ಪೊಲೀಸ್‌ ಮೈದಾನದಲ್ಲಿ ಗುಂಡಿನ ದಾಳಿ, ಬೆಚ್ಚಿ ಬಿದ್ದ ಜನ

7
ತುಮಕೂರಿನ ಕರ್ನಾಟಕ 4ನೇ ಬೆಟಾಲಿಯನ್ ಆಯೋಜಿಸಿದ್ಧ ಎನ್‌ಸಿಸಿ ಕೆಡೆಟ್‌ಗಳ ತಂಡಗಳಿಂದ ಅಣಕು ಯುದ್ಧ ಪ್ರದರ್ಶನ

ಪೊಲೀಸ್‌ ಮೈದಾನದಲ್ಲಿ ಗುಂಡಿನ ದಾಳಿ, ಬೆಚ್ಚಿ ಬಿದ್ದ ಜನ

Published:
Updated:
Deccan Herald

ತುಮಕೂರು: ಮಟ ಮಟ ಮಧ್ಯಾಹ್ನ ನಗರ ಜನರ ರಜೆಯ ಮೂಡ್‌ನಲ್ಲಿದ್ದರೆ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಮದ್ದು, ಗುಂಡುಗಳು ಸದ್ದು ಮಾಡಿದವು.

ರಸ್ತೆಯಲ್ಲಿ ಹೊರಟಿದ್ದ ಜನರು, ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಬೆಚ್ಚಿ ಬಿದ್ದರು. ಇದೇನು ಮಿಲಿಟರಿ ಹೆಲಿಕಾಪ್ಟರ್ ಸದ್ದಾಗುತ್ತಿದೆಯಲ್ಲ, ಗುಂಡಿನ ಸಪ್ಪಳ ಕೇಳುತ್ತಿದೆಯಲ್ಲ ಎಂದು ಮನೆಯಿಂದ ಆಚೆ ಬಂದವರು ಬೆಚ್ಚಿ ಬಿದ್ದರು.

ಎದುರಾಳಿ ಪಡೆಯ ದಾಳಿಗೆ ಪ್ರತಿರೋಧ ಒಡ್ಡಲು ಸೈನಿಕರು ಟೈಮ್‌ ಮಷಿನ್ ಗನ್, ರಾಕೆಟ್‌ ಲಾಂಚರ್, ಬಾಂಬರ್, ಎಸ್‌.ಎಲ್‌.ಆರ್. ಗನ್‌ ಹಿಡಿದು ಅಬ್ಬರಿಸಿದರು. ಶತ್ರುಗಳ ನೆಲೆಗಳನ್ನು ಸೆದೆಬಡಿದರು.

ನೋಡು ನೋಡುತ್ತಿದ್ದಂತೆಯೇ ಪೊಲೀಸ್ ಮೈದಾನ ಯುದ್ಧ ಭೂಮಿಯಾಯಿತು.ಸತತ ಒಂದು ತಾಸು ನಡೆದ ಯುದ್ಧದಲ್ಲಿ ಕೊನೆಗೂ ಸೈನಿಕರು ವಿಜಯ ಸಾದಿಸಿದರು.

ಅನಿರೀಕ್ಷಿತ ಈ ಯುದ್ಧ ಸನ್ನಿವೇಶ ಕಂಡ ಸಾರ್ವಜನಿಕರು ಭಯಭೀತರಾದರೆ ಮತ್ತೊಂದಿಷ್ಟು ಜನರು ಸೈನಿಕರ ದಾಳಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾನುವಾರ ಮಧ್ಯಾಹ್ನ ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ತುಮಕೂರಿನ 4ನೇ ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ಕೆಡೆಟ್‌ಗಳ ಎರಡು ತಂಡಗಳು ‘ಅಣಕು ಯುದ್ಧ’ ಪ್ರದರ್ಶನ ನಡೆಸಿದರು. ಎರಡೂ ಕಡೆಯ ಪಡೆಗಳಲ್ಲಿ ತಲಾ 10 ಜನರು ಯುದ್ಧ ಸನ್ನಿವೇಶವನ್ನು ಕಣ್ಮುಂದೆ ತಂದಿಟ್ಟರು.

ಈ ಯುದ್ಧಕ್ಕೆ ಗೋವಾ ಹಾಗೂ ಕರ್ನಾಟಕ ರಾಜ್ಯದ ಎನ್‌ಸಿಸಿ ನಿರ್ದೇಶನಾಲಯದಿಂದ ಬಂದಿದ್ದ 454 ಕೆಡೆಟ್‌ಗಳು ಸಾಕ್ಷಿಯಾದರು.

ಕಮಾಂಡಿಂಗ್ ಅಧಿಕಾರಿ ಕರ್ನಲ್ ಯೋಗಿಂದರ್ ಸಿಂಗ್ ಪರಮಾರ್, ಡೆಪ್ಯೂಟಿ ಕ್ಯಾಂಪ್ ಕಮಾಂಡೆಂಟ್ ಮೇಜರ್ ರಾಘವೇಂದ್ರ, ಪಿ.ಆರೋಕ್ಯಸ್ವಾಮಿ, ಲೆಫ್ಟಿನೆಂಟ್ ಗಳಾದ ಬಿ.ಎಂ.ಹರಿಪ್ರಸಾದ್, ಪ್ರದೀಪ್ ಮಂಜೀತ್ ಸಿಂಗ್, ಸತೀಶ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !