ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಇಳಿಕೆಯತ್ತ ಸಾಗಿದ ಈರುಳ್ಳಿ ಬೆಲೆ: ಮಾರುಕಟ್ಟೆ ವಿಶ್ಲೇಷಣೆ

ಜೀರಿಗೆ ಒಮ್ಮೆಲೆ ಕೆ.ಜಿಗೆ ₹70 ಇಳಿಕೆ; ಎಣ್ಣೆ ಅಲ್ಪ ಏರಿಕೆ
Published 12 ನವೆಂಬರ್ 2023, 5:22 IST
Last Updated 12 ನವೆಂಬರ್ 2023, 5:22 IST
ಅಕ್ಷರ ಗಾತ್ರ

ತುಮಕೂರು: ಗಗನಮುಖಿಯಾಗಿದ್ದ ಈರುಳ್ಳಿ ಬೆಲೆ ಇಳಿಕೆಯತ್ತ ಮುಖ ಮಾಡಿದ್ದರೆ, ಕೆಲವು ತರಕಾರಿಗಳ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಟೊಮೆಟೊ ದರ ಚೇತರಿಸಿದ್ದರೆ, ಸೊಪ್ಪು, ಹಣ್ಣು, ಧಾನ್ಯಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಈರುಳ್ಳಿ ಬೆಲೆ ಇಳಿಕೆ:

ನೂರರ ಗಡಿಗೆ ತಲುಪಿದ್ದ ಈರುಳ್ಳಿ ಬೆಲೆ ನಿಧಾನವಾಗಿ ಕಡಿಮೆಯಾಗಿದ್ದು, ಈ ವಾರ ಕೆ.ಜಿ ₹50–60ಕ್ಕೆ ಇಳಿಕೆಯಾಗಿದೆ. ಮುಂದಿನ ಕೆಲ ವಾರಗಳ ಕಾಲ ಇದೇ ದರ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಪಾತಾಳ ಮುಟ್ಟಿದ್ದ ಟೊಮೆಟೊ ಧಾರಣೆ ಕಳೆದ ಕೆಲವು ದಿನಗಳಿಂದ ಹೆಚ್ಚಳವಾಗುತ್ತಿದ್ದು, ಈ ವಾರವೂ ಏರಿಕೆ ದಾಖಲಿಸಿದೆ. ಕೆ.ಜಿ ₹20–25ಕ್ಕೆ ಜಿಗಿದಿದ್ದು, ಕೆಲ ದಿನಗಳ ಕಾಲ ಇದೇ ಧಾರಣೆ ಇರಲಿದೆ ಎಂದು ಹೇಳಲಾಗುತ್ತಿದೆ. ಇಳಿಕೆಯಾಗಿದ್ದ ಬೀನ್ಸ್ ದರ ಈ ವಾರ ಕೆ.ಜಿಗೆ ₹10 ದುಬಾರಿಯಾಗಿದ್ದು, ಕೆ.ಜಿ ₹40–50ಕ್ಕೆ ತಲುಪಿದೆ. ಚಿಲ್ಲರೆಯಾಗಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕ್ಯಾರೇಟ್ ಬೆಲೆ ಕೊಂಚ ಹೆಚ್ಚಳವಾಗಿದ್ದು, ನುಗ್ಗೆಕಾಯಿ ದರ ಒಮ್ಮೆಲೆ ಕೆ.ಜಿಗೆ ₹30–40 ಕಡಿಮೆಯಾಗಿದೆ. ತೊಂಡೆಕಾಯಿ, ಹಾಗಲಕಾಯಿ, ಹಸಿರು ಮೆಣಸಿನಕಾಯಿ ಬೆಲೆ ಇಳಿದಿದೆ.

ಚೇತರಿಸದ ಸೊಪ್ಪು:

ಬೆಲೆ ಕುಸಿತ ಕಂಡಿರುವ ಕೊತ್ತಂಬರಿ ಸೊಪ್ಪಿನ ದರದಲ್ಲಿ ಚೇತರಿಕೆ ಕಾಣುತ್ತಿಲ್ಲ. ಸಬ್ಬಕ್ಕಿ ಸೊಪ್ಪಿನ ಬೆಲೆ ಅಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹40–50, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹40ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಹಣ್ಣು ಯಥಾಸ್ಥಿತಿ:

ದೀಪಾವಳಿ ಹಬ್ಬದ ಸಮಯದಲ್ಲೂ ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ದಾಳಿಂಬೆ ಅಲ್ಪ ದುಬಾರಿಯಾಗಿದ್ದರೆ, ಕಿತ್ತಳೆ ಹಣ್ಣಿನ ದರ ಕೊಂಚ ಇಳಿಕೆಯಾಗಿದೆ. ಏಲಕ್ಕಿ ಬಾಳೆ ಹಾಗೂ ಇತರೆ ಹಣ್ಣುಗಳ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ಅಡುಗೆ ಎಣ್ಣೆ ಏರಿಕೆ:

ದೀಪಾವಳಿ ಹಬ್ಬದ ಸಮಯದಲ್ಲಿ ಅಡುಗೆ ಎಣ್ಣೆ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ದಾಖಲಿಸಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹105–108, ಪಾಮಾಯಿಲ್ ಕೆ.ಜಿ ₹85–90, ಕಡಲೆಕಾಯಿ ಎಣ್ಣೆ ಕೆ.ಜಿ ₹150–155ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಸಕ್ಕರೆ ಹೆಚ್ಚಳ:

ಹಿಂದಿನ ವಾರಕ್ಕೆ ಹೋಲಿಸಿದರೆ ಸಕ್ಕರೆ, ಗೋಧಿ ಬೆಲೆ ತಲಾ ಕೆ.ಜಿಗೆ ₹1 ಹೆಚ್ಚಳವಾಗಿದೆ. ಕಡಲೆಕಾಳು, ಹೆಸರು ಕಾಳು, ಶೇಂಗಾ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಲಸಂದೆ, ಅವರೆಕಾಳು ದರ ಅಲ್ಪ ಇಳಿದಿದೆ.

ಜೀರಿಗೆ ಇಳಿಕೆ:

ಜೀರಿಗೆ ಧಾರಣೆ ಕಳೆದ ಎರಡು ವಾರದಿಂದ ಇಳಿಕೆಯತ್ತ ಮುಖಮಾಡಿದೆ. ಕಳೆದ ವಾರ ಕೆ.ಜಿಗೆ ₹80 ಇಳಿಕೆಯಾಗಿದ್ದರೆ, ಈ ವಾರ ₹70 ಕಡಿಮೆಯಾಗಿದ್ದು, ಒಂದು ಹಂತಕ್ಕೆ ನಿಯಂತ್ರಣಕ್ಕೆ ಬರುತ್ತಿದೆ. ಬಾಡಗಿ ಮೆಣಸಿನಕಾಯಿ ಕೆ.ಜಿಗೆ ₹50 ಕಡಿಮೆಯಾಗಿದ್ದು, ಧನ್ಯ, ಬಾದಾಮಿ, ದ್ರಾಕ್ಷಿ ಬೆಲೆ ಅಲ್ಪ ಕಡಿಮೆಯಾಗಿದೆ.

ಕೋಳಿ ಯಥಾಸ್ಥಿತಿ:

ಕೋಳಿ ಮಾಂಸದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬ್ರಾಯ್ಲರ್ ಕೋಳಿ ಅಲ್ಪ ಏರಿಕೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹110, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹130ಕ್ಕೆ ಸಿಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT