ಸೋಮವಾರ, ಅಕ್ಟೋಬರ್ 14, 2019
24 °C
ಕೇಂದ್ರ ಸರ್ಕಾರದ ಚಿಂತನೆಗೆ ರೈತ ಕೃಷಿ ಕಾರ್ಮಿಕರ ಸಂಘಟನೆ ಖಂಡನೆ, ಪ್ರತಿಭಟನೆಗೆ ಕರೆ

ವಿದೇಶಿ ಹಾಲು; ಆಮದು ಸುಂಕ ಕಡಿತಕ್ಕೆ ವಿರೋಧ

Published:
Updated:

ತುಮಕೂರು: 'ವಿದೇಶಿ ಹಾಲು ಸೇರಿದಂತೆ ವಿದೇಶಿ ಕೃಷಿ ಉತ್ಪನ್ನಗಳಿಗೆ ಆಮದು ಸುಂಕ ಕಡಿತಗೊಳಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿರುವುದು ಖಂಡನೀಯ' ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್‌) ರಾಜ್ಯ ಕಾರ್ಯದರ್ಶಿ ಎಚ್.ವಿ.ದಿವಾಕರ್ ವಿರೋಧಿಸಿದ್ದಾರೆ.

'ರೈತರು, ಹಾಲು ಉತ್ಪಾದಕರು, ಹೈನುಗಾರಿಕೆ ಉದ್ಯಮದ ಅವಲಂಬಿತರು ಸಂಘಟಿತರಾಗಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟಿಸಬೇಕು' ಎಂದು ಮನವಿ ಮಾಡಿದ್ದಾರೆ.

'ಮುಕ್ತ ವ್ಯಾಪಾರ ಒಪ್ಪಂದ (ಫ್ರೀ ಟ್ರೇಡ್ ಅಗ್ರಿಮೆಂಟ್‌)ದಡಿ ಕೇಂದ್ರ ಸರ್ಕಾರವು ಆಮದು ಸುಂಕ ಕಡಿತಗೊಳಿಸಲು ಚಿಂತನೆ ನಡೆಸುತ್ತಿದೆ. ಈಗಾಗಲೇ ಪ್ರಕೃತಿ ವಿಕೋಪ, ಬೆಲೆ ಕುಸಿತ, ಕೃಷಿ ವೆಚ್ಚ ಹೆಚ್ಚಳಕ್ಕೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸ್ಥಿತಿಯಲ್ಲಿ ವಿದೇಶಿ ಕೃಷಿ ಉತ್ಪನ್ನಗಳ ಹೊರೆಯನ್ನು ಹೇರುತ್ತಿರುವುದು ಅತ್ಯಂತ ಖಂಡನೀಯ ಮತ್ತು ರೈತ ವಿರೋಧಿಯಾದುದು' ಎಂದು ಟೀಕಿಸಿದ್ದಾರೆ.

'ಪ್ರಾದೇಶಿಕ ವ್ಯಾಪಾರ ಒಕ್ಕೂಟದಲ್ಲಿರುವ ದಕ್ಷಿಣ ಏಷ್ಯಾದ ಹತ್ತು ರಾಷ್ಟ್ರಗಳ ಜೊತೆಗೆ ಚೀನಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ದೇಶಗಳು ಡೇರಿ ಉತ್ಪನ್ನಗಳ ಮೇಲಿನ ಸುಂಕವನ್ನು ಇಳಿಸಬೇಕು ಎಂಬ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮಣಿಯುತ್ತಿರುವುದು ರೈತ ವಿರೋಧಿಯಾಗಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಕೃಷಿಗೆ ಹಣ ಸುರಿಯುವ ರೈತರಿಗೆ ಬರುವ ಬೆಳೆಯಿಂದ ಲಾಭ ಸಿಗುವುದಿರಲಿ. ಹಾಕಿದ ಖರ್ಚು ಕೂಡಾ ಬರುತ್ತಿಲ್ಲ. ಕೆಲವು ವರ್ಷಗಳಿಂದ ಆವರಿಸಿದ ಭೀಕರ ಬರಗಾಲ, ಕೃಷಿ ನಷ್ಟ ಅನುಭವಿಸಿಕೊಂಡು ಬಂದ ರೈತರಿಗೆ ಒಂದಿಷ್ಟು ಆಸರೆಯಾಗಿದ್ದೇ ಹೈನುಗಾರಿಕೆ. ಬೇಡಿಕೆಗಿಂತ ಹೆಚ್ಚು ಹಾಲನ್ನು ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಹಾಲು ಉತ್ಪನ್ನಗಳ ಆಮದಿನ ಅಗತ್ಯವೇ ಇಲ್ಲ' ಎಂದು ಹೇಳಿದ್ದಾರೆ.

'ಒಂದು ವೇಳೆ ಪ್ರಾದೇಶಿಕ ವ್ಯಾಪಾರ ಒಕ್ಕೂಟದಲ್ಲಿರುವ ದೇಶಗಳ ಒತ್ತಡಕ್ಕೆ ಕೇಂದ್ರ ಸರ್ಕಾರವು ಮಣಿದು ಆಮದು ಸುಂಕ ಕಡಿತ ಒಪ್ಪಂದಕ್ಕೆ ಸಹಿ ಹಾಕಿದರೆ ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವ ದೇಶದ ಕೋಟ್ಯಂತರ ರೈತರು ಬೀದಿಪಾಲಾಗುತ್ತಾರೆ' ಎಂದು ಎಚ್ಚರಿಕೆ ನೀಡಿದ್ದಾರೆ.

'ಕೋಟ್ಯಂತರ ರೈತರ ಶ್ರಮದಿಂದ ಕಟ್ಟಿರುವ ರಾಜ್ಯದ ಕೆಎಂಎಫ್, ಗುಜರಾತ್‌ನ ಅಮುಲ್‌ನಂತಹ ಸಹಕಾರಿ ಸಂಸ್ಥೆಗಳು ಬಾಗಿಲು ಮುಚ್ಚಲಿವೆ. ಇದನ್ನೆ ನಂಬಿ ಜೀವನ ಕಟ್ಟಿಕೊಂಡಿರುವ ಕಾರ್ಮಿಕರು, ವಿತರಕರೂ ಬೀದಿ ಪಾಲಾಗುತ್ತಾರೆ' ಎಂದು ಹೇಳಿದ್ದಾರೆ.

'ಅತ್ಯಂತ ಆಧುನಿಕ ಹಾಗೂ ಭಾರಿ ಪ್ರಮಾಣದ ಹೈನುಗಾರಿಕೆಯಲ್ಲಿ ತೊಡಗಿರುವ ನ್ಯೂಜಿಲ್ಯಾಂಡ್ ಸೇ 93ರಷ್ಟು ರಫ್ತು ಮಾಡಿದರೆ ಆಸ್ಟ್ರೇಲಿಯಾ ಶೇ 95ರಷ್ಟು ರಫ್ತು ಮಾಡುತ್ತದೆ. ಈ ದೇಶಗಳು ಅಗ್ಗದ ದರಕ್ಕೆ ಹಾಲಿನ ಉತ್ಪನ್ನ ರಫ್ತು ಮಾಡಿದರೆ ನಮ್ಮ ದೇಶದ ಹಾಲು, ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಅಂತಿಮವಾಗಿ ರೈತರು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಹಾಗಾಗಿ ಕೇಂದ್ರ ಸರ್ಕಾರವು ಒಪ್ಪಂದಕ್ಕೆ ಸಹಿ ಹಾಕಬಾರದು' ಎಂದು ಒತ್ತಾಯ ಮಾಡಿದ್ದಾರೆ.

 

Post Comments (+)