ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ | ವಿದ್ಯಾರ್ಥಿಗಳ ಅನ್ನ ಕಸಿಯುವ ಪುಡಿ ರೌಡಿಗಳು: ಶಾಸಕ ಎಚ್.ವಿ. ವೆಂಕಟೇಶ್

ದೂರು ನೀಡುವಂತೆ ಅಧಿಕಾರಿಗಳಿಗೆ ಶಾಸಕ ಎಚ್.ವಿ. ವೆಂಕಟೇಶ್ ಸೂಚನೆ
Published 10 ಜುಲೈ 2024, 14:23 IST
Last Updated 10 ಜುಲೈ 2024, 14:23 IST
ಅಕ್ಷರ ಗಾತ್ರ

ಪಾವಗಡ: ‘ಬಿಳಿ ಬಟ್ಟೆ ಧರಿಸಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಅನ್ನ ಕಸಿಯುವ ಪುಡಿ ರೌಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿ’ ಎಂದು ಶಾಸಕ ಎಚ್.ವಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ವಿವಿಧ ವಸತಿ ನಿಲಯಗಳಿಗೆ ಹೋಗಿ ಬಿಳಿ ಬಟ್ಟೆ ಧರಿಸಿದ ಕೆಲ ಪುಡಿ ರೌಡಿಗಳು ವಿದ್ಯಾರ್ಥಿಗಳ ಆಹಾರವನ್ನು ಕಸಿಯುತ್ತಿದ್ದಾರೆ ಎಂಬ ದೂರುಗಳಿವೆ. ಇಂತಹವರ ವಿರುದ್ಧ ಇಲಾಖಾ ಮುಖ್ಯಸ್ಥರು ದೂರು ನೀಡಬೇಕು ಎಂದು ತಿಳಿಸಿದರು.

ತಾಲ್ಲೂಕಿನ 183 ಶಾಲಾ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲವಾಗಿದ್ದು, ನೆಲಸಮಗೊಳಿಸಬೇಕಿದೆ. ಶಾಲೆಗಳಿಗೆ ಹೋಗಿ ಬರಲು ಅಧಿಕಾರಿಗಳಿಗೆ ವಾಹನ ಸೌಲಭ್ಯವಿಲ್ಲ. 200ಕ್ಕೂ ಹೆಚ್ಚಿನ ಶಿಕ್ಷಕರ ಹುದ್ದೆ ಖಾಲಿ ಇವೆ ಎಂದು ಬಿಇಒ ಇಂದ್ರಾಣಮ್ಮ ಸಮಸ್ಯೆ ಬಗ್ಗೆ ತಿಳಿಸಿದರು.

ಮಧ್ಯಾಹ್ನವಾದರೂ ಶಿಕ್ಷಕರು ಪಟ್ಟಣದಲ್ಲಿಯೇ ಕಾಣಿಸುತ್ತಿರುತ್ತಾರೆ. ಸಕಾಲಕ್ಕೆ ಶಾಲೆಗೆ ಹೋಗದ, ಅನಧಿಕೃತವಾಗಿ ಗೈರಾಗುತ್ತಿರುವ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಶಾಸಕರು ಬಿಇಒ ಅವರಿಗೆ ಸೂಚಿಸಿದರು.

ತಾಲ್ಲೂಕಿಗೆ 10 ಸರ್ಕಾರಿ ಬಸ್ ಮಂಜೂರು ಮಾಡುವಂತೆ ತಿಳಿಸಲಾಗಿದೆ. ಚಿತ್ರದುರ್ಗ ವಿಭಾಗದಿಂದ ತುಮಕೂರು ವಿಭಾಗಕ್ಕೆ ಶೀಘ್ರ ಘಟಕವನ್ನು ವರ್ಗಾಯಿಸುವಂತೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಬೆಸ್ಕಾಂ ಲೈನ್‌ಮನ್‌ಗಳಿಗೆ ಕಿರಿಯ ಎಂಜಿನಿಯರ್ ಪ್ರಭಾರ ವಹಿಸಿ ವ್ಯವಸ್ಥೆ ಹಾಳುಗೆಡವಲಾಗುತ್ತಿದೆ. ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಬಗ್ಗೆ ರೈತರಿಂದ ದೂರು ಬರುತ್ತಿವೆ. ವ್ಯವಸ್ಥೆ ಸರಿಪಡಿಸಿ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಮನಬಂದಂತೆ ಬಡ ಜನರಿಂದ ಹಣ ಸುಲಿಯಲಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು.

ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚದಂತೆ ಕ್ರಮವಹಿಸಿ ಎಂದರು.

ತಾಲ್ಲೂಕು ಪಂಚಾಯಿತಿ ತಹಶೀಲ್ದಾರ್ ವರದರಾಜು, ಇಒ ಜಾನಕಿರಾಂ, ಅನಿಲ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್, ಸಿಡಿಪಿಒ ಸುನಿತಾ, ಮಲ್ಲಿಕಾರ್ಜುನ, ಯಮುನಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT