ಶುಕ್ರವಾರ, ನವೆಂಬರ್ 15, 2019
26 °C

ಸಂಸದರ ಹಟ್ಟಿ ಪ್ರವೇಶ ಪ್ರಸಂಗ: ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳ ತಂಡ

Published:
Updated:
Prajavani

ತುಮಕೂರು: ಪರಿಶಿಷ್ಟ ಸಮುದಾಯದವರು ಎಂಬ ಕಾರಣಕ್ಕೆ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಿಸಿದ ಪ್ರಸಂಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಂಡ ಹಟ್ಟಿಗೆ ಭೇಟಿ ನೀಡಿತು.

ಹಟ್ಟಿಯೊಳಗೆ ಪ್ರವೇಶ ಮಾಡಲು ಗ್ರಾಮಸ್ಥರು ಅಡ್ಡಿಪಡಿಸಿದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳೀಯರ ಜತೆ ಚರ್ಚೆ ನಡೆಸಿದರು. ಸೋಮವಾರ ನಡೆದ ಘಟನಾವಳಿಗಳ ಕುರಿತು ಮಾಹಿತಿ ಸಂಗ್ರಹಿಸಿದರು.

ಮುಂದಿನ ದಿನಗಳಲ್ಲಿ ಹರಿಜನ ಸೇರಿದಂತೆ ಯಾವುದೇ ಸಮುದಾಯದವರ ಪ್ರವೇಶಕ್ಕೆ ಅಡ್ಡಿ ಪಡಿಸಬಾರದು. ಒಂದು ವೇಳೆ ಅಡ್ಡಿಪಡಿಸಿದಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಎಚ್ಚರಿಸಿದರು.

ಚರ್ಚೆಯ ಬಳಿಕ ಗ್ರಾಮಸ್ಥರು, ಸಂಸದ ನಾರಾಯಣಸ್ವಾಮಿ ಅವರನ್ನು ಗ್ರಾಮಕ್ಕೆ ಕರೆಸಿ, ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಸಲ್ಲಿಸುತ್ತೇವೆ ಎಂದು ಒಪ್ಪಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ರಮಾಮಣಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಿವಣ್ಣ, ತಹಶೀಲ್ದಾರ್ ವರದರಾಜು, ಡಿವೈಎಸ್‌ಪಿ ಧರಣೇಶ್, ಸರ್ಕಲ್ ಇನ್ಸ್‌ಸ್ಪೆಕ್ಟರ್ ವೆಂಕಟೇಶ್, ಹಿಂದುಳಿದ ವರ್ಗಗಳ ವಿಸ್ತರಾಣಾಧಿಕಾರಿ ಸುಬ್ರಾನಾಯ್ಕ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ದಿವಾಕರ್ ಇದ್ದರು.

ಪ್ರತಿಕ್ರಿಯಿಸಿ (+)