ಶುಕ್ರವಾರ, ಜುಲೈ 30, 2021
23 °C

ಇಂಧನ ಬೆಲೆ ಇಳಿಕೆಗೆ ಬಿಎಸ್‌ಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊರೊನಾ ಸಂಕಷ್ಟದ ದಿನಗಳಲ್ಲಿ ಜನರಿಗೆ ಉದ್ಯೋಗ ಇಲ್ಲ. ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಪದೇ ಪದೇ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಹಾಕುತ್ತಿದೆ ಎಂದು ಬಿಎಸ್‍ಪಿ ಜಿಲ್ಲಾ ಉಸ್ತುವಾರಿ ಜೆ.ಎನ್.ರಾಜಸಿಂಹ ಆರೋಪಿಸಿದರು.

ಇಂಧನ ಬೆಲೆ ಇಳಿಸುವಂತೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಬಿಎಸ್‌ಪಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದರು.

‘ಆರ್ಥಿಕ ಹಿಂಜರಿತದಿಂದ ಲಕ್ಷಾಂತರ ಸಣ್ಣ ಕೈಗಾರಿಕೆಗಳು ಸೇರಿದಂತೆ ಬಹುತೇಕ ಉದ್ಯಮಗಳು ಬಾಗಿಲು ಮುಚ್ಚಿವೆ. ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡು ಜೀವನ ನಡೆಸುವುದೇ ಕಷ್ಟ ಎನ್ನುವಂತಹ ಸ್ಥಿತಿ ಇದೆ’ ಎಂದರು.

ಜನರ ಹಿತ ಕಾಯಬೇಕಾದ ಕೇಂದ್ರ ಸರ್ಕಾರ ನಿರಂತರವಾಗಿ ಇಂಧನ ಬೆಲೆ ಏರಿಕೆ ಮಾಡುತ್ತಿದೆ. ನಿತ್ಯ ಬಳಕೆ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದೆ. ನಿರುದ್ಯೋಗದಿಂದ ತತ್ತರಿಸಿರುವ ಜನರಿಗೆ ಜೀವನ ನಿರ್ವಹಣೆ ದುಬಾರಿ ಎನಿಸುವ ವಾತಾವರಣವನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಎಸ್‍ಪಿ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಅಸೀಂ ಇಕ್ಬಾಲ್, ‘ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಜನರಿಗೆ ಸುರಕ್ಷೆ ನೀಡಬೇಕಾದ ಸರ್ಕಾರವೇ ಜನರನ್ನು ದೋಚಲು ಮುಂದಾಗಿದೆ’ ಎಂದು ಟೀಕಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ.ರಂಗಧಾಮಯ್ಯ, ‘ಸರ್ಕಾರ ಖಾಸಗಿ ಶಾಲೆಗಳ ಲಾಬಿಗೆ ಮಣಿದು ಆನ್‍ಲೈನ್ ಶಿಕ್ಷಣಕ್ಕೆ ಒಪ್ಪಿಗೆ ನೀಡಿರುವುದು ಸರಿಯಲ್ಲ. ಆನ್‍ಲೈನ್ ಶಿಕ್ಷಣದ ಹೆಸರಿನಲ್ಲಿ ಶಾಲಾ– ಕಾಲೇಜುಗಳು ಪೋಷಕರನ್ನು ಸುಲಿಗೆಮಾಡಲು ಮುಂದಾಗಿವೆ’ ಎಂದು ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಶೂಲಯ್ಯ, ಶಿರಾ ಉಸ್ತುವಾರಿ ಜಿ.ಎಸ್.ಮಂಜುನಾಥ್, ಶಿರಾ ತಾಲ್ಲೂಕು ಘಟಕದ ಅಧ್ಯಕ್ಷ ಸಣ್ಣಭೂತಯ್ಯ, ಗುಬ್ಬಿ ತಾಲ್ಲೂಕು ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ರಂಗಯ್ಯ, ಮಧುಗಿರಿ ತಾಲ್ಲೂಕು ಅಧ್ಯಕ್ಷ ಅಂಜನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು