ ಮಾಜಿ ಸದಸ್ಯರು ಮಹಾನಗರ ಪಾಲಿಕೆ

‘ಗುಣಮಟ್ಟದ ಕಾಮಗಾರಿ ನಡೆದಿಲ್ಲ’

ಹಲವು ಕಡೆಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಕೆಲಸ ಕಳಪೆಯಾಗಿದೆ. ಕೆಲವು ವಾರ್ಡ್‌ಗಳಲ್ಲಿ ಇನ್ನೂ ಕಂಬ ಅಳವಡಿಸುವ ಕೆಲಸವಾಗಿಲ್ಲ. ಗುತ್ತಿಗೆ ಪಡೆದವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗಿದೆ. ಹಲವು ಕಡೆಗಳಲ್ಲಿ ಕಂಬಕ್ಕೆ ಅಂಟಿಸಿದ್ದ ಸ್ಟಿಕ್ಕರ್‌ ಕಿತ್ತು ಹೋಗಿವೆ – ಮಲ್ಲಿಕಾರ್ಜುನ್‌ ಮಾಜಿ ಸದಸ್ಯರು ಮಹಾನಗರ ಪಾಲಿಕೆ

ನಾಮಫಲಕಕ್ಕೆ ಅಂಟಿಸಿದ್ದ ಮಾಹಿತಿ ಇರುವ ಸ್ಟಿಕ್ಕರ್‌ ಕಿತ್ತು ಹೋಗಿರುವುದು
ನಾಮಫಲಕಕ್ಕೆ ಅಂಟಿಸಿದ್ದ ಮಾಹಿತಿ ಇರುವ ಸ್ಟಿಕ್ಕರ್‌ ಕಿತ್ತು ಹೋಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT