ಶನಿವಾರ, ಜನವರಿ 23, 2021
18 °C
ಚರಂಡಿ, ಮನೆ ಬಳಿ ಕಸ ಎಸಯುತ್ತಿರುವ ಜನರು

ರಾತ್ರೋರಾತ್ರಿ ರಸ್ತೆಗೆ ಬೀಳುತ್ತೆ ಕಸ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಅಭಿವೃದ್ಧಿ ಹೆಸರಿನಲ್ಲಿ ನಗರ ಎಷ್ಟೇ ಸ್ಮಾರ್ಟ್ ಎನಿಸಿದರೂ ರಸ್ತೆ ಬದಿ, ಚರಂಡಿಗಳಿಗೆ, ಖಾಲಿ ನಿವೇಶನಗಳಿಗೆ ಕಸ ಎಸೆಯುವ ಪ್ರಕ್ರಿಯೆಗೆ ಮಾತ್ರ ತಡೆ ಬಿದ್ದಿಲ್ಲ.

ಎಸ್‌ಐಟಿ ಬಡಾವಣೆ, ಕೃಷ್ಣ ನಗರ, ಬನಶಂಕರಿ, ಕುವೆಂಪು ನಗರ, ವಿದ್ಯಾನಗರ ಹೀಗೆ ಬಹಳಷ್ಟು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ರಾತ್ರೋರಾತ್ರಿ ಕಸವನ್ನು ಜನರು ರಸ್ತೆ ಬದಿ, ಚರಂಡಿ, ಖಾಲಿ ನಿವೇಶನ, ಮನೆಗಳ ಎದುರು ಎಸೆಯುತ್ತಿದ್ದಾರೆ. ಚರಂಡಿಗಳಿಗೆ ಕಸ ಬೀಳುತ್ತಿರುವುದರಿಂದ ಕೊಳಚೆ ಸರಾಗವಾಗಿ ಹರಿಯಲು ತಡೆಯಾಗಿದೆ. ಕಸ ಎಸೆಯುವ ಪ‍್ರಕ್ರಿಯೆ ರಾತ್ರಿ ಮತ್ತು ಬೆಳಗಿನ ಜಾವ ಹೆಚ್ಚಿದೆ.

ಹಾಸಿಗೆ, ಮದ್ಯದ ಬಾಟಲಿಗಳು, ಆಹಾರ ತ್ಯಾಜ್ಯದ ದುರ್ನಾತ ಬೆಳ್ಳಂಬೆಳಿಗ್ಗೆಯೇ ವಾತಾವರಣವನ್ನು ಕೆಡಿಸುತ್ತಿದೆ. ಕೃಷ್ಣ ನಗರದ ಮುಖ್ಯರಸ್ತೆಯ ಬದಿ ಹಲವು ದಿನಗಳಿಂದ ಕಸ ಎಸೆಯಲಾಗುತ್ತಿದೆ. ಈ ಕಸ ಎಸೆಯುವ ಕಾರಣಕ್ಕಾಗಿಯೇ ಇಲ್ಲಿ ಬೆಳಿಗ್ಗೆ ಹಂದಿ, ನಾಯಿಗಳ ಗುಂಪು ಇರುತ್ತದೆ. ಈ ರೀತಿಯ ವಾತಾವರಣ ನಗರದ ಬಹಳಷ್ಟು ಬಡಾವಣೆಗಳಲ್ಲಿಯೂ ಕಾಣುತ್ತದೆ.

‘ನಮ್ಮ ಮನೆಯ ಪಕ್ಕದ ರಸ್ತೆಯಲ್ಲಿ ಚರಂಡಿ ಇದೆ. ಆ ಚರಂಡಿಗೂ ರಾತ್ರೋರಾತ್ರಿ ಕೆಲವರು ಕಸ ಎಸೆಯುವರು. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಒಂದಿಷ್ಟು ಗಮನವಹಿಸುವುದು ಉತ್ತಮ. ಅಂದಮಾತ್ರಕ್ಕೆ ಎಲ್ಲ ಜವಾಬ್ದಾರಿಯನ್ನು ಅವರಿಗೆ ವಹಿಸುವುದು ಎಂದಲ್ಲ. ಜನರೂ ಸಹ ಈ ಬಗ್ಗೆ ತಿಳಿವಳಿಕೆ ಮೂಡಿಸಿಕೊಳ್ಳಬೇಕು. ಹೀಗೆ ಕಸ ಎಸೆಯುವವರ ಮನೆ ಮುಂದಕ್ಕೆ ಬೇರೊಬ್ಬರು ಕಸ ಎಸೆದರೆ ಆಗುವ ಅನುಭವ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು’ ಎಂದು ಅಶೋಕ ನಗರದ ಮಹಿಳೆಯೊಬ್ಬರು ಬೇಸರದಿಂದ ನುಡಿಯುವರು.

ನಗರದ ಬಹಳಷ್ಟು ಖಾಲಿ ನಿವೇಶನಗಳು ಸಹ ಕಸದ ಅಡ್ಡೆಗಳಾಗಿವೆ. ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ಹಲವು ಬಾರಿ ಪಾಲಿಕೆ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೂ ನಿವೇಶನಗಳು ಕಸದ ಅಡ್ಡೆಗಳಾಗುವುದು ನಿಂತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.