ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್: ಜಲ ಜೀವನ್ ಮಿಷನ್ ಜನರಿಗೆ ಸಂಕಟ!

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಆಮೆ ನಡಿಗೆಯಲ್ಲಿ ಸಾಗಿದ ಕಾಮಗಾರಿ
Published : 13 ಆಗಸ್ಟ್ 2024, 6:16 IST
Last Updated : 13 ಆಗಸ್ಟ್ 2024, 6:16 IST
ಫಾಲೋ ಮಾಡಿ
Comments

ಕುಣಿಗಲ್: ಪ್ರತಿ ಮನೆಗೂ ನಲ್ಲಿ ಮೂಲಕ ನೀರು ನೀಡಲು ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ತಾಲ್ಲೂಕಿನಲ್ಲಿ ಆಮೆ ನಡಿಗೆಯಲ್ಲಿ ‌‌‌‌ಸಾಗುತ್ತಿದೆ. ಕಾಮಗಾರಿ ಮುಗಿದಿರುವ ಗ್ರಾಮಗಳಲ್ಲಿ ಅವ್ಯವಸ್ಥೆ ಉಂಟಾಗಿದೆ. ಕೆಲ ಗ್ರಾಮಗಳಲ್ಲಿ ನೀರಿಗಾಗಿ ಬಕಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ಯೋಜನೆ ಉದ್ದೇಶ ಸಾರ್ಥಕ ಕಂಡಿದೆ.

ಜಲಜೀವನ್ ಮಿಷನ್ ಯೋಜನೆ ಮೂಲ ಉದ್ದೇಶ ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಿಗೂ ನಲ್ಲಿ ಮೂಲಕ ನೀರು ಪೂರೈಸುವುದು. ತಾಲ್ಲೂಕಿನ ಗ್ರಾಮೀಣ ಪ್ರದೇಶದ ಶೇ50 ಮನೆಗಳಿಗೆ ಈಗಾಗಲೇ ನಲ್ಲಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜೆಜೆಎಂನಿಂದ ಮತ್ತೆ ಅದೇ ಮನೆಗಳಿಗೆ ಪ್ರತ್ಯೇಕವಾಗಿ ಪೈಪ್‌ಲೈನ್ ಮೂಲಕ ನೀರು ಪೂರೈಕೆಗೆ ಮುಂದಾಗಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಗ್ರಾಮಸ್ಥರದ್ದು.

ನೀರು ಸರಬರಾಜು ಆಗದ ಮನೆಗಳಿರುವ ಗ್ರಾಮಗಳನ್ನು ಗುರುತಿಸಿ ನೀರು ಸರಬರಾಜಿಗೆ ಪ್ರಥಮ ಆದ್ಯತೆ ನೀಡಿ ನಂತರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬಹುದಾಗಿತ್ತು ಎನ್ನುವುದು ಸ್ಥಳೀಯರ ಅಭಿಪ್ರಾಯ.

ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ 538 ಕಾಮಗಾರಿಗೆ ಕ್ರಿಯಾ ಯೋಜನೆ ಮಂಜೂರಾತಿ ದೊರಕಿದೆ. 303 ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಇನ್ನೂ 235 ಕಾಮಗಾರಿಗೆ ಕಾರ್ಯಾದೇಶ ನೀಡಬೇಕಾಗಿದೆ. 257 ಕಾಮಗಾರಿ ಪ್ರಗತಿಯಲ್ಲಿದ್ದು, 80 ಕಾಮಗಾರಿ ಪೂರ್ಣವಾಗಿದೆ. 40 ಕಾಮಗಾರಿ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ .

ತಾಲ್ಲೂಕಿನ 546 ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗುತ್ತಿದೆ. 55 ಮಾತ್ರ ಟ್ಯಾಂಕ್‌ಗಳು ನಿರ್ಮಾಣವಾಗಿದ್ದರೂ, ಕ್ಯೂರಿಂಗ್ ಮಾಡದಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಬಹುತೇಕ ಕಡೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದೆ. ಜಾಗ ಗುರುತಿಸಿ ಗುತ್ತಿಗೆದಾರರ ವಶಕ್ಕೆ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಲವೆಡೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣದ ಜಾಗವನ್ನು ಗ್ರಾಮಸ್ಥರು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಿ ಗುತ್ತಿಗೆದಾರರ ವಶಕ್ಕೆ ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಟ್ಯಾಂಕ್ ನಿರ್ಮಾಣದ ಬಗ್ಗೆ ಕೌಶಲ ಕಾರ್ಮಿಕರು ಸಿಗದಿರುವುದು ಸಮಸ್ಯೆ ಆಗುತ್ತಿದೆ. ಇದರಿಂದಾಗಿ ಗುಣಮಟ್ಟದ ಟ್ಯಾಂಕ್ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಸಾಲಂತ್ರಿ ಪಾಳ್ಯ ಚಿಕ್ಕಣ್ಣ ದೂರುತ್ತಾರೆ.

ಕೊತ್ತಗೆರೆ ಹೋಬಳಿ ಡಿ.ಹೊಸಹಳ್ಳಿ ಎಸ್.ಸಿ ಕಾಲೊನಿ, ಉಜ್ಜನಿ ಗ್ರಾಮ ಪಂಚಾಯಿತಿ ಕಾಚಿಹಳ್ಳಿ ಸೇರಿದಂತೆ ಗಡಿಭಾಗದ ಗ್ರಾಮಗಳಲ್ಲಿ ಕಳಪೆ ಕಾಮಗಾರಿ ನಡೆದಿದೆ ಎನ್ನುತ್ತಾರೆ ಗ್ರಾಮಸ್ಥರು.

‘ನೀರಿನಂತೆ ಹರಿಯುತ್ತಿರುವ ಹಣ’

ಜಲಜೀವನ್ ಮಿಷನ್ ಹರ್ ಘರ್ ಜಲ್ ಕೇಂದ್ರ ಸರ್ಕಾರದ ಅದ್ದೂರಿ ಹಾಗೂ ಅತಿ ಹೆಚ್ಚಿನ ಹಣದ ಕಾರ್ಯಕ್ರಮವಾಗಿದೆ. ಹೆಸರಿಗೂ ಕಾರ್ಯಕ್ರಮದ ವಾಸ್ತವತೆಗೂ ಅಜಗಜಾಂತರ ವ್ಯತ್ಯಾಸವಿದೆ. ಪ್ರತಿ ಮನೆಗೂ ನೀರು ಬರುತ್ತೋ ಇಲ್ಲವೋ. ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಮತ್ತು ಜನಪ್ರತಿನಿಧಿಗಳಿಗೆ ಹಣ ನೀರಿನಂತೆ ಹರಿಯುತ್ತದೆ. ನಲ್ಲಿಗಳನ್ನು ಎಲ್ಲೆಂದರಲ್ಲಿ ಅಳವಡಿಕೆ ಮಾಡಿ ದಾಖಲೆ ಸೃಷ್ಟಿ ಮಾಡುತ್ತಿದ್ದಾರೆಯೇ ಹೊರತು ಅಗತ್ಯವಿರುವ ಕಡೆ ಅಳವಡಿಕೆ ಮಾಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನೀರಗಂಟಿಯೊಬ್ಬರು.

ತಾಲ್ಲೂಕಿನ ಎಡೆಯೂರು ಗ್ರಾಮಪಂಚಾಯಿತಿ ರಾಗಿಹಳ್ಳಿ ಹಂಪಾಪುರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಜೆಜೆಎಂ ಸಾಫಲ್ಯ ಕಂಡು ಜನರಿಗೆ ನೀರು ಸಿಕ್ಕಿದೆ
-ಉಜ್ಜನಿ ಚನ್ನೆಗೌಡ, ಸ್ಥಳೀಯ
ಕಾಮಗಾರಿ ಕಳಪೆ ಆಗಿದೆ. ಅಧಿಕಾರಿಗಳ ಸಮನ್ವಯ ಕೊರತೆಯಿಂದ ವಿಳಂಬವಾಗುತ್ತಿದೆ. ಯೋಜನೆಗಾಗಿ ರಸ್ತೆಗಳನ್ನು ಅಗೆಯಲಾಗಿದೆ.
-ವಿನೋದ್ ಗೌಡ, ಕೂತಾರಹಳ್ಳಿ
ಚರಂಡಿ ದಾಟಲು ಬಳಕೆಯಾಗಿರುವ ಹರ್ ಘರ್ ಜಲ್ ಫಲಕ
ಚರಂಡಿ ದಾಟಲು ಬಳಕೆಯಾಗಿರುವ ಹರ್ ಘರ್ ಜಲ್ ಫಲಕ
ಕಳಪೆ ಕಾಮಗಾರಿಗೆ ಸಾಕ್ಷಿಯಾಗಿರುವ ಓವರ್ ಹೆಡ್ ಟ್ಯಾಂಕ್
ಕಳಪೆ ಕಾಮಗಾರಿಗೆ ಸಾಕ್ಷಿಯಾಗಿರುವ ಓವರ್ ಹೆಡ್ ಟ್ಯಾಂಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT