ಸೋಮವಾರ, ಸೆಪ್ಟೆಂಬರ್ 16, 2019
24 °C
ಜಿಲ್ಲೆಯ ವಸತಿ ನಿಲಯಗಳ ಮೇಲ್ವಿಚಾರಕರು, ಪಾಲಕರ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಸೂಚನೆ

ಸರ್ಕಾರಿ ವಿದ್ಯಾರ್ಥಿನಿಲಯ ಅವ್ಯವಸ್ಥೆ ಮೇ 20ರೊಳಗೆ ಸರಿಪಡಿಸಿ

Published:
Updated:
Prajavani

ತುಮಕೂರು: ‘ಈಗ ರಜಾ ದಿನವಾಗಿರುವುದರಿಂದ ಜಿಲ್ಲೆಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿರುವ ಅವ್ಯವಸ್ಥೆಯನ್ನು ಮೇ 20ರೊಳಗೆ ಸರಿಪಡಿಸಿ ಚಿತ್ರ ಸಹಿತ ತಮಗೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಸತಿ ನಿಲಯಗಳ ಮೇಲ್ವಿಚಾರಕರು, ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

’ರಜಾ ದಿನಗಳು ಮುಗಿಯುವುದರೊಳಗೆ ಜಿಲ್ಲೆಯ ಸರ್ಕಾರಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಮತ್ತು ಸರ್ಕಾರಿ ವಸತಿ ನಿಲಯಗಳಲ್ಲಿ ದುರಸ್ತಿಯಲ್ಲಿರುವ ಶೌಚಾಲಯ, ಅಡುಗೆ ಮನೆ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯಾರ್ಥಿಗಳ ಕೊಠಡಿಗಳ ಅವ್ಯವಸ್ಥೆ ಸರಿಪಡಿಸಬೇಕು. ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಹೇಳಿದರು.

’ನಗರ, ಗ್ರಾಮೀಣ ಪ್ರದೇಶಗಳಲ್ಲಿರುವ ವಸತಿ ನಿಲಯಗಳಲ್ಲಿ ಶೌಚಾಲಯ ಹಾಗೂ ಸ್ನಾನದ ಕೊಠಡಿಗಳಿಗೆ ಮೊದಲ ಆದ್ಯತೆ ನೀಡಬೇಕು. ಪ್ರತಿದಿನ ಸ್ವಚ್ಛತೆ ಕಾಪಾಡಲು ಪಟ್ಟಿ (ಚಾರ್ಟ್) ಬಳಸಬೇಕು. ಸ್ವಚ್ಛ ಮಾಡುವವರು ಈ ಪಟ್ಟಿಯಲ್ಲಿ ಕಡ್ಡಾಯವಾಗಿ ಸಹಿ ಮಾಡಬೇಕು. ಶೌಚಾಲಯ ಸ್ವಚ್ಛಗೊಳಿಸಬೇಕು. ಶೌಚಾಲಯಗಳು ಸ್ವಚ್ಛತೆಯಿಂದ ಕೂಡಿದ್ದರೆ ಮಾತ್ರ ಮಕ್ಕಳಿಗೆ ಬಳಸಲು ಮನಸ್ಸಾಗುತ್ತದೆ’ ಎಂದು ವಿವರಿಸಿದರು.

’ಈ ನಿಟ್ಟಿನಲ್ಲಿ ಎಲ್ಲಾ ಹಾಸ್ಟೆಲ್‌ಗಳಲ್ಲಿ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದು ಮೇಲ್ವಿಚಾರಕರಿಗೆ ಅವರು ಸೂಚನೆ ನೀಡಿದರು.

‘ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರನ್ನು ಬಳಸಬೇಕು. ಇಡ್ಲಿ ಮಾಡುವಾಗ ಬಟ್ಟೆಯನ್ನು ಬಳಸಬೇಕು. ವಾರಕ್ಕೊಮ್ಮೆ ಫ್ರಿಡ್ಜ್‌  ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದರು.

ಶಿರಾ, ಮಧುಗಿರಿ, ಕೊರಟಗೆರೆ ತಾಲೂಕಿನಲ್ಲಿರುವ ವಸತಿ ನಿಲಯಗಳ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಮಕ್ಕಳನ್ನು ವೈದ್ಯ ತಪಾಸಣೆಗೊಳಪಡಿಸಬೇಕು. ಕಡಿಮೆ ತೂಕವಿರುವ ಮಕ್ಕಳ ಪಟ್ಟಿ ಮಾಡಿ ನನಗೆ ವರದಿ ನೀಡಬೇಕು. ಸೆಪ್ಟಂಬರ್ ತಿಂಗಳೊಳಗೆ ಮಕ್ಕಳು ಬೆಳವಣಿಗೆ ಹೊಂದಿಲ್ಲದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಉಪ ಕಾರ್ಯದರ್ಶಿ ಡಾ. ಪ್ರೇಮ್‌ಕುಮಾರ್ ಮಾತನಾಡಿ, ‘ಹಾಸ್ಟೆಲ್ ಅಂದರೆ ಊಟ ಹಾಕುವ ಛತ್ರಗಳ ರೀತಿ ಭಾವಿಸಿಬೇಡಿ. ಅಂತಹ ಪರಿಕಲ್ಪನೆಯಿದ್ದರೆ ಮಕ್ಕಳಿಗೆ ಉತ್ತಮ ಪರಿಸರ ನೀಡಲು ಸಾಧ್ಯವಾಗುವುದಿಲ್ಲ. ನಮ್ಮ ಕುಟುಂಬ ಎಂಬಂತೆ ಭಾವಿಸಬೇಕು’ ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಜಿ.ಪಿ.ದೇವರಾಜು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್‌ಕುಮಾರ್ ಮಾತನಾಡಿದರು.

ಪಿಯುಸಿ ಪರೀಕ್ಷೆಯಲ್ಲಿ 574 ಅಂಕ ಗಳಿಸಿರುವ ತಿಪಟೂರಿನ ಮೌನೇಶ್ ಹಾಗೂ ಅಂಬರೀಶ್ ಎಂಬ  ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಫೌಂಡೇಶನ್ ವತಿಯಿಂದ  ₹ 50 ಸಾವಿರ ಚೆಕ್  ವಿತರಿಸಲಾಯಿತು.

ಸಭೆಯಲ್ಲಿ ವಿದ್ಯಾರ್ಥಿ ನಿಲಯಗಳ ಪಾಲಕರು ಹಾಗೂ ಮೇಲ್ವಿಚಾರಕರು ಹಾಜರಿದ್ದರು.

Post Comments (+)