ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸವ

ಚುರುಗುಟ್ಟುವ ಸುಡುಬಿಸಿಲಿನಲ್ಲಿ ಭಕ್ತಿ ಮೆರೆದ ಜನ ಸಮೂಹ
Last Updated 19 ಏಪ್ರಿಲ್ 2019, 20:06 IST
ಅಕ್ಷರ ಗಾತ್ರ

ತುಮಕೂರು: ನಗರದ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸವ ಶುಕ್ರವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಡೆಯಿತು. ಸುಡುಬಿಸಿಲು ಲೆಕ್ಕಿಸದೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.

ಬೆಳಿಗ್ಗೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ, ಗೆಜ್ಜೆಪೂಜೆ, ಮಂಟಪ ಪಡಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ರಥಕ್ಕೆ ಬೃಹತ್ ಮಾಲೆಗಳನ್ನು ಕ್ರೇನ್ ಸಹಾಯದಿಂದ ಹಾಕಿದ್ದು ವಿಶೇಷವಾಗಿತ್ತು. ಮಧ್ಯಾಹ್ನ 1ಕ್ಕೆ ದೇವಸ್ಥಾನದ ಆವರಣದಲ್ಲಿ ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ಬಾಳೆಹಣ್ಣು, ದವನವನ್ನು ರಥದ ಉತ್ಸವ ಮೂರ್ತಿಗೆ ಅರ್ಪಿಸಿ ಭಕ್ತಿ ಮೆರೆದರು.

ರಥೋತ್ಸವ ಸಮಯಕ್ಕೆ ತುಮಕೂರು ನಗರ ಹಾಗೂ ಜಿಲ್ಲೆಯ ವಿವಿಧ ಕಡೆಯ ಭಕ್ತರು ಏಕ ಕಾಲಕ್ಕೆ ಧಾವಿಸಿದ್ದರಿಂದ ನೂಕುನುಗ್ಗಲು ಕಂಡು ಬಂದಿತು. ಬಳಿಕ ದೇವಸ್ಥಾನದ ಆವರಣದಲ್ಲಿ ಭಕ್ತರು ಉರುಳು ಸೇವೆ ನಡೆಸಿದರು.

ಕೋಸಂಬರಿ, ಪಾನಕ ವಿತರಣೆ: ರಥೋತ್ಸವಕ್ಕೆ ಬಂದ ಭಕ್ತರಿಗೆ ಸಂಘ ಸಂಸ್ಥೆಗಳು, ಹರಕೆ ಹೊತ್ತವರು ಪಾನಕ, ಮಜ್ಜಿಗೆ, ಕೋಸಂಬರಿ, ಉಪಾಹಾರ , ಊಟದ ವ್ಯವಸ್ಥೆ ಮಾಡಿದ್ದರು. ಶೆಟ್ಟಿಹಳ್ಳಿ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲೂ ಸಂಘ ಸಂಸ್ಥೆಯವರು ಪಾನಕ, ಮಜ್ಜಿಗೆ ವಿತರಿಸಿದರು.

ನೆಲ ಸುಡುತ್ತಿದ್ದರಿಂದ ಭಕ್ತರಿಗೆ ನಿಲ್ಲಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಟ್ಯಾಂಕರ್‌ಗಳಿಂದ ನೆಲಕ್ಕೆ ನೀರು ಹರಿಸಿ ತಂಪು ಮಾಡಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವಾಗಿ ನಗರ ಸಾರಿಗೆ ಬಸ್‌ಗಳ ಸಂಚಾರ ವ್ಯವಸ್ಥೆ ಹೆಚ್ಚು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT