ಭಾನುವಾರ, ಆಗಸ್ಟ್ 25, 2019
28 °C

ಬಾಲಕನಿಂದ 11 ವರ್ಷದ ತಮ್ಮನ ಕೊಲೆ

Published:
Updated:

ತುಮಕೂರು: ಕ್ಷುಲ್ಲಕ ವಿಷಯಕ್ಕೆ ಜಗಳ ಮಾಡಿಕೊಂಡು ಹದಿನೇಳು ವರ್ಷದ ಬಾಲಕ ತನ್ನ 11 ವರ್ಷದ ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಪ್ರಕರಣ ಮಂಗಳವಾರ ರಾತ್ರಿ ನಗರದ ಸರಸ್ವತಿಪುರಂ ಬಡಾವಣೆಯಲ್ಲಿ ನಡೆದಿದೆ.

ಕೊಲೆ ಮಾಡಿದ ಬಾಲಕ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಕೊಲೆಯಾದ ಬಾಲಕ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಹಿರಿಯ ಮಗನನ್ನು ರಾತ್ರಿ ಅವರ ತಾಯಿ ಊಟಕ್ಕೆ ಕರೆದಿದ್ದಾರೆ. ಇನ್ನೂ ಓದುವುದು ಇದೆ. ಆ ಮೇಲೆ ಊಟ ಮಾಡುತ್ತೇನೆ ಎಂದು ಆತ ಹೇಳಿದ್ದಾನೆ. ಕಿರಿಯ ಮಗನಿಗೆ ಊಟ ಬಡಿಸಿದ ನಂತರ ತಾಯಿ ಮನೆ ಮುಂಭಾಗದ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದರು.

ಸ್ವಲ್ಪ ಹೊತ್ತಿನ ಬಳಿಕ ಹಿರಿಯ ಮಗ ಮನೆಯ ಮುಂಬಾಗಿಲು ಹಾಕಿದ್ದಾನೆ. ಆಗ ತಾಯಿ ಏಕೆ ಬಾಗಿಲು ಹಾಕುತ್ತಿದ್ದೀಯಾ ಎಂದು ರಸ್ತೆಯಲ್ಲೇ ನಿಂತು ಪ್ರಶ್ನಿಸಿದ್ದಾರೆ. ಅದಕ್ಕೆ ಹಿರಿಯ ಮಗ ಪ್ರತಿಕ್ರಿಯಿಸಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಇವರ ಮನೆ ಮೇಲೆ ಬಾಡಿಗೆ ಇರುವವರು ಮಕ್ಕಳಿಬ್ಬರೂ ಜಗಳ ಮಾಡಿಕೊಂಡು ಕೂಗಾಡುತ್ತಿದ್ದಾರೆ ಎಂದು ಕರೆದಿದ್ದಾರೆ. ತಾಯಿ ಬಂದು ನೋಡಿದಾಗ  ತಮ್ಮನನ್ನು ಕೊಲೆ ಮಾಡಿರುವುದಾಗಿ ಹಿರಿಯ ಮಗ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಮಗನಿಗೆ ಸಿಟ್ಟು ಬಂದಾಗ ಏನು ಮಾಡುತ್ತೇನೆ ಎಂಬುದು ಆತನಿಗೆ ಗೊತ್ತಾಗುವುದಿಲ್ಲ. ಈ ಹಿಂದೆಯೂ ಕಿರಿಯ ಮಗನನ್ನು ಹೊಡೆಯುವುದು, ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಸುವುದನ್ನು ಮಾಡುತ್ತಿದ್ದ ಎಂದು ಅವರ ತಾಯಿ ತಿಳಿಸಿದ್ದಾರೆ ಎಂದು ಜಯನಗರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

Post Comments (+)