ದೇವರಾಯನದುರ್ಗ ಅರಣ್ಯ ಪ್ರದೇಶದ ನಾಮದ ಚಿಲುಮೆ ಔಷಧಿ ಸಸ್ಯವನ ರಕ್ಷಣೆಗೆ ಆಗ್ರಹ

ಬುಧವಾರ, ಜೂನ್ 26, 2019
28 °C
ಸುಂದರ ತಾಣ

ದೇವರಾಯನದುರ್ಗ ಅರಣ್ಯ ಪ್ರದೇಶದ ನಾಮದ ಚಿಲುಮೆ ಔಷಧಿ ಸಸ್ಯವನ ರಕ್ಷಣೆಗೆ ಆಗ್ರಹ

Published:
Updated:
Prajavani

ತುಮಕೂರು: ತುಮಕೂರು ತಾಲ್ಲೂಕು ನಾಮದಚಿಲುಮೆಯಲ್ಲಿರುವ ಅರಣ್ಯ ಇಲಾಖೆಯ "ಸಿದ್ಧಸಂಜೀವಿನಿ ಔಷಧಿ ಸಸ್ಯ ವನ" ಸಂಪೂರ್ಣವಾಗಿ ಪಾಳು ಬಿದ್ದಿದ್ದು, ಅದನ್ನು ಪುನರುಜ್ಜೀವನಗೊಳಿಸಿ ಮೊದಲಿನಂತೆ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕ ಹೋರಾಟಗಾರ ಆರ್.ವಿಶ್ವನಾಥನ್ ಅವರು ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ತುಮಕೂರು ತಾಲ್ಲೂಕು ಅರೆಗುಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಾಮದ ಚಿಲುಮೆಯು ’ ದೇವರಾಯನದುರ್ಗ ಅರಣ್ಯ ಪ್ರದೇಶದ ನಡುವೆ ಇರುವ ಸುಂದರ ತಾಣವಾಗಿದೆಎಂದು ಹೇಳಿದ್ದಾರೆ.

‘ನಿಸರ್ಗಧಾಮವಷ್ಟೇ ಅಲ್ಲದೇ, ಪೌರಾಣಿಕವಾಗಿಯೂ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಅರಣ್ಯ ಇಲಾಖೆಗೆ ಸೇರಿದ "ಸಿದ್ಧ ಸಂಜೀವಿನಿ ಔಷಧಿಸಸ್ಯ ವನ" ಸೂಕ್ತ ನಿರ್ವಹಣೆ, ಮೇಲ್ವಿಚಾರಣೆ ಇಲ್ಲದೇ ಪಾಳುಬಿದ್ದಿರುವುದು ಶೋಚನೀಯ ಸಂಗತಿ’ ಎಂದು ವಿಷಾದಿಸಿದ್ದಾರೆ.

ಸುಮಾರು 15 ವರ್ಷಗಳಿಗೂ ಹಿಂದೆ ಆಗಿನ ಉಪಅರಣ್ಯ ಸಂರಕ್ಷಣಾಧಿಕಾರಿ ತೋರಿದ ಆಸಕ್ತಿ ಹಾಗೂ ಅಪಾರ ಪರಿಶ್ರಮದಿಂದ ನಾಮದಚಿಲುಮೆಯಲ್ಲಿ "ಸಿದ್ಧಸಂಜೀವಿನಿ ಔಷಧಿ ಸಸ್ಯ ವನ" ಹೊಸದಾಗಿ ಸೃಷ್ಟಿಯಾಯಿತು ಎಂದು ಹೇಳಿದ್ದಾರೆ.

ತುಮಕೂರು ಭಾಗದಲ್ಲಿ ಪ್ರಪ್ರಥಮ ಬಾರಿಗೆ ಇಂತಹ ದೊಂದು ವನ ರೂಪುಗೊಂಡು ನಾಮದಚಿಲುಮೆಯ ಆಕರ್ಷಣೆಯನ್ನು ದ್ವಿಗುಣಗೊಳಿಸಿತು. ಅಪರೂಪದ ಹಾಗೂ ವೈವಿಧ್ಯಮಯವಾದ ಅಸಂಖ್ಯಾತ ಔಷಧಿ ಸಸ್ಯಗಳಿಂದ ಕೂಡಿದ್ದ ಈ ವನವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸತೊಡಗಿತು ಎಂದು ಮನವಿಯಲ್ಲಿ ವಿವರಿಸಿದ್ದಾರೆ. 

ಸುವ್ಯವಸ್ಥಿತವಾಗಿ ವಿನ್ಯಾಸಗೊಳಿಸಿದ ಈ "ಸಿದ್ಧಸಂಜೀವಿನಿ ಔಷಧಿಸಸ್ಯ ವನ"ವನ್ನು ರೂಪಿಸಲಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಔಷಧಿ ಸಸ್ಯಗಳ ಬಗ್ಗೆ ವಿವಿಧೆಡೆ ಸೂಕ್ತ ತರಬೇತಿಯನ್ನು ನೀಡಿ, ಇಲ್ಲಿಗೆ ನಿಯೋಜಿಸಲಾಗಿತ್ತು. ನಾಡಿನ ವಿವಿಧೆಡೆಗಳಿಂದ ಅಪರೂಪದ ಔಷಧಿ ಸಸ್ಯಗಳನ್ನು ತರಿಸಿ ಇಲ್ಲಿ ಬೆಳೆಸಲಾಯಿಗಿತ್ತು ಎಂದು ಹೇಳಿದ್ದಾರೆ.

