ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯಲ್ಲಿ ಸೌಲಭ್ಯ ತಲುಪಿಸಿ: ಸಚಿವ ಜಿ.ಪರಮೇಶ್ವರ

ಆರೋಗ್ಯ ತಪಾಸಣಾ ಶಿಬಿರದಲ್ಲಿ ಪರಮೇಶ್ವರ ಹೇಳಿಕೆ
Published 4 ಫೆಬ್ರುವರಿ 2024, 6:48 IST
Last Updated 4 ಫೆಬ್ರುವರಿ 2024, 6:48 IST
ಅಕ್ಷರ ಗಾತ್ರ

ತುಮಕೂರು: ಸಾವಿರಾರು ರೈತರಿಗೆ ಇದುವರೆಗೂ ಪಹಣಿಯೇ ದೊರೆತಿಲ್ಲ. ಕಾಲಮಿತಿಯೊಳಗೆ ಸರ್ಕಾರಿ ಸೌಲಭ್ಯ ತಲುಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಶನಿವಾರ ಜಿಲ್ಲಾ ಆಡಳಿತದಿಂದ ಸರ್ಕಾರಿ ಅಧಿಕಾರಿ, ನೌಕರರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜನರಿಗೆ ಸ್ಪಂದಿಸಿ ಉತ್ತಮ ಸೇವೆ ನೀಡುವುದು ತುಂಬಾ ವಿರಳವಾಗುತ್ತಿದೆ. ಸೌಲಭ್ಯ ಪಡೆದ ಫಲಾನುಭವಿಗಳಿಗೆ ಮತ್ತೊಮ್ಮೆ ಸವಲತ್ತು ನೀಡುವುದು ಉತ್ತಮ ಆಡಳಿತವಲ್ಲ. ಅಧಿಕಾರಿಗಳು ಪ್ರತಿ ತಿಂಗಳು ಸರ್ಕಾರಿ ಯೋಜನೆಗಳು ಅರ್ಹರಿಗೆ ತಲುಪುತ್ತಿರುವ ಬಗ್ಗೆ ಪ್ರಗತಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಕೆಲಸದ ಒತ್ತಡದ ಮಧ್ಯೆ ನೌಕರರು ತಮ್ಮ ಆರೋಗ್ಯ ಕಡೆಗಣಿಸಬಾರದು. ಇದೇ ಉದ್ದೇಶದಿಂದ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವಂತೆ ಜಿಲ್ಲಾ ಆಡಳಿತ, ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸಮಗ್ರ ಆರೋಗ್ಯ ತಪಾಸಣೆ ಅಭಿಯಾನದಡಿ 2.5 ಲಕ್ಷ ಜನರ ಆರೋಗ್ಯ ಪರೀಕ್ಷಿಸಲಾಗಿದೆ. ಇನ್ನೂ 17 ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಬೇಕಿದೆ ಎಂದು ತಿಳಿಸಿದರು.

ಜಿ.ಪಂ ಸಿಇಒ ಜಿ.ಪ್ರಭು, ‘ಎಲ್ಲರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರಬೇಕು. ಮುಂದಿನ 6 ತಿಂಗಳಲ್ಲಿ ಸಮಗ್ರ ಆರೋಗ್ಯ ತಪಾಸಣಾ ಅಭಿಯಾನ ಪೂರ್ಣಗೊಳ್ಳಲಿದೆ’ ಎಂದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಉಪವಿಭಾಗಾಧಿಕಾರಿಗಳಾದ ಶಿವಪ್ಪ, ಸಪ್ತಶ್ರೀ, ಗೌರವ್‌ಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್‌, ಡಿಎಚ್‌ಒ ಡಾ.ಡಿ.ಎನ್‌.ಮಂಜುನಾಥ್‌ ಇತರರು ಭಾಗವಹಿಸಿದ್ದರು.

ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ದಂತ ತಪಾಸಣೆ ಮಾಡಲಾಯಿತು. ಶಿಬಿರದಲ್ಲಿ ಸುಮಾರು 20 ನೋಂದಣಿ ಕೇಂದ್ರಗಳನ್ನು ತೆರೆಯಲಾಗಿತ್ತು. ಸುಮಾರು 1 ಸಾವಿರಕ್ಕೂ ಹೆಚ್ಚು ಅಧಿಕಾರಿ, ನೌಕರರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆರೋಗ್ಯ ಇಲಾಖೆ, ಸಿದ್ಧಾರ್ಥ, ಶ್ರೀದೇವಿ, ಸಿದ್ಧಗಂಗಾ ಆಸ್ಪತ್ರೆಗಳ 200 ವೈದ್ಯಾಧಿಕಾರಿ ಹಾಗೂ ಶುಶ್ರೂಷಕಿಯರನ್ನು ನೇಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT