ಭಾನುವಾರ, ಸೆಪ್ಟೆಂಬರ್ 19, 2021
24 °C
ಶನೈಶ್ಚರ ದೇಗುಲದಲ್ಲಿ ಕಳೆಗುಂದಿದ ಶ್ರಾವಣ ಮಾಸ ಸಂಭ್ರಮ: ಭಕ್ತರ ಸಂಖ್ಯೆ ಕ್ಷೀಣ

ಪಾವಗಡ | ‘ದೇಗುಲ’ ವ್ಯಾಪಾರಿಗಳ ಬದುಕು ಅತಂತ್ರ

ಕೆ.ಆರ್.ಜಯಸಿಂಹ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಪಟ್ಟಣದ ಶನೈಶ್ಚರ ದೇಗುಲ ರಾಜ್ಯದಲ್ಲಿಯೇ ಪ್ರಸಿದ್ಧ ಶನಿಮಹಾತ್ಮ ದೇಗುಲಗಳಲ್ಲಿ ಪ್ರಮುಖವಾದುದು. ದೇಗುಲಕ್ಕೆ ನಿತ್ಯ ಮತ್ತು ವಿಶೇಷ ಸಂದರ್ಭಗಳಲ್ಲಿ ಭಕ್ತರು ಗಣನೀಯ ಸಂಖ್ಯೆಯಲ್ಲಿ ಬರುವರು. ಇಡೀ ಶ್ರಾವಣ ಮಾಸದಲ್ಲಿ ದೇಗಲ ಭಕ್ತರಿಂದ ತುಂಬಿ ತುಳುಕುತ್ತದೆ.

ದೇವಾಲಯ ಸುತ್ತಲಿನ ಹಲವು ಬೀದಿ ಬದಿ ವ್ಯಾಪಾರಿಗಳು ಶ್ರಾವಣ ಮಾಸದಲ್ಲಿ ಇಡೀ ವರ್ಷದ ಬದುಕು ಸಾಗಿಸಲು ಅಗತ್ಯವಾದಷ್ಟು ದುಡಿಮೆಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ದೇಗುಲಕ್ಕೆ ಬರುವ ಭಕ್ತರು ನಡೆಸುವ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದ ಸಾವಿರಾರು ವ್ಯಾಪಾರಿಗಳ ಬದುಕು  ಡೋಲಾಯಮಾನವಾಗಿದೆ. ದೇಗುಲದ ಆದಾಯವೂ ಕಡಿಮೆಯಾಗಿದೆ.

ಶ್ರಾವಣ ಆರಂಭವಾಗುವ ತಿಂಗಳ ಮುನ್ನ ಆಟಿಕೆಗಳು, ಪೂಜಾ ಸಾಮಗ್ರಿ, ತೆಂಗಿನ ಕಾಯಿ, ಬೆಂಡು– ಬತ್ತಾಸು ಇತ್ಯಾದಿ ತಿಂಡಿ ತಿನಿಸುಗಳು, ಪ್ರಸಾದ ಮಾರುವವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಪ್ರತಿ ಶನಿವಾರ ವ್ಯಾಪಾರಿಗಳಿಗೆ ಉತ್ತಮ ಆದಾಯವಾಗುತ್ತದೆ. ಭಕ್ತರು ಶುಕ್ರವಾರ ಪಟ್ಟಣಕ್ಕೆ ಬಂದು ಶನಿವಾರ ಶನೈಶ್ಚರ ದೇವರ ಪೂಜೆ ಮುಗಿಸಿಕೊಂಡು ಭಾನುವಾರ ಭಕ್ತರು ಮರಳುತ್ತಿದ್ದರು. ಹೀಗಾಗಿ, ಪಟ್ಟಣದ ಹೋಟೆಲ್, ವಸತಿ ನಿಲಯಗಳು, ಅಂಗಡಿಗಳ ಮಾಲೀಕರಿಗೂ ಹೆಚ್ಚಿನ ಲಾಭವಾಗುತ್ತಿತ್ತು.

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಒಂದು ತಿಂಗಳು ಕಷ್ಟಪಟ್ಟು ವ್ಯಾಪಾರ ಮಾಡಿದರೆ ಇಡೀ ವರ್ಷ ಜೀವನ ನಡೆಸಲು ಬೇಕಿರುವ ಸಂಪನ್ಮೂಲ ಕ್ರೋಡೀಕರಣವಾಗುತ್ತಿತ್ತು. ಆದರೆ, ಕೋವಿಡ್– 19ನಿಂದಾಗಿ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. 

ಕಳೆದ ಶನಿವಾರ (ಜು.25) ಸುಮಾರು 1 ಸಾವಿರ, ಎರಡನೇ ಶನಿವಾರ 2 (ಆ.1) ಸಾವಿರ ಮಂದಿ ದೇಗುಲಕ್ಕೆ ಭೇಟಿ ಕೊಟ್ಟಿದ್ದರು. ಈ ಬಾರಿ ಎರಡು ವಾರಗಳಲ್ಲಿ ಕೇವಲ ₹ 3ಲಕ್ಷದಿಂದ ₹4 ಲಕ್ಷ ಮಾತ್ರ ದೇಗುಲಕ್ಕೆ ಆದಾಯ ಬಂದಿದೆ.

ಶ್ರಾವಣ ಮಾಸದ ಆದಾಯದಲ್ಲಿ ಶನೈಶ್ಚರ ದೇಗುಲದ ಖರ್ಚು ವೆಚ್ಚಗಳನ್ನು ನಿರ್ವಹಿಸಬಹುದಿತ್ತು. ಕಳೆದ ಬಾರಿ ಶ್ರಾವಣದಲ್ಲಿ ವಿವಿಧ ಪೂಜೆಗಳಿಗೆ ಭಕ್ತರು ಖರೀದಿಸಿದ ಟಿಕೆಟ್‌ಗಳಿಂದ ಸುಮಾರು ₹ 50 ಲಕ್ಷ, ಹುಂಡಿಯಿಂದ ₹40 ಲಕ್ಷ ಬಂದಿತ್ತು. ದೀಕ್ಷಾ ಮಂಟಪದ ಹರಾಜಿನಿಂದ ₹70 ಲಕ್ಷದಿಂದ 80 ಲಕ್ಷ ಆದಾಯ ಇತ್ತು.

ಈ ಹಣದಿಂದ ಇಡೀ ವರ್ಷ ಸಿಬ್ಬಂದಿ ವೇತನ, ವಿದ್ಯುತ್ ಬಿಲ್, ಸಿಬ್ಬಂದಿ ಪಿ.ಎಫ್ ಇತ್ಯಾದಿ ಖರ್ಚುಗಳನ್ನು ನಿರ್ವಹಿಸಬಹುದಿತ್ತು. ಒಂದು ತಿಂಗಳಿಗೆ ₹20 ಲಕ್ಷದಿಂದ ₹25 ಲಕ್ಷ ಖರ್ಚು ದೇಗುಲಕ್ಕಿದೆ. ಈ ಬಾರಿ ಆದಾಯ ಬರದಿರುವ ಕಾರಣ ನಿರ್ವಹಣೆ ದೇಗುಲ ಸಮಿತಿ ಪದಾಧಿಕಾರಿಗಳಿಗೆ ತಲೆನೋವಾಗಿದೆ.

ವರ್ಷಕ್ಕೆ 1.6 ಲಕ್ಷ ಮಂದಿ ದೀಕ್ಷೆ ತೆಗೆಸಿಕೊಳ್ಳುತ್ತಿದ್ದರು. ಇವರಲ್ಲಿ ಸುಮಾರು 70 ಸಾವಿರ ಮಂದಿಗೆ ಶ್ರಾವಣ ಮಾಸದಲ್ಲಿಯೇ ದೀಕ್ಷೆ ಕೊಡುತ್ತಿದ್ದರು. ದೀಕ್ಷಾ ಮಂಟಪದಲ್ಲಿ ಶೇಖರಣೆ ಆಗುತ್ತಿದ್ದ ಕೂದಲನ್ನು ಹರಾಜು ಮಾಡಲಾಗುತ್ತಿತ್ತು. ಈ ಹರಾಜಿನಿಂದ ಬಂದ ಹಣವನ್ನು ಅನ್ನ ದಾಸೋಹಕ್ಕಾಗಿ ಬ್ಯಾಂಕ್‌ನಲ್ಲಿ ಹಣ ಇಡಲಾಗುತ್ತಿತ್ತು. ಅದರಿಂದ ಬಂದ ಬಡ್ಡಿಯಲ್ಲಿ
ಭಕ್ತರಿಗೆ ಪ್ರಸಾದ ಕೊಡಲಾಗುತ್ತಿದೆ. ಆದ್ದರಿಂದ ಅನ್ನ ದಾಸೋಹಕ್ಕೆ ಸಮಸ್ಯೆಯಿಲ್ಲ. ಇದೇ ರೀತಿ ದೇಗುಲ ನಿರ್ವಹಣೆಗೂ ನಿಧಿ ಸ್ಥಾಪಿಸಿ ಸಂದಿಗ್ಧ ಸ್ಥಿತಿಯಲ್ಲಿ ದೇವಸ್ಥಾನ ನಿರ್ವಹಣೆಗೆ ಸಮಸ್ಯೆ ಆಗದಂತೆ ನೊಡಿ
ಕೊಳ್ಳುವ ಬಗ್ಗೆ ಪದಾಧಿಕಾರಿಗಳು ಚಿಂತಿಸುತ್ತಿದ್ದಾರೆ.

ದೇವಸ್ಥಾನ ನಿರ್ವಹಣೆ ಜತೆಗೆ, ದೇಗುಲಕ್ಕೆ ಸೇರಿದ ಕಾಲೇಜು, ವಸತಿ ನಿಲಯ ಇತರೆ ಸಂಸ್ಥೆಗಳ ನಿರ್ವಹಣೆಯೂ ಸವಾಲಿನ ಸಂಗತಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು