ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಸಿ ಕೈ ಬಿಟ್ಟ ಯಡಿಯೂರಪ್ಪ: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ

Published 15 ಮಾರ್ಚ್ 2024, 15:33 IST
Last Updated 15 ಮಾರ್ಚ್ 2024, 15:33 IST
ಅಕ್ಷರ ಗಾತ್ರ

ತುಮಕೂರು: ‘ಮನೆಯಲ್ಲಿ ಕುಳಿತಿದ್ದವರನ್ನು ಸ್ಪರ್ಧೆಗೆ ತಯಾರಾಗಿ ಅಂತ ಹೇಳಿ ಈಗ ನಡು ನೀರಿನಲ್ಲಿ ಬಿ.ಎಸ್ ಯಡಿಯೂರಪ್ಪ ಕೈ ಬಿಟ್ಟಿದ್ದಾರೆ’ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರಿಗೆ ಬೇಕಾದ ಎರಡು–ಮೂರು ಕ್ಷೇತ್ರಗಳನ್ನು ಹಠ ಮಾಡಿ ತೆಗೆದುಕೊಂಡಿದ್ದಾರೆ. ನನಗೆ ಯಾಕೆ ಟಿಕೆಟ್‌ ಕೊಡಿಸಲಿಲ್ಲ. ಸೋಮಣ್ಣ ರಾಜ್ಯಸಭೆ ಟಿಕೆಟ್‌ಗಾಗಿ ನವದೆಹಲಿ ತನಕ ಹೋಗಿ ಬಂದರು. ಅಲ್ಲಿ ಟಿಕೆಟ್ ಕೈ ತಪ್ಪಿದರೆ ಇಲ್ಲಿ ಕೊಡಬಹುದಾ? ಅವರೇನು ಈ ಕ್ಷೇತ್ರದ ಸಂಬಂಧಿಕರಾ, ನೆಂಟರಾ?’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪ ಅವರು ನಾನು ದೆಹಲಿಗೆ ಹೋಗುವುದನ್ನು ತಡೆದಿದ್ದರು. ನಿನಗೆ ಬಿ.ಫಾರ್ಮ್‌ ತಂದು ಕೊಡುವ ಜವಾಬ್ದಾರಿ ನನ್ನದು ಅಂತ ಹೇಳಿದ್ದರು. ಸೋಮಣ್ಣನ ನಾಲಿಗೆಗೆ, ಬೈಗುಳಕ್ಕೆ ಯಡಿಯೂರಪ್ಪ ಹೆದರಿಕೊಂಡು ನನ್ನ ಬಲಿ ಮಾಡಿದರು. ಆ ನೋವು ನನಗಿದೆ. ಅಪ್ಪ ಮಕ್ಕಳಿಗೆ ಸ್ವಹಿತಾಸಕ್ತಿಯೇ ಹೆಚ್ಚಾಗಿರಬಹುದು’ ಎಂದು ಕಿಡಿಕಾರಿದರು.

‘ಸೋಮಣ್ಣ ಅವರನ್ನು ಮನೆಗೆ ಬರಬೇಡಿ ಅಂತ ಹೇಳುವಷ್ಟು ಕೆಟ್ಟ ಮನುಷ್ಯ ಅಲ್ಲ. ನನ್ನ ಮನಸ್ಥಿತಿ ಸರಿಯಾಗಿಲ್ಲ. ಇಂತಹ ಸಮಯದಲ್ಲಿ ಬರುವುದು ಬೇಡ ಎಂದು ಹೇಳಿದೆ. ನಾನು ಯಾವುದೇ ಮಾತುಕತೆಗೆ ಸಿದ್ಧನಿಲ್ಲ. ಅವರು ಬರುತ್ತಾರೆ ಅಂತ ನಡೆಮುಡಿ ಹಾಸಿಕೊಂಡು ಕುಳಿತುಕೊಳ್ಳಲು ಆಗುತ್ತಾ?’ ಎಂದು ಪ್ರಶ್ನಿಸಿದರು.

‘ಸೋಮಣ್ಣ ಪರವಾಗಿ ನಾವು ಪ್ರಚಾರ ಮಾಡುವುದಿಲ್ಲ. ಹೊರಗಿನಿಂದ ಬಂದವರಿಗೆ ಬೆಂಬಲ ನೀಡುವುದಿಲ್ಲ. ಕಾರ್ಯಕರ್ತರು ತಟಸ್ಥವಾಗಿ ಇರೋಣ ಎಂದರೆ ತಟಸ್ಥವಾಗಿ ಇರುತ್ತೇನೆ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಕಾರ್ಯಕರ್ತರ ಸಭೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದರು.

ಮನೆ ಆಳುಗಳಲ್ಲ: ‘ನಾವು ಬಿಜೆಪಿ ಪಕ್ಷದವರು, ಸಂಸದ ಜಿ.ಎಸ್‌.ಬಸವರಾಜು ಮನೆ ಆಳುಗಳಲ್ಲ’ಎಂದು ಮಾಧುಸ್ವಾಮಿ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಗೆಲ್ಲಿಸುವುದು ಬಸವರಾಜು ಉದ್ದೇಶ. ನಾನು ಸ್ಪರ್ಧೆ ಮಾಡಿದರೆ ಸೋಲಿಸಲು ಆಗಲ್ಲ ಅಂತ ಅಭ್ಯರ್ಥಿ ಬದಲಾವಣೆ ಮಾಡಿದ್ದಾರೆ. ಈ ಹಿಂದಿನ ವಿಧಾನ ಪರಿಷತ್‌, ವಿಧಾನಸಭಾ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿ ಭಾಷಣ ಮಾಡಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT