ಮಂಗಳವಾರ, ಜೂನ್ 15, 2021
23 °C
ಕೆಎಸ್‌ಆರ್‌ಟಿಸಿಗೆ ಲಾಕ್‌ಡೌನ್ ಪೂರ್ವ ಮತ್ತು ನಂತರದಲ್ಲಿ ₹ 69 ಕೋಟಿ ನಷ್ಟ

ಸಹಜ ಸ್ಥಿತಿಗೆ ಬಾರದ ಸಾರಿಗೆ ಸಂಸ್ಥೆ ಆದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಲಾಕ್‌ಡೌನ್ ತೆರವಾದ ನಂತರ ಬಸ್ ಸಂಚಾರ ಆರಂಭವಾಗಿದೆ. ಹೀಗಿದ್ದರೂ ಜಿಲ್ಲಾ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ದಿನ ದಿನವೂ ನಷ್ಟ ಹೆಚ್ಚುತ್ತಲೇ ಇದೆ.

ಲಾಕ್‌ಡೌನ್ ಪೂರ್ವದಲ್ಲಿ ಬಸ್ ಸಂಚಾರವನ್ನು ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ನಿಷೇಧಿಸಿತ್ತು. ಈ ಅವಧಿಯಲ್ಲಿ ಜಿಲ್ಲೆ ಕೆಎಸ್‌ಆರ್‌ಟಿಸಿಗೆ ಬರೋಬ್ಬರಿ ₹ 36 ಕೋಟಿ ನಷ್ಟವಾಗಿತ್ತು. ಲಾಕ್‌ಡೌನ್ ತೆರವಾದ ನಂತರದ ದಿನದಿಂದ ಜುಲೈವರೆಗೆ ₹ 33 ಕೋಟಿ ನಷ್ಟ ಉಂಟಾಗಿದೆ.

ಲಾಕ್‌ಡೌನ್ ನಂತರ ಸಂಸ್ಥೆ ಮತ್ತೆ ತನ್ನ ಹಳೇ ಹಾದಿಯಲ್ಲಿ ಸಾಗುತ್ತದೆ ಎನ್ನುವ ನಿರೀಕ್ಷೆಗಳು ಇದ್ದವು. ಆದರೆ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶ ಇಲ್ಲದ ಕಾರಣ ಮತ್ತು ಜನರು ಕೊರೊನಾ ಭಯದಿಂದ ಬಸ್‌ಗಳಲ್ಲಿ ಓಡಾಟ ಕಡಿಮೆ ಮಾಡಿರುವುದರಿಂದ ಸಂಸ್ಥೆಗೆ ‘ಹೊರೆ’ ಏರುತ್ತಲೇ ಇದೆ. ಸಂಚಾರ ಆರಂಭವಾಗಿದ್ದರೂ ನಷ್ಟದ ಪ್ರಮಾಣ ಮಾತ್ರ ಗಣನೀಯವಾಗಿ ಏರುತ್ತಲೇ ಸಾಗಿದೆ.

ಈ ಮುಂಚೆ ಒಂದು ದಿನಕ್ಕೆ ಸರಾಸರಿ ₹60 ಲಕ್ಷದಿಂದ ₹65 ಲಕ್ಷ ಗಳಿಸುತ್ತಿತ್ತು. ಆದರೆ ಈಗ ನಿತ್ಯ ₹12 ಲಕ್ಷದಿಂದ ₹13 ಲಕ್ಷ ಗಳಿಕೆ ಆಗುತ್ತಿದೆ. ಇದು ಸದ್ಯಕ್ಕೆ ಹೆಚ್ಚುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುತ್ತಾರೆ ನಿಗಮದ ಅಧಿಕಾರಿಗಳು.

ಸಾಮಾನ್ಯ ದಿನಗಳಲ್ಲಿ ನಿತ್ಯ 620 ಬಸ್‌ಗಳು ವಿವಿಧ ಭಾಗಗಳಿಗೆ ಸಂಚರಿಸುತ್ತಿದ್ದವು. ಆದರೆ ಈಗ 185 ಬಸ್‌ಗಳು ಮಾತ್ರ ಆಪರೇಟ್ ಆಗುತ್ತಿವೆ. ಹೀಗೆ ಬಸ್ ಸಂಚಾರ ತಗ್ಗಿರುವುದರಿಂದ ಆದಾಯ ಇಳಿಕೆಯಾಗಿದೆ. ಈಗ ಸಂಚರಿಸುತ್ತಿರುವ ಬಸ್‌ಗಳಿಂದಲೂ ನಿರೀಕ್ಷಿತ ಆದಾಯ ನಿಗಮಕ್ಕೆ ದೊರೆಯುತ್ತಿಲ್ಲ. ಹೀಗೆ ಆದಾಯ ಕುಸಿಯುತ್ತಿರುವುದು ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ.

ಸಿಬ್ಬಂದಿಗೆ ರಜೆ: ಈ ಹಿಂದೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ರಜೆ ಪಡೆಯಲು ಪರದಾಡಬೇಕಾಗಿತ್ತು. ವಾರಕ್ಕೆ ಮುಂಚೆ ರಜೆಗೆ ಅರ್ಜಿ ಹಾಕಬೇಕಿತ್ತು. ರಜೆಗಾಗಿ ನಾನಾ ಕಸರತ್ತು ಮಾಡಬೇಕಿತ್ತು. ಆದರೆ ಕೋವಿಡ್ ಪರಿಣಾಮ ನೌಕರರು ಕೇಳಿದ ತಕ್ಷಣ ರಜೆ ದೊರೆಯುತ್ತಿದೆ.

ಚಾಲಕರು, ನಿರ್ವಾಹಕರು, ತಂತ್ರಜ್ಞರು ಸೇರಿದಂತೆ ಜಿಲ್ಲಾ ನಿಗಮದಲ್ಲಿ 2,650 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಬಸ್‌ಗಳ ಕಾರ್ಯಾಚರಣೆ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಇಷ್ಟೊಂದು ದೊಡ್ಡ ಪ್ರಮಾಣದ ನೌಕರರಿಗೆ ವೇತನ ನೀಡುವುದು ಸಂಸ್ಥೆಗೆ ಕಠಿಣವಾಗಿದೆ. ಸದ್ಯದ ಚಟುವಟಿಕೆಗಳನ್ನು ಆಧರಿಸಿದರೆ ನಿತ್ಯ 900ರಿಂದ 1 ಸಾವಿರ ಸಿಬ್ಬಂದಿ ಸಾಕಾಗುತ್ತಾರೆ. ಹಾಗಾಗಿ ನೌಕರರು ರಜೆ ಕೇಳಿದ ತಕ್ಷಣ ನೀಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.