ಕೊಳವೆ ಬಾವಿ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿತ್ತಲ್ಲದೇ, ಕಳೆ ಕೀಳಲು ಹಾಗೂ ಗಿಡಗಳ ವಿನ್ಯಾಸಕ್ಕೆ ಯಂತ್ರೋಪಕರಣಗಳ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಇಲ್ಲೊಂದು ಪಿರಮಿಡ್ ಧ್ಯಾನ ಮಂದಿರವನ್ನೂ ನಿರ್ಮಿಸಿ ಈ ವನದ ಆಕರ್ಷಣೆಯನ್ನು ಹೆಚ್ಚಿಸಲಾಗಿತ್ತು. ಆರಂಭದ ದಿನಗಳಲ್ಲಿ ಈ ಔಷಧಿ ಸಸ್ಯವನ ಆಸಕ್ತರಿಗೆ ಹಾಗೂ ವಿಶೇಷವಾಗಿ ಸಸ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಕೇಂದ್ರವೇ ಆಗಿಹೋಗಿತ್ತು. ಆದರೆ, ಇಂದು ಇಡೀ ವನವು ಸಂಪೂರ್ಣ ಅವನತಿ ಹೊಂದಿದೆ ಎಂದು ವಿಶ್ವನಾಥನ್ ವಿವರಿಸಿದ್ದಾರೆ.

ಈ ವನವು ನಿರ್ಲಕ್ಷ್ಯಕ್ಕೊಳಗಾಗಿ ಇಂದು ಕೇವಲ ನಾಮಫಲಕದಲ್ಲಷ್ಟೇ ಔಷಧಿ ಸಸ್ಯವನ ಎಂದು ಉಳಿದುಕೊಳ್ಳುವಂತಹ ಹೀನಾಯ ಸ್ಥಿತಿಯನ್ನು ತಲುಪಿಬಿಟ್ಟಿದೆ.

ತುಮಕೂರಿನ ಹೆಮ್ಮೆಯ ಆಸ್ತಿಯಾಗಬಹುದಾಗಿದ್ದ ಈ ಸ್ಥಳ ಇಂದು ಅವನತಿ ಹೊಂದಿದೆ. ಆದ್ದರಿಂದ ಈ ಔಷಧಿ ಸಸ್ಯವನವನ್ನು ಪುನರುಜ್ಜೀವನಗೊಳಿಸಿ ಮೊದಲಿನಂತೆ ಆಕರ್ಷಣೀಯ ಕೇಂದ್ರವಾಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಪುನರುಜ್ಜೀವನಕ್ಕೆ ಏನೇನು ಮಾಡಬೇಕು

‘ನಾಶವಾಗಿರುವ ಔಷಧಿ ಸಸ್ಯಗಳ ಸ್ಥಳದಲ್ಲಿ ಮತ್ತೊಮ್ಮೆ ಹೊಸದಾಗಿ ಔಷಧಿ ಸಸ್ಯಗಳನ್ನು ಬೆಳೆಸಬೇಕು, ಔಷಧಿ ಸಸ್ಯಗಳ ಬಗ್ಗೆ ಅರಿವುಳ್ಳ ಸಿಬ್ಬಂದಿಯನ್ನು ಇಲ್ಲಿ ನೇಮಿಸಬೇಕು,  ಇಲ್ಲಿರುವ ಸಿಬ್ಬಂದಿಗೆ ಆ ಬಗ್ಗೆ ತರಬೇತಿ ಕೊಡಿಸಬೇಕು, ಔಷಧಿ ಸಸ್ಯವನ ಸಿದ್ಧಗೊಳ್ಳುವಾಗ ಇಲ್ಲಿದ್ದ ಸಿಬ್ಬಂದಿಯನ್ನು ಕರೆಸಿ ಅವರ ಸಲಹೆ-ಸಹಕಾರ ಅನುಭವದ ಜ್ಞಾನ ಪಡೆದುಕೊಳ್ಳಬೇಕು, ಔಷಧಿ ಸಸ್ಯವನದ ನಿರ್ವಹಣೆಗಾಗಿ ಅಗತ್ಯವಿರುವಷ್ಟು ನುರಿತ ಸಿಬ್ಬಂದಿಯನ್ನು ನಿಯೋಜಿಸಬೇಕು,ಇಲ್ಲಿರುವ ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಅಗತ್ಯವಿದ್ದರೆ ಹೆಚ್ಚುವರಿಯಾಗಿ ಕೊಳವೆ ಬಾವಿ ಕೊರೆಸಿ, ಆ ಮೂಲಕ ಇಡೀ ಔಷಧಿವನಕ್ಕೆ ನೀರು ಪೂರೈಸುವ ವ್ಯವಸ್ಥೆ ವೈಜ್ಞಾನಿಕವಾಗಿ ಆಗಬೇಕು,ಮಳೆ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು, ಕಳೆ ಕೀಳುವ ಹಾಗೂ ಗಿಡಗಳ ವಿನ್ಯಾಸ ನಿರ್ವಹಣೆಯ ಯಂತ್ರೋಪಕರಣಗಳನ್ನು ಒದಗಿಸಬೇಕು, ಅದರ ಬಳಕೆಗೆ ಅಗತ್ಯವಿರುವ ಸೌಲಭ್ಯ ಒದಗಿಸಬೇಕು, ಔಷಧಿ ಸಸ್ಯಗಳ ತಜ್ಞರ ಮತ್ತು ಜಿಲ್ಲೆಯ ಪಾರಂಪರಿಕ ವೈದ್ಯರ ಜ್ಞಾನವನ್ನು ಈ ವನದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !