ತುಮಕೂರು ತಾಲ್ಲೂಕಿನ 94 ಗ್ರಾಮಗಳಲ್ಲಿ ನೀರಿನ ಸಮಸ್ಯೆ, ಪರಿಹಾರಕ್ಕೆ ಶಾರದಾ ಸೂಚನೆ

7
ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ

ತುಮಕೂರು ತಾಲ್ಲೂಕಿನ 94 ಗ್ರಾಮಗಳಲ್ಲಿ ನೀರಿನ ಸಮಸ್ಯೆ, ಪರಿಹಾರಕ್ಕೆ ಶಾರದಾ ಸೂಚನೆ

Published:
Updated:
Deccan Herald

ತುಮಕೂರು: ತುಮಕೂರು ತಾಲ್ಲೂಕಿನ 94 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಶೀಘ್ರವೇ ಈ ಸಮಸ್ಯೆ ಪರಿಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಶನಿವಾರ ತುಮಕೂರು ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೇಮಾವತಿ ನೀರಾವರಿ ಯೋಜನೆ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ತಾಲ್ಲೂಕಿನ 9 ಕೆರೆಗಳಿಗೆ ಹೇಮಾವತಿ ನೀರು ತುಂಬಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ, ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿಗಳು ಕೇವಲ 2 ಕೆರೆಗಳು ಮಾತ್ರ ತುಂಬಿವೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ, ನೀರಿನ ವಿಚಾರದಲ್ಲಿ ಇಂತಹ ಗೊಂದಲ ಬೇಡ. ಕೂಡಲೇ ತಾಲ್ಲೂಕಿನ ಕುಡಿಯುವ ನೀರಿನ ಕೆರೆಗೆ ನೀರು ಹರಿಸಿ ಪೂರೈಸುವ ವ್ಯವಸ್ಥೆ ಮಾಡಿ ಎಂದು ಹೇಳಿದರು.

ಕುಡಿಯುವ ನೀರಿಗಾಗಿ ₹ 12 ಕೋಟಿ ಮಂಜೂರಾಗಿದೆ. ಇದರಲ್ಲಿ 43 ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. 17 ಮಾತ್ರ ಪೂರ್ಣಗೊಂಡಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳೂ ಸಹ ನೀರಿನ ಸಮಸ್ಯೆ ಎದುರಿಸುತ್ತಿವೆ. ಹೇಮಾವತಿ ನಾಲೆಯಿಂದ ನಿಗದಿಪಡಿಸಿರುವ ಕೆರೆಗಳಿಗೆ ನೀರು ತುಂಬಿಸಿದರೆ ಮಾತ್ರ ಜನರ ಹಾಹಾಕಾರವನ್ನು ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದರು.

ವಿಪತ್ತು ನಿಧಿ ಹಾಗೂ ಬರ ನಿರ್ವಹಣೆ ಕಾರ್ಯಪಡೆಯಿಂದ ಅಗತ್ಯವಾದ ಅನುದಾನ ಪಡೆದು ಕೊಳವೆ ಬಾವಿ ಕೊರೆದು ಮೋಟಾರ್ ಮತ್ತು ಪಂಪ್ ಅಳವಡಿಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಸೂಚಿಸಿದರು.

ತಾಲ್ಲೂಕಿನ 52,149 ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಮುಂದಿನ 105 ದಿನಗಳಿಗೆ ಈ ಮೇವು ಸಾಕಾಗಲಿದೆ. ಇದರ ಜೊತೆಗೆ ಮೇವಿನ ಕಿಟ್‌ಗಳನ್ನು ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ವಿತರಿಸಿ ಮೇವು ಬೆಳೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ಹೇಳಿದರು.

ಗೈರಾದವರಿಗೆ ನೋಟಿಸ್: ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ 29 ಇಲಾಖೆ ಬರುತ್ತವೆ. ಕೇವಲ 21 ಇಲಾಖೆ ಮಾತ್ರ ಬಂದಿವೆ. ಗೈರಾದ 8 ಇಲಾಖೆಗಳ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಸೂಚಿಸಿದರು. ಅನುಪಾಲನಾ ವರದಿ ನೀಡದ ಅಧಿಕಾರಿಗಳಿಗೆ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್. ಹುಚ್ಚಯ್ಯ, ಗೂಳೂರು ಶಿವಕುಮಾರ್, ನರಸಿಂಹಮೂರ್ತಿ, ಲಕ್ಷ್ಮೀನರಸಿಂಹಯ್ಯ, ಅನಿತಾ ಸಿದ್ಧೇಗೌಡ, ಶಿವಮ್ಮ ನಾಗರಾಜ್, ರಾಜೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !