ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆಮಹದೇಶ್ವರ ಬೆಟ್ಟದಲ್ಲಿ ಹನಿಬ್ಯಾಡ್ಜರ್ ಪತ್ತೆ

ನಿಶಾಚರಿಗಳಂತೆ ತಿರುಗಾಡಿದ ಮರದಬೆಕ್ಕು, ಚಿರತೆಗಳೂ ಟ್ರ್ಯಾಪಿಂಗ್‌ ಕ್ಯಾಮೆರಾದಲ್ಲಿ ಸೆರೆ
Last Updated 5 ಏಪ್ರಿಲ್ 2018, 6:57 IST
ಅಕ್ಷರ ಗಾತ್ರ

ಹನೂರು/ಚಾಮರಾಜನಗರ: ವಿಭಿನ್ನ ಸಸ್ಯವರ್ಗವನ್ನು ತನ್ನೊಡಲೊಳಗೆ ಇರಿಸಿಕೊಂಡಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಈಚೆಗೆ ಹನಿಬ್ಯಾಡ್ಜರ್ ಅಥವಾ ಜೇನುಹಿರ್ಕ ಪತ್ತೆಯಾಗಿದೆ.ರಾಮಾಪುರ ವನ್ಯಜೀವಿ ವಲಯದಲ್ಲಿ ಈಚೆಗೆ ಕ್ಯಾಮೆರಾ ಟ್ರ್ಯಾಪಿಂಗ್ ವೇಳೆ ಇದು ಸೆರೆಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಈ ಹಿಂದೆ ಇದು ಕಾವೇರಿ ವನ್ಯಧಾಮದಲ್ಲಿ ಪತ್ತೆಯಾಗಿತ್ತು.

ಏನಿದು ಹನಿಬ್ಯಾಡ್ಜರ್?

ಕರಡಿ ಜಾತಿಗೆ ಸೇರಿದ ಅತ್ಯಂತ ವಿರಳವಾದ ನಿಶಾಚರಿ ಮಾಂಸಾಹಾರಿ ಪ್ರಾಣಿ­ ಹನಿಬ್ಯಾಡ್ಜರ್. 2014ರಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಕಾವೇರಿ ಅಭಯಾರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಭಾರತದ ಕಾಡುಗಳಲ್ಲಿ ಇದು ಕಂಡುಬಂದಿರುವ ಉದಾಹರಣೆಗಳು ಅಪರೂಪ. ಹೀಗಾಗಿ, 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಇದು ‘ಅತ್ಯಂತ ಸಂರಕ್ಷಿತ ಪ್ರಾಣಿ ಸಂಕುಲ’ಕ್ಕೆ ಸೇರುತ್ತದೆ. ಮೊದಲಿಗೆ ಇದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪ್ರದೇಶದಲ್ಲಿ ಕಂಡು ಬಂದಿತ್ತು. ನಂತರ, ಇದನ್ನು ಹಿಡಿದು 1970ರ ದಶಕದಲ್ಲಿ ಮೈಸೂರು ಮೃಗಾಲ­ಯದಲ್ಲಿ ಇರಿಸಲಾಗಿತ್ತು. 2003ರಲ್ಲಿ ಬೆಂಗ­ಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿ­ಯಲ್ಲಿ ಬಾವಿ­ಯೊಂದರಲ್ಲಿ ಇದು ಪತ್ತೆಯಾಗಿತ್ತು ಎಂದು ಅವರು ಹೇಳುತ್ತಾರೆ. ಹಲಗೂರು, ಹನೂರು, ಕೂಡಳ್ಳಿ, ಬಿಳಿಗಿರಿರಂಗನ ಬೆಟ್ಟದ ಪ್ರದೇಶಗಳಲ್ಲೂ ಇವು ಸಾಕಷ್ಟು ಸಂಖ್ಯೆಯಲ್ಲಿ ಇವೆ ಎಂದು ಅರಣ್ಯ ರಕ್ಷಕರು ಹೇಳುತ್ತಾರೆ. ತರಕರಡಿ ಎಂಬ ಮತ್ತೊಂದು ಹೆಸರೂ ಇದಕ್ಕಿದೆ. ಕರಡಿ ಜಾತಿಗೆ ಸೇರಿದ್ದರೂ ಆಕಾರದಲ್ಲಿ ಇದು ಮುಂಗುಸಿಯನ್ನು ಹೋಲುತ್ತದೆ. ಬೂದಿ ಬಣ್ಣದ ಮೇಲ್ಮೈ ಹೊಂದಿರುವ ಈ ಸಸ್ತನಿಯ ಉಳಿದ ಅರ್ಧ ಭಾಗ ಕಪ್ಪು. ರಾಜಸ್ತಾನ ಮತ್ತು ಆಂಧ್ರದ ಅರಣ್ಯಗಳಲ್ಲೂ ತರಕರಡಿ ಬೆರಳೆಣಿಕೆಯ ಸಂಖ್ಯೆಯಲ್ಲಿವೆ. ವಿಷಪೂರಿತ ಹಾವುಗಳನ್ನು ತಿನ್ನುವ ಇದು, ಜೇನುಗೂಡಿನಿಂದ ಸರಾಗವಾಗಿ ಜೇನನ್ನು ಹೀರಬಲ್ಲವು. ಇದರ ಜತೆಗೆ ಮರದಬೆಕ್ಕು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಚಿರತೆಗಳೂ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಬಿ.ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT