ಶನಿವಾರ, ಮಾರ್ಚ್ 6, 2021
19 °C
ಹೇಮಾವತಿ ನಾಲಾ ಯೋಜನೆ ಕುರಿತು ಶಾಸಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

ಕಳೆದ ವರ್ಷದಂತೆ ಎಲ್ಲ ಕೆರೆಗಳಿಗೆ ನೀರು ಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ತುಮಕೂರು: ‘ಹೇಮಾವತಿ ನಾಲೆಯಿಂದ ಕಳೆದ ವರ್ಷದಂತೆ 28 ಕುಡಿಯುವ ನೀರು ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಬೇಕು. ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕು. ನೀರು ಹರಿಸುವ ಪ್ರಮಾಣ ಕುರಿತ ಕರಾರುವಕ್ಕಾದ ಮಾಹಿತಿಯನ್ನು ಗುರುವಾರ ಸಂಜೆ ವರದಿ ಕೊಡಿ’ ಎಂದು ಹೇಮಾವತಿ ನಾಲಾ ವಲಯದ ಎಂಜಿನಿಯರ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಹೇಮಾವತಿ ನಾಲಾ ಯೋಜನೆ ಕುರಿತು ಶಾಸಕರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ನೀರು ಹರಿಸಲು ರೂಪಿಸಿರುವ ಸರದಿ ಪಟ್ಟಿಯಲ್ಲಿ ಮೊದಲ ಸರದಿ ಸೆ.15ಕ್ಕೆ ಮುಕ್ತಾಯವಾಗಲಿದೆ. ಆದರೆ ಕೆಲ ಕೆರೆಗಳಿಗೆ ನೀರು ತಲುಪಿದೆ. ಕೆಲವುಗಳಿಗೆ ಇಲ್ಲ. ಎಲ್ಲ ಕಡೆಗೂ ನೀರಿನ ಸಮಸ್ಯೆ ಇದೆ. ಆದ್ಯತೆಯನುಸಾರ ಯಾವ ಕೆರೆಗಳಿಗೆ ನೀರು ಹರಿಸಬೇಕಿದೆ ಎಂಬುದನ್ನು ಮರು ನಿಗದಿಪಡಿಸಿ(ರಿ ಶೆಡ್ಯೂಲ್) ಆ ಪ್ರಕಾರ ನೀರು ಹರಿಸುವ ಕೆಲಸ ಮಾಡಿ’ ಎಂದು ಆದೇಶಿಸಿದರು.

ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ, ತಿಪಟೂರು ಶಾಸಕ ಬಿ.ಸಿ.ನಾಗೇಶ್, ಸಚಿವ ಎಸ್.ಆರ್.ಶ್ರೀನಿವಾಸ್, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಕುಣಿಗಲ್ ಶಾಸಕ ಡಾ.ರಂಗನಾಥ್,ತುರುವೇಕೆರೆ ಶಾಸಕ ಮಸಾಲ ಜಯರಾಮ ತಮ್ಮ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ಕಳೆದ ಬಾರಿ ಹರಿಸಿದಷ್ಟೂ ನೀರು ಹರಿದಿಲ್ಲ ಎಂದು ಸಮಸ್ಯೆ ವಿವರಿಸಿದರು.

ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ‘ಜಲಸಂಪನ್ಮೂಲ ಸಚಿವರು, ಉಪಮುಖ್ಯಮಂತ್ರಿ ನಿಮ್ಮವರೇ ಇದ್ದರೂ ನೀರು ತರುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಆದ್ಯತೆಯನುಸಾರ ನೀರು ಹರಿಸಿ’ ಎಂದು ಮನವಿ ಮಾಡಿದರು.

ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ,‘ಕುಣಿಗಲ್ ತಾಲ್ಲೂಕಿಗೆ ನೀರು ಹರಿಸಿ ನಂತರ ಬೇರೆ ಕಡೆ ನೀರಿ ಹರಿಸಬೇಕು ಎಂದರೆ ಯಾವ ತಾಲ್ಲೂಕಿನ ಕೆರೆಗಳಿಗೂ ನೀರು ಸಿಗುವುದಿಲ್ಲ. ಹಂತ ಹಂತವಾಗಿ ನೀರು ಹರಿಸಿಕೊಂಡು ಬರಲಿ’ಎಂದು ಸಮಸ್ಯೆ ಹೇಳಿದರು.

ತುಮಕೂರು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ‘ವರ್ಷದಿಂದ ವರ್ಷಕ್ಕೆ ತುಮಕೂರು ನಗರಕ್ಕೆ ನೀರಿನ ಸಮಸ್ಯೆ ಆಗುತ್ತಿದೆ. ನಿರ್ದಿಷ್ಟ ಪಡಿಸಿದಷ್ಟು ನೀರನ್ನು ಒಮ್ಮೆಯೂ ಹರಿಸಿಲ್ಲ. ಕೊಳವೆ ಬಾವಿ ಕೊರೆಸಲು, ಟ್ಯಾಂಕರ್ ನೀರು ಪೂರೈಕೆಗೆ ಕೋಟ್ಯಾಂತರ ಹಣ ಕರ್ಚು ಮಾಡಲಾಗಿದೆ’ ಎಂದು ವಿವರಿಸಿದರು.

ಶಿರಾ ಶಾಸಕ ಸತ್ಯನಾರಾಯಣ ಮಾತನಾಡಿ,‘ ನಾನು ಪಂಪ್‌ ಹೌಸ್‌ನಲ್ಲಿ ಮಲಗಿದ ಮೇಲೆ ಕಳ್ಳಂಬೆಳ್ಳ ಕೆರೆಗೆ ಸ್ವಲ್ಪ ನೀರು ಹರಿಸಲಾಗಿದೆ. ₹ 60 ಕೋಟಿಯಲ್ಲಿ ಮದಲೂರು ಕೆರೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಕಾಮಗಾರಿಯಲ್ಲಿ ಸಾಕಷ್ಟು ಅಕ್ರಮ ಆಗಿದೆ. ಈ ಕೆರೆಗೂ ನೀರು ಹರಿಸಿಲ್ಲ ಎಂದು ಹೇಳಿದರು.

ತಿಪಟೂರು ಶಾಸಕ ಬಿ.ಸಿ.ನಾಗೇಶ್ ಮಾತನಾಡಿ,‘ ತಿಪಟೂರು ನಗರಕ್ಕೆ ಟ್ಯಾಂಕರ್‌ನಿಂದಲೇ ನೀರು ಹರಿಸಬೇಕಾದ ಸ್ಥಿತಿ ಇದೆ. ಇದಕ್ಕೂ ಹಣ ಮಂಜೂರಾಗುತ್ತಿಲ್ಲ. ಕೆರೆಗೆ ನೀರಿ ಹರಿಸಿದರೆ ಇದೆಲ್ಲ ಸಮಸ್ಯೆ ಪರಿಹಾರ ಆಗುತ್ತದೆ. ಇಲ್ಲದೇ ಇದ್ದರೆ ದೇವರೇ ನಮ್ಮನ್ನು ಕಾಪಾಡಬೇಕು’ ಎಂದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,‘ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು’ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಹೇಮಾವತಿ ನಾಲಾ ವಲಯ ಮುಖ್ಯ ಎಂಜಿನಿಯರ್ ರಾಮಕೃಷ್ಣ, ಎಸ್ಪಿ ಡಾ.ದಿವ್ಯಾ ಗೋಪಿನಾಥ್ ಸಚಿವರಿಗೆ ವಿವರ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು