ಸೋಮವಾರ, ನವೆಂಬರ್ 18, 2019
28 °C

ಸಂಸದರಿಗೆ ಹಟ್ಟಿ ಪ್ರವೇಶ ನಿರಾಕರಣೆ: ಗೊಲ್ಲರ ಸಂಘ ವಿಷಾದ

Published:
Updated:

ತುಮಕೂರು: ಪರಿಶಿಷ್ಟ ಸಮುದಾಯದವರು ಎಂಬ ಕಾರಣಕ್ಕೆ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಿಸಿರುವುದಕ್ಕೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘವು ವಿಷಾದ ವ್ಯಕ್ತಪಡಿಸಿದೆ.

ಈ ಪ್ರಸಂಗ ಹಟ್ಟಿಯಲ್ಲಿನ ಜನರ ಮೌಢ್ಯದಿಂದ ನಡೆದಿದೆ ಹೊರತು ಉದ್ದೇಶಪೂರ್ವಕವಾಗಿ ನಡೆದಿಲ್ಲ. ಇಂತಹ ಘಟನೆಗಳನ್ನು ಮರುಕಳಿಸದಂತೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ಸಂಘದ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಅವರು ಮಂಗಳವಾರ ಮಾತನಾಡಿದರು.

ಕಾಡುಗೊಲ್ಲರ ಅಸ್ಮಿತೆ ಸಮಿತಿ ಹೋರಾಟ ಸಮಿತಿ ಸಂಚಾಲಕ ಜಿ.ಕೆ.ನಾಗಣ್ಣ, ಕಾಡುಗೊಲ್ಲರ ಸಮುದಾಯವು ಮೌಢ್ಯ ಮತ್ತು ಆಂತರಿಕವಾಗಿಯೂ ಅಸ್ಪೃಶ್ಯತೆಯನ್ನು ಆಚರಿಸುತ್ತಿದೆ. ಇದರಿಂದ ಹಟ್ಟಿಯ ಪ್ರವೇಶ ನಿರಾಕರಣೆಯಂತಹ ಪ್ರಸಂಗಗಳು ಮರುಕಳಿಸುತ್ತಿವೆ ಎಂದರು.

ಗೊಲ್ಲರ ಸಮುದಾಯವು ಕೆಳಸಮುದಾಯಗಳು ಎಂದು ಕರೆಯುವ ಹಲವಾರು ಸಮೂಹಗಳ ಜತೆ ಉತ್ತಮ ಬಾಂಧವ್ಯ ಹೊಂದಿದೆ. ಉಪ್ಪಾರ, ಮಣೆಗಾರ ಸಮುದಾಯದ ಜನರು ಸಹ ಗೊಲ್ಲರ ಕ್ಯಾತೆ ದೈವವನ್ನು ಪೂಜಿಸುತ್ತಾರೆ. ವೈದಿಕ ಸಮುದಾಯದ ಪ್ರಭಾವದಿಂದಾಗಿ ಅಸ್ಪೃಶ್ಯತೆ ಆಚರಣೆಯನ್ನು ಗೊಲ್ಲ ಸಮುದಾಯದ ಬಹುತೇಕರು ಮೈಗೂಡಿಸಿಕೊಂಡಿದ್ದಾರೆ. ಅವರಲ್ಲಿನ ಮೌಢ್ಯಾಚರಣೆ ನಿವಾರಿಸಲು ಸರ್ಕಾರವು ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.

ದಲಿತರಷ್ಟೆ ಗೊಲ್ಲರು ಸಹ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ನಮ್ಮ ಸಮುದಾಯದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್‌, ಸಮಾನತೆಯನ್ನು ಸಾರುವ ಸರ್ಕಾರದ ಅರಿವಿನ ಅಭಿಯಾನಗಳು ಹಟ್ಟಿಯನ್ನು ಮುಟ್ಟುತ್ತಿಲ್ಲ. ಹಟ್ಟಿಯಲ್ಲಿನ ಬಹುತೇಕ ಅವಿದ್ಯಾವಂತ ಜನರಿಗೆ ಸಂಸದ, ಶಾಸಕರು ಎಂದರೆ ಯಾರು ಎಂಬ ಮಾಹಿತಿ ಇರುವುದಿಲ್ಲ. ಹಾಗಾಗಿ ಇಂತಹ ಘಟನೆ ನಡೆದಿದೆ. ಇದನ್ನು ತಡೆಯಲು ನಾವು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.

* ಸುಪ್ರೀಂಕೋರ್ಟ್‌ ಆದೇಶ ನೀಡಿದ್ದರೂ ಶಬರಿಮಲೆಗೆ ಮಹಿಳೆಯರನ್ನು ಜನರು ಬಿಡುತ್ತಿಲ್ಲ. ಅದೇ ಮನಸ್ಥಿತಿ ಹಟ್ಟಿಯ ವಾಸಿಗಳಲ್ಲಿ ಇದೆ. ಬದಲಾವಣೆ ಅವರ ಮನದಿಂದಲೇ ಪ್ರಾರಂಭವಾಗಲು ನಾವೆಲ್ಲ ಪ್ರಯತ್ನಿಸಬೇಕಿದೆ.

–ಕೂನಿಕೆರೆ ರಾಮಣ್ಣ, ಕಾಡುಗೊಲ್ಲರ ಸಂಘದ ನಿರ್ದೇಶಕ

ಪ್ರತಿಕ್ರಿಯಿಸಿ (+)