ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ಗರಂ

ನಿವೇಶನ ಹಂಚಿಕೆಗೆ ಸೂಚನೆ
Published 30 ಜೂನ್ 2024, 6:04 IST
Last Updated 30 ಜೂನ್ 2024, 6:04 IST
ಅಕ್ಷರ ಗಾತ್ರ

ತುಮಕೂರು: ‘ಗ್ರಾಮಾಂತರ ಭಾಗದಲ್ಲಿ ಈವರೆಗೆ ಒಂದೇ ಒಂದು ನಿವೇಶನ ಹಂಚಿಕೆಯಾಗಿಲ್ಲ. ಅಧಿಕಾರಿಗಳು ಕಚೇರಿಗೆ ಸೀಮಿತವಾಗಿ ಕಾಲ ಹರಣ ಮಾಡಬೇಡಿ’ ಎಂದು ಶಾಸಕ ಬಿ.ಸುರೇಶ್‌ಗೌಡ ತಾ.ಪಂ ಇಒ ಹರ್ಷಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮಾಂತರ ಕ್ಷೇತ್ರದ ಸುತ್ತಲೂ ಅರಣ್ಯ ಪ್ರದೇಶವಿದೆ. ಕಾಡು ಪ್ರಾಣಿಗಳು ಆಹಾರ ಅರಸಿ ಜನ ವಸತಿ ಪ್ರದೇಶಕ್ಕೆ ಬರುತ್ತಿವೆ. ಪ್ರಾಣಿ-ಪಕ್ಷಿಗಳು, ವಿಶೇಷವಾಗಿ ಕರಡಿಗಳಿಗೆ ಆಹಾರ ಸಿಗುವಂತಹ ಹಣ್ಣಿನ ಗಿಡ ನೆಡಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ನಿರ್ದೇಶಿಸಿದರು.

ವಿವಿಧೆಡೆ ಸಮುದಾಯ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕೂಡಲೇ ಉದ್ಘಾಟಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು. ಸರ್ಕಾರದಿಂದ ಬರುವ ಅನುದಾನ ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದರು. ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹೆಬ್ಬೂರು, ಸಿರಿವರ, ಹೆಗ್ಗೆರೆ ಭಾಗದಲ್ಲಿ ನಿವೇಶನ ಗುರುತಿಸಿ ಹಕ್ಕಿ–ಪಿಕ್ಕಿ ಜನಾಂಗದವರಿಗೆ ಹಂಚಿಕೆ ಮಾಡಬೇಕು. ಜಲ ಜೀವನ್ ಮಿಷನ್‌ ಯೋಜನೆಯಡಿ ಗುತ್ತಿಗೆ ಪಡೆದು ಕೆಲಸ ನಿರ್ವಹಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ ಅಶೋಕ್ ಅವರಿಗೆ ತಿಳಿಸಿದರು.

ಪದೇ ಪದೇ ಸಭೆಗೆ ಗೈರಾಗುತ್ತಿರುವ ತಹಶೀಲ್ದಾರ್‌ ಸಿದ್ದೇಶ್‌, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಾಗರಾಜ್, ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಯರಾಂ ಸೇರಿ ಇತರೆ ಅಧಿಕಾರಿಗಳಿಗೆ ನೋಟಿಸ್ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆಡಳಿತಾಧಿಕಾರಿ ಬಿ.ಸಿ.ಶಾರದಮ್ಮ ಅವರಿಗೆ ನಿರ್ದೇಶಿಸಿದರು.

ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ರುದ್ರೇಶ್, ಜಯಕೃಷ್ಣ, ರುದ್ರಪ್ಪ, ಪ್ರಶಾಂತ್‌ ಕುಮಾರ್, ತನ್ವೀರ್‌ಖಾನ್‌, ಕಲ್ಪನಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT